Advertisement

ಕೊರೊನಾ ವೈರಸ್‌; ಶಂಕಿತರ ರಕ್ತ ಮಾದರಿ ಎನ್‌ಐವಿಗೆ ರವಾನೆ

10:05 AM Jan 29, 2020 | Lakshmi GovindaRaj |

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೀನಾ ಭಾಗದಿಂದ ಬಂದ 2,572 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ಮೂವರಿಗೆ ಸೋಂಕು ತಗುಲಿದೆ ಎಂಬ ಶಂಕೆಯಿಂದ ರಕ್ತ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಇವರಲ್ಲದೇ ವುವಾನ್‌ನ ಆರು ಮಂದಿ ಮೇಲೆ ಮುಂದಿನ 28 ದಿನಗಳು ನಿಗಾವಹಿಸಲಾಗುತ್ತಿದೆ.

Advertisement

ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚಳ ವಾಗುತ್ತಿರುವುದರಿಂದ ಚೀನಾದಿಂದ ಬರುತ್ತಿರುವ ಎಲ್ಲಾ ವಿಮಾನಗಳ ಪ್ರಯಾಣಿಕರನ್ನು ಬೆಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಕೇಂದ್ರ ಆರೋಗ್ಯ ಸಚಿವಾಲಯ ವತಿಯಿಂದ ಸಹಾಯ ಕೇಂದ್ರ ಆರಂಭಿಸಿ ಥರ್ಮಲ್‌ ಸ್ಕ್ಯಾನರ್‌ ತಪಾಸಣೆ ನಡೆಸಲಾಗುತ್ತಿದೆ. ಈ ರೀತಿ ಜ.21 ರಿಂದ 27 ವರೆಗೆ ಒಟ್ಟು 2,572 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಜತೆಗೆ ಅವರ ಆರೋಗ್ಯ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಪ್ರಯಾಣಿಕರ ದೇಹದ ಉಷ್ಣಾಂಶ ಹೆಚ್ಚಿದ್ದರೆ ಅಥವಾ ಕೆಮ್ಮು, ನೆಗಡಿ ಇದ್ದರೆ ಕೂಡಲೇ ಅಲ್ಲಿನ ವೈದ್ಯರು ಸಹಾಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸೂಚಿಸಲಾಗುತ್ತಿದೆ. ಅವಶ್ಯಕತೆ ಇದ್ದರೆ ನಗರದ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಶಂಕಿತ ಮೂವರ ರಕ್ತ ಮಾದರಿ ಪರೀಕ್ಷೆ: ಇತ್ತೀಚೆಗೆ ಚೀನಾದಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರಿಗೆ ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿ ರಕ್ತ ಪರೀಕ್ಷೆ ನಡೆಸಲಾಗಿತ್ತು. ರಕ್ಷ ಪರೀಕ್ಷೆಗೆ ಪುಣೆಯ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ವೈರಾಲಜಿ (ಎನ್‌ಐವಿ)ಗೆ ಕಳಿಸಲಾಗಿತ್ತು. ವರದಿಯಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು ಆತಂಕ ದೂರಾಗಿದೆ. ಈಗ ಮತ್ತೆ ಚೀನಾ ಪ್ರವಾಸ ಮುಗಿಸಿ, ಜ.18ರಂದು ನಗರಕ್ಕೆ ವಾಪಸಾಗಿದ್ದ ಇಬ್ಬರ ಆರೋಗ್ಯದಲ್ಲೂ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಭಾನುವಾರ ರಾತ್ರಿ ನಗರದ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ದಾಖಲಿ ಸ ಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಇಬ್ಬರ ರಕ್ತ ಮಾದರಿಯನ್ನು ಎನ್‌ಐವಿಗೆ ಕಳಿಸಿದ್ದು, ವರದಿ ಸದ್ಯದಲ್ಲಿಯೇ ಬರಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವುಹಾನ್‌ನಿಂದ ಬಂದ ಆರು ಮಂದಿ ಮೇಲೆ ನಿಗಾ: ಚೀನಾದಲ್ಲಿ ಸೋಂಕು ಹೆಚ್ಚಿರುವ ವುಹಾನ್‌ ನಗರದಿಂದ ಒಟ್ಟು ಆರು ಮಂದಿ ಬೆಂಗಳೂರಿಗೆ ಆಗಮಿಸಿದ್ದಾರೆ. ನಾಲ್ವರು ಚೀನಾ ನಾಗರಿಕರು ಉದ್ಯಮ ಚಟುವಟಿಕೆಗೆ ಬಂದಿದ್ದು, ಇನ್ನಿಬ್ಬರು ಇಲ್ಲಿನ ನಾಗರಿಕರೇ ಆಗಿದ್ದು, ಒಬ್ಬರು ವುಹಾನ್‌ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುತ್ತಿದ್ದವರು. ಇನ್ನೊಬ್ಬರು ವಾಣಿಜ್ಯ ಉದ್ದೇಶಕ್ಕೆ ಭೇಟಿ ನೀಡಿ ಮರಳಿದವರು. ಈ ಆರು ಮಂದಿ ಯೊಂದಿಗೆ ಆರೋಗ್ಯ ಇಲಾಖೆಯು ನಿರಂತರ ಸಂಪರ್ಕ ದಲ್ಲಿದ್ದು, ಅವರ ಆರೋಗ್ಯದ ಕುರಿತು 28 ದಿನಗಳವರೆಗೆ ನಿಗಾ ವಹಿಸಲಾಗುತ್ತಿದೆ. ಇನ್ನು ಚೀನಾ ಉದ್ಯಮಿಗಳು ಫೆಬ್ರವರಿ 10ರ ನಂತರ ತಮ್ಮ ದೇಶಕ್ಕೆ ಹಿಂದಿರುಗಲಿದ್ದು, ಅಲ್ಲಿ ಯವರೆಗೂ ನಿತ್ಯ ಆರೋಗ್ಯ ವಿಚಾರಣೆ ಮಾಡ ಲಾಗುತ್ತದೆ ಎಂ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Advertisement

ನ್ಯುಮೋನಿಯಾ ಲಕ್ಷಣಗಳಿದ್ದರೆ ಪರೀಕ್ಷಿಸಿಕೊಳ್ಳಿ: ಕೊರೊನಾ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ನ್ಯುಮೋನಿಯಾ ಲಕ್ಷಣಗಳನ್ನೇ ಹೊಂದಿರುತ್ತದೆ. ನಗರ ಪ್ರದೇಶ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೇಂದ್ರ ಆರೋಗ್ಯ ಇಲಾಖೆ ಮನವಿ: ಜ. 1ರಿಂದೀಚೆಗೆ ಚೀನಾಕ್ಕೆ ಭೇಟಿ ನೀಡಿದ ವ್ಯಕ್ತಿಗಳು ಉಸಿರಾಟದ ತೊಂದರೆ, ಶೀತ, ನೆಗಡಿ, ಕೆಮ್ಮು, ಗಂಟಲು ಕೆರೆತದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೇ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ತಪಾಸಣೆ ವೇಳೆ ಕಡ್ಡಾಯವಾಗಿ ಚೀನಾಗೆ ಭೇಟಿ ನೀಡಿರುವುದನ್ನು ವೈದ್ಯರಿಗೆ ತಿಳಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಕೊರೊನಾ ವೈರಸ್‌ ಸಹಾಯವಾಣಿಯನ್ನು ಆರಂಭಿಸಿದ್ದು, ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರು ಕರೆ ಮಾಡಿ ಮಾಹಿತಿ ಪಡೆಯಬಹುದು. ಸಹಾಯವಾಣಿ ಸಂಖ್ಯೆ: + 91-11-23978046

ಚೀನಾಕ್ಕೆ ಪ್ರಯಾಣಿಸುವವರಿಗೆ ಮುನ್ನೆಚ್ಚರಿಕೆ ಕ್ರಮಗಳು
-ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಮಾಸ್ಕ್ ಬಳಸುವುದು.
-ಸೋಂಕಿತರ ಸಂಪರ್ಕದಿಂದ ದೂರವಿರುವುದು.
-ಮೂರು ಪದರವುಳ್ಳ ಮಾಸ್ಕ್ ಬಳಸುವುದು.
-ಉಸಿರಾಟದ ತೊಂದರೆಯಾದಲ್ಲಿ ಕೂಡಲೇ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು.
-ಮಾಂಸ, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು.
-ಆಹಾರ ಸೇವನೆಗೂ ಮುನ್ನ ಕೈಗಳನ್ನು ಶುಭ್ರವಾಗಿ ತೊಳೆದುಕೊಳ್ಳುವುದು.
-ಅನಾರೋಗ್ಯ ಲಕ್ಷಣಗಳಿದ್ದರೆ ಪ್ರಯಾಣವನ್ನು ರದ್ದು ಮಾಡಬೇಕು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚೀನಾದಿಂದ ನಿತ್ಯ 350 ರಿಂದ 400 ಪ್ರಯಾಣಿಕರು ಆಗಮಿಸುತ್ತಿದ್ದು, ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜತೆಗೆ ಮುಂದಿನ 28 ದಿನಗಳಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ರೋಗ ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸುವಂತೆ ತಿಳಿಸಲಾಗುತ್ತಿದೆ. ಮೂವರ ರಕ್ತ ಮಾದರಿ ಪರೀಕ್ಷೆಗೊಳಪಡಿಸಿದ್ದು, ಆರು ಮಂದಿ ಮೇಲೆ ಕೆಲ ದಿನಗಳ ಮಟ್ಟಿಗೆ ನಿಗಾ ವಹಿಸಲಾಗಿದೆ.
-ಡಾ. ಬಿ.ಜಿ. ಪ್ರಕಾಶ್‌ ಕುಮಾರ್‌, ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ, ಆರೋಗ್ಯ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next