ಹೊಸದಿಲ್ಲಿ: ಚೀನಾ ಮೂಲದ 106 ಮೊಬೈಲ್ ಅಪ್ಲಿಕೇಷನ್ ಗಳನ್ನು ಭಾರತ ಸರಕಾರ ಬ್ಯಾನ್ ಮಾಡಿರುವುದರಿಂದ ಚೀನಾ ಪತರುಗುಟ್ಟಿದೆ.
ಚೀನಾ ಕಂಪೆನಿಗಳ ಒತ್ತಡಕ್ಕೆ ಕಂಗಾಲಾಗಿರುವ ಝಿನ್ ಪಿಂಗ್ ಸರಕಾರ ಇದೀಗ ಭಾರತಕ್ಕೆ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಒತ್ತಡ ಹೇರಲಾರಂಭಿಸಿದೆ.
ಭಾರತದಲ್ಲಿರುವ ತನ್ನ ರಾಯಭಾರಿಯ ಮೂಲಕ ಹೇಳಿಕೆ ಕೊಡಿಸಿರುವ ಚೀನಾ, ಭಾರತ ಈಗಿಂದೀಗಲೇ App ಬ್ಯಾನ್ ಮಾಡಿರುವ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದು ಫರ್ಮಾನು ಹೊರಡಿಸಿದೆ.
ತನ್ನ ದೇಶದ ಕಂಪೆನಿಗಳಿಗೆ ಸೇರಿರುವ ಮೊಬೈಲ್ ಅಪ್ಲಿಕೇಷನ್ ಗಳನ್ನು ಭಾರತ ನಿಷೇಧಿಸಿರುವ ಕ್ರಮವನ್ನು ‘ಭಾರತದ ತಪ್ಪು ಕ್ರಮ’ ಎಂದು ಚೀನಾ ಬಣ್ಣಿಸಿದೆ.
Related Articles
ಮತ್ತು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೇಳಿಕೆ ನೀಡಿರುವ ಕೆಂಪು ರಾಷ್ಟ್ರ, ‘ಇದೊಂದು ಉದ್ದೇಶಪೂರ್ವಕ ಹಸ್ತಕ್ಷೇಪ’ ಎಂದು ಆರೋಪಿಸಿದೆಯಲ್ಲದೆ, ‘ತನ್ನ ದೇಶದ ಕಂಪೆನಿಗಳ ಹಿತಾಸಕ್ತಿಯನ್ನು ರಕ್ಷಿಸಲು ತಾನು ಯಾವ ಕ್ರಮವನ್ನು ಕೈಗೊಳ್ಳಲೂ ಸಿದ್ಧ’ ಎಂದು ಹೇಳುವ ಮೂಲಕ ಕ್ಸಿ ಝಿನ್ ಪಿಂಗ್ ಸರಕಾರ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಪರೋಕ್ಷ ಎಚ್ಚರಿಕೆಯನ್ನು ರವಾನಿಸಿದೆ.
ಚಿನಾ ರಾಯಭಾರಿ ಕಛೇರಿಯ ವಕ್ತಾರ ಝಿ ರೋಂಗ್ ಅವರು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ, ವಿ ಚಾಟ್ ನಿಷೇಧಿಸುವ ಭಾರತ ಸರಕಾರದ ಕ್ರಮ ಏಕಪಕ್ಷೀಯದ್ದಾಗಿತ್ತು ಎಂದು ದೂರಿದ್ದಾರೆ.
ಭಾರತ ಸರಕಾರ ಕಳೆದ ತಿಂಗಳು ಜನಪ್ರಿಯ ವಿಡಿಯೋ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಒಟ್ಟು 59 ಚೀನಾ ಮೊಬೈಲ್ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿತ್ತು ಮತ್ತು ಇದಾದ ಬಳಿಕ ಕಳೆದ ಎರಡು ದಿನಗಳ ಹಿಂದೆಯಷ್ಟೇ ಮತ್ತೆ 47 ಚೀನಾ ಮೊಬೈಲ್ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡುವುದಾಗಿ ಹೇಳಿಕೆ ನೀಡಿದೆ.
ಮತ್ತು ಈ 47 ಚೀನಾ ಅಪ್ಲಿಕೇಷನ್ ಗಳ ಪಟ್ಟಿಯನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಇನ್ನಷ್ಟೇ ನೀಡಬೇಕಿದೆ. ಈ ನಡುವೆ ಚೀನಾ ತನ್ನ ದೇಶದ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಗಳ ಮೇಲಿನ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಭಾರತದ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸುತ್ತಿದೆ.
ಇನ್ನೊಂದು ಮೂಲಗಳ ಪ್ರಕಾರ ಭಾರತ ಸರಕಾರವು ಒಟ್ಟು 250 ಚೀನಾ ಮೊಬೈಲ್ ಅಪ್ಲಿಕೇಷನ್ ಗಳ ಮೇಲೆ ನಿಗಾ ಇರಿಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರ ಇದೀಗ ಕೆಂಪು ರಾಷ್ಟ್ರದ ನಿದ್ದೆಗೆಡಿಸಿದೆ.