Advertisement

ಪಾಲಿಕೆ ಶಾಲೆಗಳು ಮೈಕ್ರೋಸಾಫ್ಟ್ ತೆಕ್ಕೆಗೆ

11:58 AM Sep 02, 2018 | |

ಬೆಂಗಳೂರು: ನಗರದಲ್ಲಿನ ಎಲ್ಲ ಬಿಬಿಎಂಪಿ ಶಾಲೆ, ಕಾಲೇಜುಗಳನ್ನು ಪ್ರತಿಷ್ಠಿತ ಮೈಕ್ರೋಸಾಫ್ಟ್ ಸಂಸ್ಥೆ ದತ್ತು ಪಡೆಯುತ್ತಿದೆ.
ಪಾಲಿಕೆ ಶಾಲೆ, ಕಾಲೇಜುಗಳಿಗೆ ಹೊಸ ರೂಪ ಕೊಡಲು ಮೈಕ್ರೋಸಾಫ್ಟ್ ಸಂಸ್ಥೆ “ರೋಷಣಿ’ ಯೋಜನೆಯಡಿ ನೀಲನಕ್ಷೆ ಸಿದ್ಧಪಡಿಸಿದ್ದು, ಹದಿನೈದು ಸಾವಿರಕಕೂ ಹೆಚ್ಚು ಮಕ್ಕಳಿಗೆ ಅನುಕೂಲವಾಗಲಿದೆ.

Advertisement

ಖಾಸಗಿ ಶಾಲೆ, ಕಾಲೇಜುಗಳಲ್ಲಿ ನೀಡುವ ಗುಣಮಟ್ಟದ ಶಿಕ್ಷಣ, ಪಾಲಿಕೆ ಶಾಲೆ ವಿದ್ಯಾರ್ಥಿಗಳಿಗೂ ದೊರೆಯುವಂತೆ ಮಾಡುವುದು ಹಾಗೂ ಮಕ್ಕಳು ಶಿಕ್ಷಣದ ಜತೆ ಜತೆಗೆ ಕ್ರೀಡೆ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಕಂಪ್ಯೂಟರ್‌ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ರೋಷಣಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಈಗಾಗಲೇ ದೇಶದ 11 ರಾಜ್ಯಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಸಂಸ್ಥೆ, ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಬಿಬಿಎಂಪಿ ಶಾಲೆ, ಕಾಲೇಜುಗಳನ್ನು ದತ್ತು ಪಡೆಯಲು ನಿರ್ಧರಿಸಿದೆ. ಅದರಂತೆ ಪಾಲಿಕೆಯ ಶಾಲೆ ಮಕ್ಕಳ ಬೌದ್ಧಿಕ ಹಾಗೂ ಶೈಕ್ಷಣಿಕ ಸಾಮರ್ಥ್ಯ ಹೆಚ್ಚಿಸಲು ಅಗತ್ಯ ಕಾರ್ಯಕ್ರಮಗಳನ್ನು ಸಂಸ್ಥೆ ರೂಪಿಸಲಿದೆ. 

ಪ್ರತಿ ವರ್ಷ ಪಾಲಿಕೆಯ ಶಾಲೆ, ಕಾಲೇಜುಗಳ ಅಭಿವೃದ್ಧಿಗೆ ಕೋಟ್ಯಂತರ ವೆಚ್ಚ ಮಾಡಲಾಗುತ್ತಿದೆ. ಆದರೂ, ಪಾಲಿಕೆ ಶಾಲೆ ಸೇರುವವರ ಸಂಖ್ಯೆ ಹೆಚ್ಚುತ್ತಿಲ್ಲ. ಜತೆಗೆ ಫ‌ಲಿತಾಂಶದಲ್ಲೂ ಏರಿಕೆ ಕಂಡುಬರುತ್ತಿಲ್ಲ. ಆ ಹಿನ್ನೆಲೆಯಲ್ಲಿ ಪಾಲಿಕೆ ಅಡಿಯಲ್ಲಿ ಬರುವ 156 ಶಾಲೆ, ಕಾಲೇಜುಗಳನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿ ಜತೆಗೆ, ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಪಡಿಸುವ ಉದ್ದೇಶವನ್ನು ಮೈಕ್ರೋಸಾಫ್ಟ್ ಹೊಂದಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಕ್ರೋಸಾಫ್ಟ್ನ ಅಂಗ ಸಂಸ್ಥೆ ಟ್ಯಾಗ್‌, ರೋಷಣಿ ಕಾರ್ಯಕ್ರಮ ಜಾರಿಗೊಳಿಸುತ್ತಿದೆ. ದತ್ತು ಪಡೆದಿರುವ ಶಾಲೆಗಳ ಸಮೀಕ್ಷೆ ನಡೆಸಿ, ಪ್ರತಿ ಶಾಲೆಗೂ ರ್‍ಯಾಂಕಿಂಗ್‌ ನೀಡಲಾಗುತ್ತದೆ. ಇದರಿಂದ ಶಾಲೆಗಳ ನಡುವೆ ಸ್ಪರ್ಧೆ ಏರ್ಪಟ್ಟು ಶಿಕ್ಷಣದ ಗುಣಮಟ್ಟ ಸುಧಾರಿಸಲಿದೆ.

Advertisement

ವಿಶೇಷ ಮೊಬೈಲ್‌ ಆ್ಯಪ್‌: ಪ್ರತಿ ಶಾಲೆ, ಕಾಲೇಜುಗಳ, ಶಿಕ್ಷಕರ ಮೇಲ್ವಿಚಾರಣೆಗಾಗಿ ವಿಶೇಷ ಸಾಫ್ಟ್ವೇರ್‌ ರೂಪುಗೊಳ್ಳಲಿದ್ದು, ಯಾವ ಶಾಲೆಯಲ್ಲಿ ಯಾವ ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂಬುದನ್ನು ಹಿರಿಯ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ತಿಳಿದುಕೊಳ್ಳ ಬಹುದಾಗಿದೆ. ಇದರೊಂದಿಗೆ ಮೊಬೈಲ್‌ ಆ್ಯಪ್‌ ಸಹ ಸಿದ್ಧಪಡಿಸಿದ್ದು, ಈ ಆ್ಯಪ್‌ ಮೂಲಕ ವಿದ್ಯಾರ್ಥಿಗಳ ಪೋಷಕರಿಗೆ ಮಕ್ಕಳ ಪ್ರಗತಿ ವರದಿ ದೊರೆಯಲಿದೆ.

ಯೋಜನೆ ಅನುಕೂಲವೇನು?
-ಶಿಕ್ಷಕರಲ್ಲಿ 21ನೇ ಶತಮಾನ ಶಿಕ್ಷಣ ಶೈಲಿ ರೂಪಿಸಬಹುದು
-ವಿದ್ಯಾರ್ಥಿಗಳಿಗೆ ಡಿಜಿಟಲ್‌ ವಿಷಯಗಳ ಅರಿವು
-ಸ್ಯಾಟಲೈಟ್‌ ಹಾಗೂ ಆನ್‌ಲೈ ಶಿಕ್ಷಣ
-ಶಿಕ್ಷಕರು, ವಿದ್ಯಾರ್ಥಿಗಳ ಮೌಲ್ಯಮಾಪನ
-ರ್‍ಯಾಂಕಿಂಗ್‌ ವ್ಯವಸ್ಥೆಯಿಂದ ಶಿಕ್ಷಣ ಗುಣಮಟ್ಟ ವೃದ್ಧಿ

ಪಾಲಿಕೆ ವ್ಯಾಪ್ತಿಯ ಶಾಲೆ, ಕಾಲೇಜು
ಶಾಲೆ-ಕಾಲೇಜು    ಸಂಖ್ಯೆ

-ಶಿಶು ವಿಹಾರಗಳು    91
-ಪ್ರಾಥಮಿಕ ಶಾಲೆ    15
-ಪ್ರೌಢಶಾಲೆಗಳು    32
-ಪಿಯು ಕಾಲೇಜು    13
-ಪದವಿ ಕಾಲೇಜು    04
-ಭಾರತೀಯ ವಿದ್ಯಾಭವನ    01
-ಒಟ್ಟು    156

ಮೈಕ್ರೋಸಾಫ್ಟ್ ಒದಗಿಸುವ ಸೌಲಭ್ಯಗಳು
-ಕಂಪ್ಯೂಟರ್‌ ಲ್ಯಾಬ್‌
-ಡಿಜಿಟಲ್‌ ಗ್ರಂಥಾಲಯ
-ವಿಜ್ಞಾನ ಪ್ರಯೋಗಾಲಯ
-ಕ್ರೀಡಾ ಸಾಮಗ್ರಿ
-ಸೃಜನಶೀಲತೆ ಕೇಂದ್ರ
-ಕೌಶಲ್ಯ ಅಭಿವೃದ್ಧಿ ಕೇಂದ್ರ
-ಸಮುದಾಯ ಸಂಪರ್ಕ ಕೇಂದ್ರ
-ಹೊಸ ಕೊಠಡಿ, ಶೌಚಾಲಯಗಳು

ಎಲ್ಲ ಬಿಬಿಎಂಪಿ ಶಾಲೆ, ಕಾಲೇಜುಗಳನ್ನು ದತ್ತು ಮೈಕ್ರೋಸಾಫ್ಟ್ ಸಂಸ್ಥೆಗೆ ದತ್ತು ನೀಡುವ ಕುರಿತು ಒಪ್ಪಂದ ಮಾಡಿಕೊಳ್ಳಲು ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್‌ ಅನುಮೋದನೆ ದೊರೆತಿದೆ. ಹೀಗಾಗಿ ಶೀಘ್ರವೇ ಸಂಸ್ಥೆ ಜತೆ ಒಪ್ಪಂದಕ್ಕೆ ಆಯುಕ್ತರು ಸಹಿ ಹಾಕುತ್ತಾರೆ.
-ಕೆ.ಆರ್‌.ಪಲ್ಲವಿ, ಶಿಕ್ಷಣ ವಿಭಾಗದ ಹೆಚ್ಚುವರಿ ಸಹಾಯಕ ಆಯುಕ್ತರು

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next