Advertisement

ನ್ಯಾಯಬೆಲೆ ಅಂಗಡಿಗಳಲ್ಲೇ ಪಡಿತರ ಚೀಟಿ ತಿದ್ದುಪಡಿ!

03:23 PM Jul 29, 2023 | Team Udayavani |

ಚಾಮರಾಜನಗರ: ರೇಷನ್‌ ಕಾರ್ಡ್‌ಗೆ ಡಿಬಿಟಿ ನಗದು ಹಣ ಬಾರದೆ ಇರಲು ಕಾರಣ ತಿಳಿಯ ಬೇಕೇ? ಬ್ಯಾಂಕ್‌ ಖಾತೆ ತಪ್ಪಾದ ಬಗ್ಗೆ ಮಾಹಿತಿ ತಿಳಿಯಬೇಕೇ? ರೇಷನ್‌ ಕಾರ್ಡ್‌ನಲ್ಲಿ ಕುಟುಂಬ ಮುಖ್ಯಸ್ಥರನ್ನು ಬದಲಾಯಿಸಬೇಕೇ?. ಕೂಡಲೇ ನಿಮ್ಮ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ!.

Advertisement

ಹೌದು, ಈಗ ಈ ಎಲ್ಲಾ ತಿದ್ದುಪಡಿ ಮಾಡಿಸಲು, ಆಹಾರ ಇಲಾಖೆಗಾಗಲೀ, ಸೇವಾ ಕೇಂದ್ರಗಳಿಗಾಗಲೀ ಅಲೆದು ದೊಡ್ಡ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ರೇಷನ್‌ ಕಾರ್ಡ್‌ದಾರರು ಪಡಿತರ ಪಡೆಯುವ ಆಯಾ ನ್ಯಾಯ ಬೆಲೆ ಅಂಗಡಿಯಲ್ಲೇ ಈ ಎಲ್ಲಾ ಮಾಹಿತಿ ತಿಳಿಯುವ, ತಿದ್ದುಪಡಿ ಮಾಡಿಸುವ ಸೌಲಭ್ಯವನ್ನು ಆಹಾರ ಇಲಾಖೆ ಕಲ್ಪಿಸಿದೆ.

ಸುತ್ತೋಲೆ: ಈ ಸಂಬಂಧ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಯೋಗಾನಂದ ಅವರು ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ತಪ್ಪಾಗಿ ಜೋಡಣೆ: ಅನ್ನಭಾಗ್ಯ ಯೋಜನೆಡಿ 5 ಕೆ.ಜಿ.ಹೆಚ್ಚುವರಿ ಅಕ್ಕಿ ಬದಲಾಗಿ ನಗದು ಹಣ ಯಾರ ಖಾತೆಗೆ ಡಿಬಿಟಿ ಮುಖಾಂತರ ಪಾವತಿಯಾಗದಿದ್ದರೆ, ಅದಕ್ಕೆ ಮೂರು ಕಾರಣಗಳಿವೆ. ಆ ಮಹಿಳೆಯರ ಬ್ಯಾಂಕ್‌ ಖಾತೆ ಸ್ಥಗಿತ ಅಥವಾ ನಿಷ್ಕ್ರಿಯವಾಗಿರ ಬಹುದು, ಆಧಾರ್‌ ಸಂಖ್ಯೆ ಬ್ಯಾಂಕ್‌ ಖಾತೆಗೆ ಜೋಡಣೆ ಆಗದಿರುವುದು, ಆಧಾರ್‌ ಸಂಖ್ಯೆ ಬ್ಯಾಂಕ್‌ ಖಾತೆಗೆ ತಪ್ಪಾಗಿ ಜೋಡಣೆಯಾಗಿರಬಹುದು.

ಫ‌ಲಾನುಭವಿಗಳಿಗೆ ಮಾಹಿತಿ ನೀಡಬೇಕು: ಇಂಥವರ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡಲು ಸಾಧ್ಯವಾಗಲ್ಲ. ಇಂತಹ ಪಡಿತರ ಚೀಟಿದಾರರ ವಿವರವನ್ನು ನ್ಯಾಯಬೆಲೆ ಅಂಗಡಿವಾರು, ರೇಷನ್‌ಕಾರ್ಡ್‌ ನಂಬರ್‌ವಾರು ಪಟ್ಟಿಯನ್ನು ನ್ಯಾಯಬೆಲೆ ಅಂಗಡಿ ವಿತರಕರಿಗೆ ಈಗಾಗಲೇ ನೀಡಲಾಗಿದೆ. ನ್ಯಾಯಬೆಲೆ ಅಂಗಡಿ ಮುಂದೆ ಈ ಪಟ್ಟಿ ಪ್ರದರ್ಶಿಸಲು ಹಾಗೂ ಈ ಬ್ಯಾಂಕ್‌ ಖಾತೆ ತಪ್ಪಾಗಿರುವ ಬಗ್ಗೆ ಪಡಿತರ ಚೀಟಿದಾರರಿಗೆ ತಿಳಿವಳಿಕೆ ಮೂಡಿಸಲು ನ್ಯಾಯಬೆಲೆ ಅಂಗಡಿ ವಿತರಕರಿಗೆ ತಿಳಿಸಲಾಗಿದೆ. ಹಾಗೆಯೇ ಬ್ಯಾಂಕ್‌ ಖಾತೆಗಳನ್ನು ಸರಿಪಡಿಸಿಕೊಂಡ ನಂತರ ಮತ್ತೆ ನ್ಯಾಯಬೆಲೆ ಅಂಗಡಿ ವಿತರಕರಿಗೆ ಮಾಹಿತಿ ನೀಡಬೇಕು. ಕೂಡಲೇ ಸಂಬಂಧಪಟ್ಟ ಬ್ಯಾಂಕ್‌ ಶಾಖೆಗೆ ತೆರಳಿ ಬ್ಯಾಂಕ್‌ ಖಾತೆ ಸರಿಪಡಿಸಿಕೊಂಡಲ್ಲಿ ಆಗಸ್ಟ್‌ ತಿಂಗಳ ಡಿಬಿಟಿ ಹಣ ಪಾವತಿಗೆ ಕ್ರಮ ವಹಿಸ ಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.

Advertisement

ಉಚಿತವಾಗಿ ನೋಂದಾಯಿಸಲು ಸರ್ಕಾರ ಸೂಚನೆ: ಪಡಿತರ ಚೀಟಿದಾರ ಸದಸ್ಯರು ಮರಣ ಹೊಂದಿದ ವ್ಯಕ್ತಿ ಹೆಸರನ್ನು ತೆಗೆಯಲು ಹಾಗೂ ಕುಟುಂಬದ ಮುಖ್ಯ ಸ್ಥರನ್ನು ಆಯ್ಕೆ ಮಾಡಲು ಅಥವಾ ಕುಟುಂಬದ ಮುಖ್ಯಸ್ಥರನ್ನು ಬದಲಾಯಿಸಲು ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮೂಲಕ ಸರಿಪಡಿಸಿಕೊಳ್ಳಲು ಹಾಗೂ ಈ ಕಾರ್ಯವನ್ನು ಉಚಿತವಾಗಿ ಮಾಡುವಂತೆ ನ್ಯಾಯಬೆಲೆ ಅಂಗಡಿ ವಿತರಕರಿಗೆ ಸೂಚಿಸಲಾಗಿದೆ. ಈ ಎಲ್ಲಾ ಕೆಲಸಗಳಿಗಾಗಿ ಜನ ಆಹಾರ ಇಲಾಖೆ ಕಚೇರಿ ಮುಂದೆ, ತಾಲೂ ಕು ಕಚೇರಿ ಮುಂದೆ, ಸೇವಾ ಕೇಂದ್ರಗಳ ಮುಂದೆ ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿದ್ದರು. ಸಾರ್ವಜನಿಕರಿಗೆ ಆಗುತ್ತಿದ್ದ ಕಷ್ಟ ತಪ್ಪಿಸಲು ಆಹಾರ ಇಲಾಖೆ ನ್ಯಾಯಬೆಲೆ ಅಂಗಡಿಗಳಲ್ಲೇ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಿದೆ.

ಆಧಾರ್‌ ಲಿಂಕ್‌ಗಾಗಿ ಬ್ಯಾಂಕ್‌ ಮುಂದೆ ನೂಕುನುಗ್ಗಲು: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಬದಲು ನಗದು ಹಣವನ್ನು ಪಡಿತರದಾರರ ಬ್ಯಾಂಕ್‌ ಖಾತೆಗೆ ನೇರ ಹಣ ವರ್ಗಾವಣೆ (ಡಿಬಿಟಿ) ಮಾಡುತ್ತಿದೆ. ಆದರೆ ಅನೇಕ ಪಡಿತರದಾರರ ಬ್ಯಾಂಕ್‌ ಖಾತೆ ನಿಷ್ಕ್ರಿಯವಾಗಿರುವುದರಿಂದ ಹಣ ತೆಗೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂಥವರು ಈಗ ತಮ್ಮ ಖಾತೆಗೆ ಆಧಾರ್‌ ಸೀಡಿಂಗ್‌ ಮಾಡಿಸಲು ಬ್ಯಾಂಕ್‌ಗಳಿಗೆ ಧಾವಿಸುತ್ತಿದ್ದು, ಬಹುತೇಕ ಬ್ಯಾಂಕ್‌ ಗಳ ಮುಂದೆ ನೂಕು ನುಗ್ಗಲು ಉಂಟಾಗುತ್ತಿದ್ದು ಜನ ಬೆಳಗ್ಗೆಯಿಂದ ಸಂಜೆವರೆಗೂ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆಹಾರ ಇಲಾಖೆ ವೆಬ್‌ಸೈಟ್‌ನಲ್ಲಿ ಡಿಬಿಟಿ ಹಣ ಇಂಥ ಬ್ಯಾಂಕ್‌ ಖಾತೆಗೇ ಹೋಗಿರುವುದನ್ನು ತಿಳಿಯಬಹುದಾಗಿದೆ. ಇದನ್ನು ತಿಳಿದುಕೊಂಡ ನಂತರ ಗ್ರಾಹಕರು ಆ ಬ್ಯಾಂಕ್‌ ನಲ್ಲಿ ತಮ್ಮ ಖಾತೆಯನ್ನು ಮರು ಚಾಲನೆಗೊಳಿಸುತ್ತಿದ್ದಾರೆ. ಇದಲ್ಲದೇ ಗೃಹಲಕ್ಷ್ಮಿಯೋಜನೆ ಹಣ ಜಮೆ ಆಗಲೂ ಆಧಾರ್‌ ಸೀಡಿಂಗ್‌ ಆಗಿರುವ ಬ್ಯಾಂಕ್‌ ಖಾತೆ ಬೇಕು. ಹೀಗಾಗಿ ಯಾವಾಗಲೋ ಅಕೌಂಟ್‌ ತೆರೆದು, ಮರೆತಿದ್ದ ಬ್ಯಾಂಕ್‌ ಖಾತೆ ಮರು ಚಾಲನೆಗೊಳಿಸಲು ಜನ ಬ್ಯಾಂಕ್‌ಗಳಿಗೆ ದೌಡಾಯಿಸುತ್ತಿದ್ದಾರೆ.

ಧರ್ಮಸ್ಥಳ ಸಂಘದ ಸದಸ್ಯರಾಗಿದ್ದ ಮಹಿಳೆಯ ರೆಲ್ಲರೂ ನಗರದ ಯೂನಿಯನ್‌ ಬ್ಯಾಂಕ್‌ ನಲ್ಲಿ ಖಾತೆ ತೆರೆದಿದ್ದು, ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಹಿಳೆಯರು ನಗರದ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಅಷ್ಟು ದೂರದಿಂದ ಬಂದ ಮಹಿಳೆಯರು ಬ್ಯಾಂಕ್‌ ಮುಂದೆ ಕ್ಯೂ ನಲ್ಲಿ ಕಾದು ನಿಂತಿದ್ದು ಕಂಡು ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next