Advertisement

ಕೊರೋನಾ ವೈರಸ್‌: ಆತಂಕ ಬೇಡ; ಜಾಗರೂಕತೆ ಇರಲಿ

01:43 AM Jan 24, 2020 | mahesh |

ಮಂಗಳೂರು: ಚೀನದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್‌ ಬಗ್ಗೆ ಎಚ್ಚರ ವಹಿಸಲು ವಿಶ್ವ ಆರೋಗ್ಯ ಸಂಸ್ಥೆಯು ಮನವಿ ಮಾಡಿದ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಮುಂಜಾಗ್ರತೆ ವಹಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಈ ಸಂಬಂಧ ಈಗಾಗಲೇ ಎಲ್ಲ ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಗಿದೆ.

Advertisement

ಭಾರತದಲ್ಲಿ ಪ್ರಸ್ತುತ ಅಥವಾ ಈ ಹಿಂದೆ ಕೊರೋನಾ ವೈರಸ್‌ ಸಂಬಂಧಿತ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಆದರೆ ಚೀನದಲ್ಲಿ ಈ ವೈರಸ್‌ ಹರಡಿರುವ ಹಿನ್ನೆಲೆಯಲ್ಲಿ ಎಲ್ಲ ದೇಶಗಳಲ್ಲಿಯೂ ಜಾಗರೂಕತೆ ವಹಿಸಲು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ವಿದೇಶದಿಂದ ಬರುವವರು ಮತ್ತು ವಿದೇಶಕ್ಕೆ ವಿಶೇಷವಾಗಿ ಚೀನಕ್ಕೆ ತೆರಳುವ ಮತ್ತು ಅಲ್ಲಿಂದ ಬರುವವರು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಬೆಕ್ಕಿನಿಂದ ಹರಡುವ ವೈರಸ್‌
ಕೊರೋನಾ ಶ್ವಾಸಕೋಶಕ್ಕೆ ಹಾನಿ ಮಾಡಿ ಶ್ವಾಸಕೋಶ ವಿಫ‌ಲಗೊಂಡು ಪ್ರಾಣಹಾನಿಗೂ ಕಾರಣವಾಗುವ ವೈರಸ್‌ ಆಗಿದೆ. ಇದು ಹರಡುವ ಬಗೆ ಇನ್ನೂ ಸರಿಯಾಗಿ ತಿಳಿದು ಬಂದಿಲ್ಲ. ಪ್ರಾಣಿಗಳಿಂದ, ವಿಶೇಷವಾಗಿ ಬೆಕ್ಕಿನ ಮುಖಾಂತರ ಈ ವೈರಸ್‌ ಮನುಷ್ಯನನ್ನು ಬಾಧಿಸುವ ಸಾಧ್ಯತೆ ಇದೆ. ಬೆಕ್ಕು ಮತ್ತು ಇತರ ಪ್ರಾಣಿಗಳಿಂದ ದೂರವಿರಬೇಕು. ಆದರೆ ಆತಂಕ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿ ಡಾ| ನವೀನ್‌ಚಂದ್ರ ತಿಳಿಸಿದ್ದಾರೆ.

ಶಂಕಿತ ಪ್ರಕರಣಕ್ಕೆ ಪ್ರತ್ಯೇಕ ವಾರ್ಡ್‌
ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಪ್ರಕರಣ ಇಲ್ಲವಾದರೂ ಮುನ್ನೆಚ್ಚರಿಕೆಯಾಗಿ ಜಿಲ್ಲಾ ವೆನಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಟೆಡ್‌ ವಾರ್ಡ್‌ ಕಾಯ್ದಿರಿಸಲಾಗಿದೆ. ಈ ವಾರ್ಡ್‌ನಲ್ಲಿ ಒಂದು ಬೆಡ್‌ ಇದ್ದು, ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ರೋಗಿಯನ್ನು ದಾಖಲು ಮಾಡಿ ತಪಾಸಣೆ, ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ತಿಳಿಸಿದ್ದಾರೆ.

ಜ. 27: ಕೆಎಂಸಿಯಲ್ಲಿ ವೈದ್ಯರಿಗೆ ಮಾಹಿತಿ ಕಾರ್ಯಾಗಾರ
ಉಡುಪಿ: ಚೀನದ ಕೆಲವೆಡೆ ಮಾರಕವಾಗಿ ಹರಡಿರುವ ಕರೋನಾ ವೈರಸ್‌ ಸೋಂಕು ಭಾರತೀಯರ ಮೇಲೆ ಇನ್ನೂ ಯಾವುದೇ ಪರಿಣಾಮ ಬೀರಿಲ್ಲ. ಆದರೂ ದೇಶಾದ್ಯಂತ ವಿಮಾನ ನಿಲ್ದಾಣ ಸಹಿತ ಈಗಾಗಲೇ ಎಲ್ಲೆಡೆ ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Advertisement

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಈ ರೋಗಕ್ಕೆ ಸಂಬಂಧಿಸಿದ ವಿವರಗಳ ಬಗ್ಗೆ ಸರಕಾರದ ಮೂಲಕ ಸಲಹೆಗಳನ್ನು ಪಡೆಯಲಾಗುತ್ತಿದೆ. ಜ.27ರಂದು ವೈದ್ಯರಿಗೆ ಮಾಹಿತಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಪ್ರಕರಣಗಳು ಕಂಡುಬಂದರೆ ಅದಕ್ಕೆ ಪೂರಕವಾದ ಚಿಕಿತ್ಸೆ ನೀಡಲು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತದೆ ಎಂದು ಕೆಎಂಸಿಯ ವೈದ್ಯ ಡಾ| ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ರೋಗ ಲಕ್ಷಣ
ಈ ವೈರಸ್‌ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ತೀವ್ರ, ತೀಕ್ಷ್ಣ ಉಸಿರಾಟದ ತೊಂದರೆಯ ಲಕ್ಷಣವಿರುವ ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಮ್‌ (ಸಾರ್ಸ್‌) ರೋಗಕ್ಕೆ ಸಂಬಂಧಿಸಿ ಕೊರೊನಾ ವೈರಸ್‌ನ ಲಕ್ಷಣ ಮೊದಲಿಗೆ ಚೀನದ ವುಹಾನ್‌ ನಗರದಲ್ಲಿ ಪತ್ತೆಯಾಗಿತ್ತು.

ಆಸ್ಪತ್ರೆಗಳಿಗೆ ಸೂಚನೆ
ಕೊರೋನಾ ವೈರಸ್‌ ಚೀನದಲ್ಲಿ ಕಾಣಿಸಿಕೊಂಡಿರುವುದು. ಭಾರತದಲ್ಲಿ ಈವರೆಗೆ ಇದು ತಗುಲಿದ ಪ್ರಕರಣಗಳಿಲ್ಲ. ಆದಾಗ್ಯೂ ಎಲ್ಲ ಆಸ್ಪತ್ರೆಗಳಿಗೆ ಇದರ ಬಗ್ಗೆ ಜಾಗರೂಕರಾಗಿರುವಂತೆ ಮತ್ತು ರೋಗಿಗಳನ್ನು ಸರಿಯಾಗಿ ಗಮನಿಸುವಂತೆ ತಿಳಿಸಲಾಗಿದೆ.
-ಡಾ| ರಾಮಕೃಷ್ಣ ರಾವ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next