Advertisement

ಕಾಸರಗೋಡಿನ ವಿದ್ಯಾರ್ಥಿಗೆ ಕೊರೊನಾ ಸೋಂಕು ಖಾತ್ರಿ

10:17 PM Feb 03, 2020 | Sriram |

ಕಾಸರಗೋಡು: ದೇಶಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್‌ ಸೋಂಕು ಕಾಸರಗೋಡಿನ ವಿದ್ಯಾರ್ಥಿಯಲ್ಲಿ ದೃಢಪಟ್ಟಿದೆ. ಕಾಂಞಂಗಾಡಿನ ವಿದ್ಯಾರ್ಥಿಯೋರ್ವನಲ್ಲಿ ಸೋಂಕು ಇರುವುದು ಪತ್ತೆಹಚ್ಚಲಾಗಿದ್ದು, ಇದೀಗ ಕೇರಳದಲ್ಲಿ ಕೊರೊನಾ ವೈರಸ್‌ ಪ್ರಕರಣ ಸಂಖ್ಯೆ ಮೂರಕ್ಕೇರಿದೆ. ಕಾಂಞಂಗಾಡ್‌ನ‌ಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಿಗಾ ಇರಿಸಲಾಗಿದ್ದ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿದೆ.

Advertisement

ಚೀನದಿಂದ ಬಂದ ಕಾಂಞಂಗಾಡಿನ ವಿದ್ಯಾರ್ಥಿಯನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದ ವಿದ್ಯಾರ್ಥಿಯಲ್ಲಿ ರಕ್ತದ ಮಾದರಿ ಪಾಸಿಟಿವ್‌ ಎಂದು ಕಂಡು ಬಂದಿದೆ. ಈ ವಿದ್ಯಾರ್ಥಿಗೆ ರೋಗ ಲಕ್ಷಣ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ನಿಗಾಯಿರಿಸಿ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಪ್ರಯೋಗಾಲಯದಲ್ಲಿ ರಕ್ತದ ಮಾದರಿ ಪಾಸಿಟಿವ್‌ ಎಂದು ಕಂಡು ಬಂದು ಕೊರೊನಾ ವೈರಸ್‌ ಸೋಂಕು ಇರುವುದು ದೃಢೀಕರಿಸಲಾಯಿತು. ಕಾಸರಗೋಡಿನ ವಿದ್ಯಾರ್ಥಿಗೆ ಸೋಂಕು ದೃಢೀಕರಿಸುವ ಮೂಲಕ ಕೇರಳದಲ್ಲಿ ಮೂರನೇ ಪ್ರಕರಣ ದಾಖಲಾಯಿತು.

ಇತ್ತೀಚೆಗಷ್ಟೇ ವುಹಾನ್‌ನಿಂದ ಆಗಮಿಸಿದ್ದ ವಿದ್ಯಾರ್ಥಿನಿಯಲ್ಲಿ ಸೋಂಕು ದೃಢಪಟ್ಟಿತ್ತು. ಅದರ ಬೆನ್ನಲ್ಲೇ ಚೀನದಿಂದ ಬಂದ ಮತ್ತೂಬ್ಬ ವಿದ್ಯಾರ್ಥಿಗೆ ಸೋಂಕು ತಗಲಿರುವುದು ಪತ್ತೆಯಾಗಿತ್ತು. ಇದೀಗ ಕಾಸರಗೋಡಿನ ವಿದ್ಯಾರ್ಥಿಗೆ ಸೋಂಕು ಪತ್ತೆಯಾಗಿದೆ.

ವೈದ್ಯಕೀಯ ತಪಾಸಣೆ
ಚೀನಾದಿಂದ ವಾಪಸಾಗುವ ಎಲ್ಲರೂ ವೈದ್ಯಕೀಯ ತಪಾಸಣೆಗೊಳಪಡಬೇಕೆಂಬ ನಿರ್ದೇಶ ನೀಡಲಾಗಿದೆತಪಾಸಣೆಗೊಳಪಡಿಸಲಾಗಿರುವ ವ್ಯಕ್ತಿಗಳ ಖಾಸಗೀತನವನ್ನು ಪೂರ್ಣವಾಗಿಪಾಲಿಸಲಾಗುವುದು. ಚೀನಾದಿಂದ ಹಿಂತಿರುಗಿದ ವಿದ್ಯಾರ್ಥಿಯ ರಕ್ತ ಮಾದರಿಯನ್ನು ಪುಣೆಯಲ್ಲಿರುವ ವೈರೋಲಜಿ ಇನ್‌ಸ್ಟಿಟ್ಯೂಟ್‌ಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು.

ಇದರಲ್ಲಿ ಸೋಂಕು ತಗಲಿರುವುದು ಖಾತ್ರಿಪಡಿಸಲಾಗಿದೆ.
ಮುಂಜಾಗ್ರತಾ ಕ್ರಮದಂಗವಾಗಿ ಜಿಲ್ಲಾ ವೈದ್ಯಕೀಯ ಕಚೇರಿಯ (04994-257700, 9446601700, ಟ್ರೋಲ್‌ ಫ್ರೀ – 1079)ಲ್ಲಿ ಅಗತ್ಯದ ಮಾಹಿತಿ ಸಂಗ್ರಹ ಕೇಂದ್ರ ಏರ್ಪಡಿಸಲಾಗಿದೆ. ಸಂಶಯ ದೂರೀಕರಿಸಲು ಈ ನಂಬ್ರಕ್ಕೆ ಕರೆ ಮಾಡಬಹುದೆಂದು ಜಿಲ್ಲಾ ವೈದ್ಯಕೀಯ ವಿಭಾಗ ತಿಳಿಸಿದೆ. ಚಿಕಿತ್ಸೆಗಾಗಿ ಕಾಸರಗೋಡು ಜನರಲ್‌ ಆಸ್ಪತ್ರೆ ಮತ್ತು ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಐಸೊಲೇಷನ್‌ ವಾರ್ಡ್‌ಗಳನ್ನು ಸಜ್ಜೀಕರಿಸಲಾಗಿದೆ.

Advertisement

ಚೀನಾದ ವುಹಾನ್‌ನಿಂದ ಜ.15 ರ ಬಳಿಕ ಜಿಲ್ಲೆಗೆ ತಲುಪಿದವರು ಕಡ್ಡಾಯವಾಗಿ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಜಿಲ್ಲಾ ಆರೋಗ್ಯ ಇಲಾಖೆಯ ಕಂಟ್ರೋಲ್‌ ಸೆಲ್‌ 9946000493 ಎಂಬ ನಂಬ್ರದಲ್ಲಿ ಸಂಪರ್ಕಿಸಲು ತಿಳಿಸಲಾಗಿದೆ.

ತಪಾಸಣೆಗೆ ಪೂರ್ಣ ಸಜ್ಜು
ಕೊರೊನಾ ವೈರಸ್‌ ಬಾಧಿಸಿದಲ್ಲಿ ಎಲ್ಲಾ ರೀತಿಯಲ್ಲೂ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಜ್ಜಾಗಿಜಚಿಜಿ ಇನ್ನು ವೈರಸ್‌ ಬಾಧಿತರನ್ನು ತಪಾಸಣೆ ಮಾಡಲು ಪ್ರತ್ಯೇಕ ಸುರಕ್ಷಾ ಧಿರಿಸು, ಕೈಕವಚ, ಮಾಸ್ಕ್ ಪೂರೈಕೆಯಾಗಿದ್ದು, ಇವುಗಳನ್ನು ಬಳಸುವ ವಿಧಾನದ ಬಗ್ಗೆ ಆಸ್ಪತ್ರೆ ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ. ವೈರಸ್‌ ಬಾಧಿತರನ್ನು ಅಥವಾ ಚೀನಾದಿಂದ ಬಂದವರನ್ನು ಹೆಚ್ಚಿನ ನಿಗಾ ವಹಿಸಿ ತಪಾಸಣೆ ನಡೆಸುವ ಬಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ತರಬೇತಿಯನ್ನು ಆಯೋಜಿಸಲಾಗಿದೆ.

ಆತಂಕ ಬೇಡ
ಇದೇ ವೇಳೆ ಕೊರೊನಾ ವೈರಸ್‌ ಸೋಂಕು ಬಗ್ಗೆ ಕಳವಳ ಪಡಬೇಕಾದ ಅಗತ್ಯವಿಲ್ಲಆದರೂ ಜಾಗ್ರತೆ ಪಾಲಿಸಬೇಕು. ಸೋಂಕು ಹರಡದಿರಲು ಅಗತ್ಯದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸರಕಾರ ಕೈಗೊಂಡಿದೆಯೆಂದು ಅವರು ತಿಳಿಸಿದ್ದಾರೆ. ಕೇರಳದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಾಗ್ರತೆ ಪಾಲಿಸುವಂತೆ ನಿರ್ದೇಶ ನೀಡಿದೆ.
– ಕೆ.ಕೆ. ಶೈಲಜಾ,
ರಾಜ್ಯ ಆರೋಗ್ಯ ಖಾತೆ ಸಚಿವೆ

1793 ಮಂದಿ ನಿಗಾ
ಚೀನಾದಿಂದ ವಾಪಸಾದವರ ಪೈಕಿ ಕಾಸರಗೋಡಿನ 78 ಮಂದಿ ಸಹಿತ ಕೇರಳದ ಒಟ್ಟು 1793 ಮಂದಿಯಲ್ಲಿ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಈ ಪೈಕಿ 22 ಮಂದಿ ಆಸ್ಪತ್ರೆಯಲ್ಲಿ ದಾಖಲಿಸಿ ನಿಗಾ ವಹಿಸಲಾಗಿದೆ.ಈಗಾಗಲೇ 78 ರಷ್ಟು ಮಂದಿಯನ್ನು ನಿರೀಕ್ಷಿಸಲಾಗಿದೆ. ಇನ್ನಷ್ಟು ಮಂದಿ ರೋಗ ತಪಾಸಣೆಗಾಗಿ ಆರೋಗ್ಯ ಕೇಂದ್ರಗಳಿಗೆ ತಲುಪಬೇಕೆಂದು ವೈದ್ಯಾಧಿಕಾರಿ ಸೂಚಿಸಿದ್ದಾರೆ.
– ಎ.ಪಿ. ದಿನೇಶ್‌ ಕುಮಾರ್‌,
ಜಿಲ್ಲಾ ವೈದ್ಯಾಧಿಕಾರಿ

78 ಮಂದಿ ಮೇಲೆ ನಿಗಾ
ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 78 ಮಂದಿಯನ್ನು ನಿಗಾ ಇರಿಸಲಾಗಿದೆಯೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲಾ ಚೀನಾದಿಂದ ವಾಪಸಾದವರು. ಇವರಲ್ಲಿ ವಿದ್ಯಾರ್ಥಿಯೋರ್ವನಿಗೆ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕಾಸರಗೋಡು ಜನರಲ್‌ ಆಸ್ಪತ್ರೆ ಮತ್ತು ಹೊಸದುರ್ಗದಲ್ಲಿರುವ ಜಿಲ್ಲಾ ಸಹಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋಲೇಶನ್‌ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಅದಕ್ಕಾಗಿ ಅಗತ್ಯದ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಚೀನಾದಿಂದ ವಾಪಸಾದ ವಿದ್ಯಾರ್ಥಿಗಳು ಸಹಿತ 18 ಮಂದಿಯನ್ನು ಕಾಸರಗೋಡು ಜನರಲ್‌ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೊಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next