ವಾಷಿಂಗ್ಟನ್: ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್ 19 ವೈರಸ್ ನಿಂದ ದೊಡ್ಡ ಪ್ರಮಾಣದಲ್ಲಿ ಮಕ್ಕಳು ಪಾರಾಗಿದ್ದಾರೆ. ಆದರೆ ಲಕ್ಷಾಂತರ ಮಕ್ಕಳ ಮೇಲೆ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮ ದೊಡ್ಡ ಮಟ್ಟದ ಆಪತ್ತನ್ನು ತಂದೊಡ್ಡಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.
ಶುಕ್ರವಾರ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ, ಕೋವಿಡ್ ವೈರಸ್ ಭವಿಷ್ಯದಲ್ಲಿ ಮಕ್ಕಳ ಹಕ್ಕುಗಳ ಬಿಕ್ಕಟ್ಟನ್ನು ಸೃಷ್ಟಿಸಲಿದೆ ಎಂದು ಎಚ್ಚರಿಸಿದೆ. ಜಗತ್ತಿನ ಬಹುತೇಕ ದೇಶಗಳು ಕೋವಿಡ್ 19 ಸೋಂಕಿಗೆ ಗುರಿಯಾಗಿದೆ. ಏತನ್ಮಧ್ಯೆ ಕೆಲವು ಮಕ್ಕಳಿಗೆ ಸೋಂಕು ತಗುಲಬಹುದು. ಇದರಿಂದ ಉಳಿದ ಮಕ್ಕಳು ದೊಡ್ಡ ಬೆಲೆ ತೆರಬೇಕಾದೀತು ಎಂದು ಹೇಳಿದೆ.
ಕೋವಿಡ್ ವೈರಸ್ ನಿಂದ ಕೊಳಗೇರಿಯಲ್ಲಿ ವಾಸಿಸುವ, ನಿರಾಶ್ರಿತ, ಅನಿಯೋಜಿತ ಕ್ಯಾಂಪ್ಸ್, ಸಂಘರ್ಷ ವಲಯ, ಡಿಟೆನ್ಶನ್ ಸೆಂಟರ್ ಹಾಗೂ ವಿಕಲಚೇತನ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ವರದಿ ವಿವರಿಸಿದೆ.
ವರದಿ ಬಿಡುಗಡೆ ಮಾಡಿ ವಿಡಿಯೋ ಪ್ರಕಟಣೆ ನೀಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟನಿಯೋ ಗುಟೆರಸ್, ಮಾರಣಾಂತಿಕ ಕೋವಿಡ್ ವೈರಸ್ ಜಗತ್ತಿನಲ್ಲಿರುವ ಮಕ್ಕಳನ್ನು ದೊಡ್ಡ ಗಂಡಾಂತರಕ್ಕೆ ದೂಡಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮುಖಂಡರು, ಪ್ರತಿಯೊಂದು ಕುಟುಂಬದವರು ನಮ್ಮ ಮಕ್ಕಳನ್ನು ರಕ್ಷಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಒಟ್ಟಾರೆ ಕೋವಿಡ್ 19 ಮಹಾಮಾರಿ ಮಕ್ಕಳ ಬದುಕನ್ನೇ ಬುಡಮೇಲು ಮಾಡಲಾಗಿದೆ ಎಂದು ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯಲಿದ್ದಾರೆ. ಲಾಕ್ ಡೌನ್ ನಿಂದಾಗಿ ಕೌಟುಂಬಿಕವಾಗಿ ಒತ್ತಡದ ಮಟ್ಟ ಹೆಚ್ಚಾಗಲಿದೆ. ಅಲ್ಲದೇ ಬಡಕುಟುಂಬಗಳ ದೈನಂದಿನ ಆದಾಯ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆರೋಗ್ಯ ಮತ್ತು ಆಹಾರದ ಖರ್ಚುವೆಚ್ಚಗಳ ಮೇಲೆ ಕಡಿವಾಣ ಬೀಳಲಿದೆ. ಅಲ್ಲದೇ ಇವೆಲ್ಲವೂ ಮುಖ್ಯವಾಗಿ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
ವರದಿಯ ಪ್ರಕಾರ, ಶಿಕ್ಷಣದ ವಿಚಾರದಲ್ಲಿ ಜಗತ್ತಿನ 188 ದೇಶಗಳು ದೇಶಾದ್ಯಂತ ಇರುವ ಶಾಲೆಗಳನ್ನು ಮುಚ್ಚಿವೆ. ಇದರಿಂದ 1.5 ಬಿಲಿಯನ್ ಮಕ್ಕಳು ಹಾಗೂ ಯುವ ಜನತೆ ಮೇಲೆ ಪರಿಣಾಮ ಬೀರುವಂತಾಗಿದೆ. ಇದರಲ್ಲಿ 143 ದೇಶಗಳ 369 ಮಿಲಿಯನ್ ಮಕ್ಕಳು ಶಾಲೆಯ ಮಧ್ಯಾಹ್ನದ ಊಟವನ್ನು ಅವಲಂಬಿಸಿದ್ದವು..ಇದೀಗ ಅವರು ಬೇರೆ ದಾರಿ ಹುಡುಕಿಕೊಳ್ಳಬೇಕಾಗಿದೆ ಎಂದು ವರದಿ ವಿವರಿಸಿದೆ.ಕೆಲವು ಶಾಲೆಗಳು ಆನ್ ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ. ಆದರೆ ಇಂಟರ್ನೆಟ್ ಸೌಲಭ್ಯ ಇಲ್ಲದ ಮಕ್ಕಳಿಗೆ ಹಾಗೂ ಆದಾಯ ಕಡಿಮೆ ಇರುವ ದೇಶಗಳು, ದುಬಾರಿ ಸೇವೆಯಿಂದ ದೊಡ್ಡ ಅನನುಕೂಲವಾಗಲಿದೆ.