Advertisement

ವೈದ್ಯರ ನಿರ್ಲಕ್ಷ್ಯಕ್ಕೆ ಕಾರ್ಪೊರೇಟರ್‌ ಬಲಿ

12:09 PM Dec 07, 2018 | Team Udayavani |

ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದಾಗಿ ಕಳೆದ 26 ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಸಗಾಯಪುರ ವಾರ್ಡ್‌ ಪಾಲಿಕೆ ಸದಸ್ಯ ಏಳುಮಲೈ (40) ಬುಧವಾರ ತಡರಾತ್ರಿ ನಿಧನರಾದರು. ಉಪಮೇಯರ್‌ ಆಗಿದ್ದ ರಮೀಳಾ ಉಮಾಶಂಕರ್‌ ಅವರ ಸಾವಿನ ಆಘಾತದಿಂದ ಬಿಬಿಎಂಪಿ ಹೊರಬರುವ ಮೊದಲೇ ಏಳುಮಲೈ ಅವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸಾವಿರಾರು ಜನ ಗುರುವಾರ ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು. ಬಳಿಕ ವಾರ್ಡ್‌ನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಪಿಳ್ಳಣ್ಣ ಗಾರ್ಡನ್‌ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

Advertisement

ನವೆಂಬರ್‌ 11 ರಂದು ಮೂಗಿನಲ್ಲಿ ಸಣ್ಣ ಗುಳ್ಳೆಯಾಗಿದೆ ಎಂದು ಏಳುಮಲೈ ಅವರು ಫ್ರೆಜರ್‌ಟೌನ್‌ನ ಸಂತೋಷ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ನಿಗದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅರವಳಿಕೆ (ಅನಸ್ತೇ ಶಿಯಾ) ನೀಡಿದರಿಂದ ಏಳುಮಲೈ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ ಎನ್ನಲಾಗಿತ್ತು.

ಅದಾದ ಬಳಿಕ ಆಸ್ಪತ್ರೆಯ ಸಿಬ್ಬಂದಿ ಕುಟುಂಬದವರಿಗೆ ಯಾವುದೇ ಮಾಹಿತಿ ನೀಡಿದೇ, ಅವರಿಗೆ ಹೃದಯಾಘಾತ ವಾಗಿದೆ ಎಂದು ಹೇಳಿ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದರು. ವಿಕ್ರಂ ಆಸ್ಪತ್ರೆಗೆ ಕರೆದುಕೊಂಡ ಹೋದಾಗ ಏಳುಮಲೈ ಅವರು ಕೋಮಾ ಸ್ಥಿತಿಗೆ ತಲುಪಿರುವುದು ತಿಳಿದು ಬಂತು, ಬಳಿಕ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫ‌ಲಿಸದೆ ಬುಧವಾರ ತಡರಾತ್ರಿ 1.30ರ ಸುಮಾರಿಗೆ ಕೊನೆಯುಸಿರೆಳೆದಿದ್ದು, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಹರಿದು ಬಂದ ಜನಸಾಗರ: ವಾರ್ಡ್‌ನ ಚಾರ್ಲ್ಸ್‌ ಮೈದಾನದಲ್ಲಿ ಏಳುಮಲೈ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಬೆಳಗ್ಗೆ 6 ಗಂಟೆಯಿಂದಲೇ ಸಾವಿರಾರು ಜನ ಆಗಮಿಸಿ ಅಂತಿಮ ದರ್ಶನ ಪಡೆದರು. ಏಳುಮಲೈ ಅವರು ವಾರ್ಡ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಜತೆಗೆ ಜನರ ಕಷ್ಟಗಳಿಗೆ ಶೀಘ್ರ ಸ್ಪಂದಿಸುತ್ತಿದ್ದರಿಂದ ವಾರ್ಡ್‌ನ ಜನರಿಗೆ ಅಚ್ಚುಮೆಚ್ಚಾಗಿದ್ದರು.

ಏಳುಮಲೈ ಅವರ ನಿಧನದ ಹಿನ್ನೆಲೆಯಲ್ಲಿ ಗುರುವಾರ ವಾರ್ಡ್‌ನಲ್ಲಿ ಸ್ವಯಂಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು. ಕೆಲವರ ಮನೆಗಳ ಮುಂದೆ ಫೋಟೋ ಇಟ್ಟು ದೀಪ ಹಚ್ಚಲಾಗಿತ್ತು. ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಏಳುಮಲೈ ಅವರ ಪಾರ್ಥಿವ ಶರೀರವನ್ನು ವಾರ್ಡ್‌ನಲ್ಲಿ ಮೆರವಣಿಗೆ ಮಾಡಲಾಯಿತು. ಆ ವೇಳೆ ರಸ್ತೆ ಇಕ್ಕೆಲದಲ್ಲೂ ಜನರು ನಿಂತು ಅಂತಿಮ ನಮನ ಸಲ್ಲಿಸಿದರು. ನಂತರ ಪಿಳ್ಳಣ್ಣ ಗಾರ್ಡನ್‌ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 

Advertisement

ಅಂತಿಮ ದರ್ಶನ ಪಡೆದ ಗಣ್ಯರು: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ ಸಚಿವರಾದ ರೋಷನ್‌ಬೇಗ್‌, ಎನ್‌.ಮಹೇಶ್‌, ಮೇಯರ್‌ ಗಂಗಾಂಬಿಕೆ, ಉಪಮೇಯರ್‌ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಸೇರಿ ಇನ್ನಿತರರು ಏಳುಮಲೈ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಮೇಯರ್‌ ಗಂಗಾಂಬಿಕೆ, ಶಿವರಾಜು ಬೆಳಗ್ಗೆಯೇ ಸಗಾಯಪುರಕ್ಕೆ  ತೆರಳಿ ಅಂತಿಮ ದರ್ಶನ ಮತ್ತು ಅಂತ್ಯಸಂಸ್ಕಾರದ ಎಲ್ಲ ಸಿದ್ಧತೆಯ ಉಸ್ತುವಾರಿ ವಹಿಸಿಕೊಂಡಿದ್ದರು.

ಕಾಂಗ್ರೆಸ್‌ ಕಾರ್ಯಕರ್ತ: ರಾಜಕೀಯ ಜೀವನ ಶುರುವಾದಾಗಿನಿಂದಲೂ ಏಳುಮಲೈ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದರು. ವಾರ್ಡ್‌ನಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದರು. ಆದರೆ, 2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆ ವೇಳೆ ಏಳುಮಲೈಗೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌
ನಿರಾಕರಿಸಲಾಗಿತ್ತು. ಹೀಗಾಗಿಯೇ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆನಂತರವೂ ಅವರು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

ಜೂನಿಯರ್‌ ಎಂಜಿಆರ್‌ ಎಂದೇ ಖ್ಯಾತಿ: ಮೂಲತಃ ತಮಿಳುನಾಡು ಮೂಲದವರಾದರೂ ಏಳುಮಲೈ ಹುಟ್ಟಿ ಬೆಳೆದಿದ್ದು ಸಗಾಯಪುರದಲ್ಲಿಯೇ. ತಮಿಳಿನ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌) ಅವರ ಕಟ್ಟಾ ಅಭಿಯಾನಿ ಯಾಗಿದ್ದರು. ಇದೇ ಕಾರಣದಿಂದಾಗಿಅವರ ಗೆಳೆಯರು ಹಾಗೂ ಸಗಾಯಪುರ ವಾರ್ಡ್‌ನ ಜನರು ಏಳುಮಲೈ ಅವರನ್ನು ಜೂನಿಯರ್‌ ಎಂಜಿಆರ್‌ ಅಂತಲೇ ಕರೆಯುತ್ತಿದ್ದರು ಎಂದು ಸ್ಮರಿಸುತ್ತಾ ಸಂಬಂಧಿಯೊಬ್ಬರು ಕಣ್ಣೀರು ಹಾಕಿದರು. 
 
ಮರಣ ಹೊಂದಿದ ನಾಲ್ಕನೇ ಸದಸ್ಯ ಏಳುಮಲೈ ಅವರು ಬಿಬಿಎಂಪಿಯ ಪ್ರಸಕ್ತ ಅವಧಿಯಲ್ಲಿ ಮೃತಪಟ್ಟ ನಾಲ್ಕನೇ ಪಾಲಿಕೆ ಸದಸ್ಯರಾಗಿದ್ದಾರೆ. ಈ ಹಿಂದೆ ಲಕ್ಕಸಂದ್ರ ವಾರ್ಡ್‌ನ ಮಹೇಶ್‌ಬಾಬು ಅವರು ಅಪಘಾತದಲ್ಲಿ ಮೃತಪಟ್ಟಿದ್ದರು. ಬಿನ್ನಿಪೇಟೆ ವಾರ್ಡ್‌ನ ಮಹದೇವಮ್ಮ ಅವರು ತಿರುಪತಿಗೆ ತೆರಳಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದರು. ಅಕ್ಟೋಬರ್‌ 4ರಂದು ಉಪಮೇಯರ್‌ ರಮೀಳಾ ಉಮಾಶಂಕರ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಏಳುಮಲೈ ಅವರು ನಿಧನರಾದ ಹಿನ್ನೆಲೆಯಲ್ಲಿ ಗುರುವಾರ ಬಿಬಿಎಂಪಿ ಎಲ್ಲ ಕಚೇರಿಗಳಿಗೆ ರಜೆ ಘೋಷಿಸುವ ಮೂಲಕ ಅವರಿಗೆ ಗೌರವ ಸೂಚಿಸಲಾಯಿತು. 

ಏಳುಮಲೈ ಅವರು ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದರು. ಆದರೆ, ಪಕ್ಷದಿಂದ ಟಿಕೆಟ್‌ ದೊರೆಯದ ಹಿನ್ನೆಲೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಬಳಿಕವೂ ಅವರು ಕಾಂಗ್ರೆಸ್‌ ಪರವಾಗಿಯೇ ಕೆಲಸ ಮಾಡಿದ್ದಾರೆ. ಅವರ ಸಾವಿನ ಕಾರಣದ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. 
  ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ

ಏಳುಮಲೈ ಅವರ ಮೂಗಿನ ಗುಳ್ಳೆ ಶಸ್ತ್ರಚಿಕಿತ್ಸೆ ನಡೆಸಿದ ಸಂತೋಷ್‌ ಆಸ್ಪತ್ರೆಯಲ್ಲಿ ಆರಂಭದಿಂದ ನೀಡಿದ ಚಿಕಿತ್ಸೆಯ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಾಲಿಕೆ ಸದಸ್ಯರ ಸಾವಿಗೆ ಕಾರಣವಾದ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳನ್ನು ಖುದ್ದು ಕೋರಲಾಗುವುದು.
 ಗಂಗಾಂಬಿಕೆ, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next