ಬೆಂಗಳೂರು: ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಕೈಗೊಂಡ ತೀರ್ಮಾನಗಳು ಕಾರ್ಪೊರೇಟ್ ಸ್ನೇಹಿಯಾಗಿ ಮತ್ತು ರೈತ, ಕಾರ್ಮಿಕ ವಿರೋಧಿಯಾಗಿವೆ ಎಂದು ನ್ಯಾಷನಲ್ ಲಾ ಕಾಲೇಜಿನ ಪ್ರಾಧ್ಯಾಪಕ ಬಾಬು ಮ್ಯಾಥ್ಯೂ ಅಭಿಪ್ರಾಪಟ್ಟಿದ್ದಾರೆ.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಮೇ ದಿನಾಚರಣೆ ಪ್ರಯುಕ್ತ ನಗರದ ರೇಣುಕಾಚಾರ್ಯ ಲಾ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳೆದ ಐದು ವರ್ಷಗಳಲ್ಲಿ ಕೈಗಾರಿಕಾ ವಿವಾದ ಕಾಯ್ದೆ, ಕಾರ್ಖಾನೆ ಕಾಯ್ದೆ, ಗುತ್ತಿಗೆ ಕಾರ್ಮಿಕರ ಕಾಯ್ದೆ ಸೇರಿದಂತೆ ಹಲವು ಕಾರ್ಮಿಕರ ಕಾಯ್ದೆಗಳಿಗೆ ತಿದ್ದುಪಡಿ ತಂದಿವೆ ಎಂದು ಹೇಳಿದರು.
ಬಹಿರಂಗ ಸಭೆಗೂ ಮೊದಲು ಕಾರ್ಮಿಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಆನಂದರಾವ್ ವೃತ್ತದವರೆಗೆ ರ್ಯಾಲಿ ನಡೆಸಿದರು. ಸಭೆಯಲ್ಲಿ ಲಾ ಸ್ಕೂಲ್‌ನ ಪ್ರಾಧ್ಯಾಪಕ ಪ್ರೊ.ಮೋಹನ್ ಮಣಿ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ,ಸಿಪಿಐನ ಡಾ.ಸಿದ್ದನಗೌಡ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು – ಎಸ್.ಉಮೇಶ್: ಎಕೆಆರ್‌ಆರ್‌ಎಸ್ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆ-ಚರ್ಚೆ-ನಿರ್ಣಯ ಕಾರ್ಯಕ್ರಮದಲ್ಲಿ ಮಾತನಾಡಿದ ಎಕೆಆರ್‌ಆರ್‌ಎಸ್‌ನ ಉಪಾಧ್ಯಕ್ಷ ಎಸ್.ಉಮೇಶ್, ರಸ್ತೆ ಸಾರಿಗೆ ಇಲಾಖೆಯ 4 ನಿಗಮಗಳ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು ಮತ್ತು 6ನೇ ವೇತನ ಪರಿಷ್ಕರಿಸಬೇಕು.
ಇದರೊಂದಿಗೆ ವಜಾಗೊಳಿಸಿರುವ ಕಾರ್ಮಿಕರನ್ನು ಪುನರಾಯ್ಕೆ ಮಾಡಿಕೊಳ್ಳಬೇಕು. ಕಳೆದ 15 ವರ್ಷದಿಂದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮುಂಬಡ್ತಿ ಹಾಗೂ ಎಲ್ಲ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಮೇ ದಿನಾಚರಣೆಯಲ್ಲಿ ಕೈಗೊಂಡ ನಿರ್ಣಯ
* ಕಾರ್ಮಿಕರಿಗೆ 18,000 ರೂ. ಕನಿಷ್ಠ ವೇತನ ನಿಗದಿಪಡಿಸಬೇಕು.
* ಕಾರ್ಮಿಕರು ಸಂಘ ರಚಿಸಿಕೊಂಡಾಗ ಕಡ್ಡಾಯವಾಗಿ ಮಾನ್ಯತೆ ನೀಡುವ ಕಾನೂನು ರೂಪಿಸುವುದು.
* ರಾಜ್ಯ ಸರ್ಕಾರ ಐಟಿ ಕ್ಷೇತ್ರದ ಕಾರ್ಮಿಕರಿಗೆ ಸ್ಥಾಯಿ ನಿಯಮಾವಳಿ ಕಾನೂನು ಜಾರಿ ಮಾಡಬೇಕು