Advertisement

ಮೋದಿಯಿಂದ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ

08:34 AM Jun 02, 2020 | Suhan S |

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎರಡನೇ ಅವಧಿಯಲ್ಲಿ ಒಂದು ವರ್ಷ ಪೂರ್ಣಗೊಳಿಸಿದ್ದು, ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ನೀಡಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಿಂದಿನ ಅವಧಿಯ ಐದು ವರ್ಷ ಹಾಗೂ ಪ್ರಸ್ತುತದ ಒಂದು ವರ್ಷದ ಆಡಳಿತದಲ್ಲಿ ಒಂದೇ ಒಂದು ಹಗರಣ ಅಥವಾ ಆಡಳಿತಕ್ಕೆ ಕಪ್ಪುಚುಕ್ಕೆ ಇಲ್ಲವೇ ಇಲ್ಲ. ಕೇಂದ್ರ ಸರಕಾರ ಕಳೆದ ಆರು ವರ್ಷಗಳಲ್ಲಿ ಅನೇಕ ಐತಿಹಾಸಿಕ ಹಾಗೂ ದಾಖಲಾರ್ಹ ತೀರ್ಮಾನಗಳನ್ನು ತೆಗೆದುಕೊಂಡಿದೆ. ತ್ರಿವಳಿ ತಲಾಖ್‌ ರದ್ಧತಿ, ಸಂವಿಧಾನ 370 ಕಲಂ ರದ್ದು, ಪೌರತ್ವ ಕಾಯ್ದೆ ತಿದ್ದುಪಡಿ, ಒಂದು ದೇಶ ಒಂದು ತೆರಿಗೆ(ಜಿಎಸ್‌ಟಿ), ಒಂದು ದೇಶ ಒಂದು ಪಡಿತರ ಚೀಟಿ, ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ, ರೈತ ಸಮ್ಮಾನ ಯೋಜನೆ ಹೀಗೆ ಅನೇಕ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಲ್ಲದೆ ಯಶಸ್ವಿ ಅನುಷ್ಠಾನ ತೋರಲಾಗಿದೆ ಎಂದರು.

ಕೊರೊನಾದಿಂದ ಮುಂದುವರಿದ ಅಮೆರಿಕಾ, ಚೀನಾ, ಫ್ರಾನ್ಸ್‌, ಇಟಲಿ, ರಷ್ಯಾದಂತಹ ದೇಶಗಳೇ ತತ್ತರಿಸಿವೆ. ಆದರೆ, 130 ಕೋಟಿ ಜನಸಂಖ್ಯೆ ಹೊಂದಿದ ಭಾರತದಲ್ಲಿ ಲಾಕ್‌ಡೌನ್‌ನಂತಹ ಗಟ್ಟಿ ನಿಲುವಿನ ಮೂಲಕ ಕೊರೊನಾವನ್ನು ಕಟ್ಟಿ ಹಾಕುವಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದೇವೆ. ಕೃಷಿ, ಉದ್ಯಮ, ಸೇವಾ ವಲಯ ಹೀಗೆ ಎಲ್ಲ ವಲಯಗಳ ಮೇಲೂ ಕೋವಿಡ್ ಕೆಟ್ಟ ಪರಿಣಾಮ ಬೀರಿದೆ. ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಎಲ್ಲ ವಲಯಕ್ಕೂ ಕೇಂದ್ರ ನೆರವನ್ನು ಘೋಷಿಸಿದೆ ಎಂದರು.

ರಾಜ್ಯಕ್ಕೂ ಸುಮಾರು 17,249 ಕೋಟಿ ರೂ. ನೆರವು ನೀಡಿದ್ದು, ಪ್ರವಾಹ ಪರಿಹಾರಕ್ಕೆ 1,869 ಕೋಟಿ ರೂ. ನೀಡಿತ್ತು. 3085 ಕೋಟಿ ರೂ. ವೆಚ್ಚದಲ್ಲಿ ಹೊಸ ರೈಲ್ವೆ ಮಾರ್ಗಗಳಿಗೆ ಹಣ ನೀಡಲಾಗುತ್ತಿದೆ. ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡಿದ್ದರೂ ವಿಪಕ್ಷಗಳು ಕೇಂದ್ರ ಸರಕಾರವನ್ನು ಟೀಕೆ ಮಾಡುತ್ತಿವೆ. ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅಪ್ರಬುದ್ಧ ನಾಯಕರಂತೆ ಹೇಳಿಕೆ ನೀಡುತ್ತಿದ್ದಾರೆ. ಸಂಕಷ್ಟ ಸ್ಥಿತಿಯಲ್ಲಿ ವಿಪಕ್ಷವಾಗಿ ಸರಕಾರಕ್ಕೆ ರಚನಾತ್ಮಕ ಸಲಹೆ ನೀಡುವ ಬದಲು ಟೀಕೆಗಾಗಿ ಇಲ್ಲವೆ ಪ್ರಚಾರಕ್ಕಾಗಿ ಆರೋಪ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಕೋವಿಡ್ ದಂತಹ ಸಂಕಷ್ಟ ಸ್ಥಿತಿಯಿಂದ ಹಿಂದಿನ ಯುಪಿಎ ಸರಕಾರ ಇದ್ದರೆ ದೇಶದ ಗತಿ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗದಾಗುತ್ತಿತ್ತು ಎಂದರು. ರಾಜ್ಯ ಸರಕಾರ ಕೂಡ ಕೊರೊನಾ ಸಂಕಷ್ಟ ಪರಿಹಾರಕ್ಕೆ 1,610ಕೋಟಿ ರೂ. ಪ್ಯಾಕೇಜ್‌ ಅನ್ನು ಮೊದಲ ಹಂತದಲ್ಲಿ ಘೋಷಣೆ ಮಾಡಿದ್ದು, ಎರಡನೇ ಹಂತದಲ್ಲಿ 662 ಕೋಟಿ ರೂ. ಘೋಷಿಸಲಾಗಿದೆ. ರಾಜ್ಯದಲ್ಲಿ ಶೇ.80 ಉದ್ಯಮಗಳು ಕಾರ್ಯಾರಂಭ ಮಾಡಿವೆ. ಅನೇಕ ಕಡೆ ಕಚ್ಚಾ ಸಾಮಗ್ರಿಗಳ ಕೊರತೆ ಇದೆ. ಜತೆಗೆ ಅನ್ಯ ರಾಜ್ಯಗಳ ಕಾರ್ಮಿಕರು ಮರುವಲಸೆ ಹೋಗಿದ್ದು, ಒಂದೆರಡು ತಿಂಗಳಲ್ಲಿ ಮತ್ತೆ ವಲಸೆ ಬರುವ ವಿಶ್ವಾಸವಿದೆ. ಎಂಎಸ್‌ಎಂಇ ವಲಯಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿಕೆ ಕುರಿತಾಗಿ ಕೇಂದ್ರ ಸಚಿವರಿಗೆ ತಾವು ಮನವಿ ಮಾಡಿದ್ದಾಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next