Advertisement
ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಲು ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಮುಖ ಪಕ್ಷಗಳಲ್ಲಿ ಪೈಪೋಟಿ ತೀವ್ರಗೊಂಡಿದೆ. ಟಿಕೆಟ್ ದೊರೆಯುವ ಖಾತ್ರಿ ಇಲ್ಲದವರು ಕಣ್ಣೀರಿಡುವ, ಜಾತಿ-ಸಮಾಜದ ಹೆಸರಲ್ಲಿ ಒತ್ತಡ ತರುವ, ಟಿಕೆಟ್ ದೊರೆಯದಿದ್ದರೆ ಪಕ್ಷೇತರ ಇಲ್ಲವೆ ಇನ್ನೊಂದು ಪಕ್ಷದಿಂದ ಸ್ಪರ್ಧೆಗಿಳಿಯುವ ತಂತ್ರಗಳು ಜೋರಾಗಿವೆ.
Related Articles
Advertisement
ಟಿಕೆಟ್ ವಿಚಾರದಲ್ಲಿ ಒತ್ತಡ-ಪೈಪೋಟಿ ತೀವ್ರವಾಗಿದ್ದು, ಹಳಬರಲ್ಲಿ ಕೆಲವರಿಗೆ ಟಿಕೆಟ್ ಕೈತಪ್ಪುವುದು ಅನಿವಾರ್ಯವಾಗಲಿದೆ. ಶನಿವಾರ ತಡರಾತ್ರಿಯ ಸಭೆ ನಂತರವೂ ಐದಾರು ವಾರ್ಡ್‌ಗಳ ಅಭ್ಯರ್ಥಿ ಹೆಸರು ಅಂತಿಮವಾಗದೆ, ರವಿವಾರ ಅಂತಿಮ ರೂಪ ನೀಡುವ ಸಾಧ್ಯತೆ ಇದೆ ಎಂಬುದು ಬಿಜೆಪಿಯ ಕೆಲ ಮೂಲಗಳ ಅನಿಸಿಕೆ. ಬಿಜೆಪಿಯಿಂದ ಮೊದಲ ಪಟ್ಟಿ ಗುರುವಾರವೇ ಬಿಡುಗಡೆಗೊಂಡಿದ್ದರೂ, ಶನಿವಾರ ಮಧ್ಯಾಹ್ನ ದವರೆಗೂ ಅನೇಕರಿಗೆ ಬಿ ಫಾರಂ ದೊರೆಯದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೂ ಕೆಲವರು ನಾಮಪತ್ರ ಸಲ್ಲಿಸಲು ಸಾಧ್ಯವಾಗದೆ, ಸೋಮವಾರ ನಾಮಪತ್ರ ಸಲ್ಲಿಕೆಗೆ ಸಿದ್ಧರಾಗಿದ್ದಾರೆ.
ಕೈ ಪಾಳೆಯದಲ್ಲೂ ತಿಕ್ಕಾಟ ಜೋರು: ಕಾಂಗ್ರೆಸ್‌ನಲ್ಲಿಯೂ ಟಿಕೆಟ್ ತಿಕ್ಕಾಟ ಜೋರಾಗಿಯೇ ಇದೆ. ಪಾಲಿಕೆ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯನ್ನು ಕೆಪಿಸಿಸಿ ನೇರವಾಗಿ ತಾನೇ ನಿರ್ವಹಿಸುತ್ತಿರುವುದು ವಿಳಂಬಕ್ಕೆ ಕಾರಣವಾಗುತ್ತಿದೆ ಎನ್ನಲಾಗುತ್ತದೆ. ಕಾಂಗ್ರೆಸ್‌ನಲ್ಲಿ ಇದ್ದವರಿಗೆ, ಕಾಂಗ್ರೆಸ್ ಬಗ್ಗೆ ತಿಳಿದಿರುವವರಿಗೆ ವಿಳಂಬ ಹೊಸದೇನು ಅಲ್ಲ. ನಾಮಪತ್ರ ಸಲ್ಲಿಕೆ ಅಂತಿಮ ಹಂತದಲ್ಲಿ, ಕೆಲವರಿಗೆ ಕೊನೆ ಗಳಿಗೆಯಲ್ಲಿ ಬಿ ಫಾರಂ ನೀಡಿದ ಉದಾಹರಣೆಗಳು ಇವೆ. ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಅಂತಿಮ ವಿಚಾರದಲ್ಲಿ ಸ್ಥಳೀಯವಾಗಿ ನಾಯಕತ್ವದ ಕೊರತೆಯೂ ಕಾಂಗ್ರೆಸ್ ಪಟ್ಟಿ ಬಿಡುಗಡೆಗೆ ವಿಳಂಬಕ್ಕೆ ಕಾರಣವಾಗಿದೆ. ಸಾಮಾಜಿಕ ನ್ಯಾಯ, ಸಮುದಾಯಕ್ಕೆ ಆದ್ಯತೆ ಎಂಬ ವಿಚಾರದಲ್ಲಿ ಪೈಪೋಟಿ ಹೆಚ್ಚಿದ್ದು, ಒತ್ತಡ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.
ಸೋಮವಾರ ಎಚ್ ಡಿಕೆ ಆಗಮನ: ಜೆಡಿಎಸ್‌ನವರು ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದ್ದು, ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿಗೆ ಆಗಮಿಸಿ ಪಕ್ಷದ ಮುಖಂಡರು, ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಆಮ್ ಆದ್ಮಿ ಪಕ್ಷ ಮೂರು ಹಂತದ ಪಟ್ಟಿ ಬಿಡುಗಡೆ ಮಾಡುವ ಮೂಲಕ ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಂಚೂಣಿ ಕಾಯ್ದುಕೊಂಡಿದ್ದರೆ, ವಿವಿಧ ಪಕ್ಷಗಳು ತಮ್ಮ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಪಕ್ಷೇತರರಾಗಿ ಕೆಲವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಅಂತಿಮಕ್ಕೆ ವಿಳಂಬ ತೋರಿದ್ದರಿಂದಾಗಿ, ನಾಮಪತ್ರ ಸಲ್ಲಿಕೆ ಕೊನೆಯ ದಿನವಾದ ಸೋಮವಾರ ವಿವಿಧ ಪಕ್ಷಗಳ ಅಭ್ಯರ್ಥಿಗಳು ಏಕಕಾಲಕ್ಕೆ ನಾಮಪತ್ರ ಸಲ್ಲಿಕೆಗೆ ಆಗಮಿಸುವ, ನೂಕು ನುಗ್ಗಲು ಉಂಟಾಗುವ ಸಾಧ್ಯತೆ ಇಲ್ಲದಿಲ್ಲ.