ಜೈಪುರ್:ರಾಜಸ್ಥಾನದ ಜೈಪುರದಲ್ಲಿ ಕಳೆದ 25 ವರ್ಷಗಳಿಂದ ಚಿನ್ನದ ವ್ಯಾಪಾರಿಯಾಗಿದ್ದ ಹುಕುಮ್ ಚಾಂದ್ ಸೋನಿ ಇದೀಗ ಕೋವಿಡ್ 19 ತಡೆಗಟ್ಟಲು ಜಾರಿಗೊಳಿಸಿದ ಲಾಕ್ ಡೌನ್ ನಿಂದಾಗಿ ಜೀವನ ಸಾಗಿಸಲು ತರಕಾರಿ ಮಾರುತ್ತಿರುವ ಉದ್ಯೋಗಕ್ಕೆ ಇಳಿದಿದ್ದಾರೆ. ಬಹುಶಃ ಚಾಂದ್ ತಾನು ಜೀವಮಾನದಲ್ಲಿ ಯಾವತ್ತಾದರೂ ತರಕಾರಿ ಮಾರಬಹುದೇನೊ ಎಂಬ ಬಗ್ಗೆ ಕನಸನ್ನೂ ಕಂಡಿರಲಿಕ್ಕಿಲ್ಲ ಎಂದು ವರದಿ ತಿಳಿಸಿದೆ.
ಲಾಕ್ ಡೌನ್ ಗೂ ಮುನ್ನ ದುಬಾರಿ ಬೆಲೆಯ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯಲ್ಲಿ ಈಗ ಹಸಿರು ತರಕಾರಿ ತುಂಬಿಕೊಂಡಿದೆ. ಇದೀಗ ಚಿನ್ನಾಭರಣ ತೂಗುತ್ತಿದ್ದ ತಕ್ಕಡಿಯಲ್ಲಿ ಬಟಾಟೆ, ಈರುಳ್ಳಿಯನ್ನು ತೂಗಿ ಕೊಡುವ ಕೆಲಸಕ್ಕೆ ಬಳಸುತ್ತಿರುವುದಾಗಿ ವರದಿ ವಿವರಿಸಿದೆ.
ಜೈಪುರದ ರಾಮ್ ನಗರದಲ್ಲಿರುವ ಜಿಪಿ ಚಿನ್ನಾಭರಣ ಮಳಿಗೆ ದಿಢೀರನೆ ತರಕಾರಿ ಅಂಗಡಿಯಾಗಿ ಬದಲಾಗಿದ್ದು, ಹೊಸ ಗ್ರಾಹಕರನ್ನು ಸೆಳೆಯುವ ತಂತ್ರಕ್ಕೆ ಚಾಂದ್ ಮೊರೆ ಹೋಗಿದ್ದಾರೆ ಎಂದು ವರದಿ ತಿಳಿಸಿದೆ.
ನಾನು ಕಳೆದ ನಾಲ್ಕು ದಿನಗಳಿಂದ ತರಕಾರಿ ಮಾರಾಟ ಮಾಡಲು ಆರಂಭಿಸಿದ್ದೇನೆ. ಲಾಕ್ ಡೌನ್ ಸಂದರ್ಭದಲ್ಲಿ ನಾನು ಬದುಕಲು ನನಗೆ ಇದ್ದ ದಾರಿ ಇದೊಂದೆ ಎಂದು ಸೋನಿ ಪಿಟಿಐಗೆ ತಿಳಿಸಿದ್ದಾರೆ. ನಾನೇನು ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹಿಸಿ ಇಟ್ಟಿಲ್ಲ. ಹೀಗಾಗಿ ನಾನು ತರಕಾರಿ ಮಾರಲು ನಿರ್ಧರಿಸಿದ್ದೆ. ನನ್ನದೇನು ದೊಡ್ಡ ಚಿನ್ನಾಭರಣದ ಮಳಿಗೆಯಲ್ಲ. ಆದರೆ ತರಕಾರಿ ಅಂಗಡಿಯಿಂದ ಕುಟುಂಬ ಸಾಗಿಸಲು ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.
ಕೋವಿಡ್ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಮಾರ್ಚ್ 25ರಿಂದ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಕೆಲವು ವಾರಗಳವರೆಗೆ ಸೋನಿ ಹೇಗೋ ಕುಟುಂಬದ ಖರ್ಚು, ವೆಚ್ಚ ಸರಿದೂಗಿಸಿದ್ದೆ. ಆದರೆ ಇದೀಗ ನನಗೆ ಬೇರೆ ದಾರಿ ಇಲ್ಲ. ಮನೆಯಲ್ಲಿ ಖಾಲಿ ಕುಳಿತರೆ, ಯಾರು ಹಣ ಕೊಡುತ್ತಾರೆ. ಹೀಗಾಗಿ ತರಕಾರಿ ಮಾರಾಟ ಮಾಡಲು ನಿರ್ಧರಿಸಿದ್ದೇನೆ ಎಂದು ಸೋನಿ ವಿವರಿಸಿದ್ದಾರೆ.