Advertisement

ಕೊರೊನಾ ವೈರಸ್‌ ಎಫೆಕ್ಟ್ ಇನ್ನೂ ಇಳಿಯಲಿದೆ ಪೆಟ್ರೋಲ್‌ ಬೆಲೆ

09:58 AM Jan 31, 2020 | sudhir |

ಜಾಗತಿಕ ಮಟ್ಟದಲ್ಲಿ ಚೀನ ಸಹಿತ ಹತ್ತಾರು ರಾಷ್ಟ್ರಗಳನ್ನು ತಲ್ಲಣಗೊಳಿಸಿರುವ ಮಾರಕ ಕೊರೊನಾ ವೈರಸ್‌ ತೈಲ ಬೆಲೆಯ ಮೇಲೂ ಪರಿಣಾಮ ಬೀರುತ್ತಿದೆ. ವೈರಸ್‌ ಇತರೆಡೆಗೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಪಂಚಾದ್ಯಂತ ಆರ್ಥಿಕತೆಯ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆ. ಇದರಿಂದಾಗಿ ತೈಲ ಬೇಡಿಕೆಯೂ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಪರಿಣಾಮವಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆ ಬೆಲೆ ಕಳೆದ ಮೂರು ವಾರಗಳಿಂದ ನಿರಂತರ ಇಳಿಕೆ ಕಂಡಿದೆ. ಈಗಿನ ಅಂದಾಜಿನ ಪ್ರಕಾರ ಮುಂಬರುವ ದಿನಗಳಲ್ಲಿ ತೈಲ ಬೆಲೆ ಮತ್ತಷ್ಟು ಕುಸಿಯಲಿದೆ ಎಂದು ಮಾರುಕಟ್ಟೆ ವರದಿಗಳು ಹೇಳುತ್ತಿವೆ.

Advertisement

ಬೆಲೆ ಇಳಿಕೆಯಾಗಲು ಪ್ರಮುಖ ಕಾರಣ
– ಇಂಧನ ಬೇಡಿಕೆ ನಿರಂತರ ಇಳಿಕೆ
– ಸರಕಾರದ ಪ್ರಯಾಣ ನಿರ್ಬಂಧ
– ಚೀನ ಪ್ರವಾಸಕ್ಕೆ ಜನರ ಹಿಂಜರಿಕೆ
– ವಿಮಾನ ಯಾನಗಳ ಅಮಾನತು

ಇದೇ ಮೊದಲು
2019ರ ಅಕ್ಟೋಬರ್‌ ತಿಂಗಳ ಅನಂತರದ ದಿನಗಳಲ್ಲಿ ಬ್ರೆಂಟ್‌ ಕಚ್ಛಾ ತೈಲ ಬೆಲೆ ಬ್ಯಾರೆಲ್‌ಗೆ 60.56 ಡಾಲರ್‌ಗೆ ಇಳಿದಿದೆ. ಕಳೆದ ವಾರ ಬ್ರೆಂಟ್‌ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 62.07 ಡಾಲರ್‌ಗಳಾಗಿತ್ತು.

ಕುಸಿದ ಬೇಡಿಕೆ
ಹೆಚ್ಚುತ್ತಿರುವ ಕೊರೊನಾ ವೈರಸ್‌ ಪ್ರಕರಣಗಳ ಹಿನ್ನೆಲೆಯಲ್ಲಿ ಚೀನದ ಹಲವಾರು ನಗರಗಳು ದೈನಂದಿನ ಚಟುವಟಿಕೆ ಗಳಿಂದ, ವ್ಯಾಪಾರ ವಹಿವಾಟುಗಳಿಂದ ದೂರ ಉಳಿದಿದ್ದು, ಪ್ರಮುಖ ನಗರಗಳು ಸಂಪೂರ್ಣ ವಾಗಿ ಸ್ಥಗಿತಗೊಂಡಿವೆ. ಜತೆಗೆ ಕಚ್ಚಾ ತೈಲದ ಎರಡನೇ ಅತೀ ದೊಡ್ಡ ಗ್ರಾಹಕ ದೇಶವಾಗಿದ್ದ ಚೀನ ಕಳೆದ ಮೂರು ವಾರ ಗಳಿಂದ ತೈಲ ಆಮದಿನಿಂದ ಹಿಂದೆ ಸರಿದಿದ್ದು, ಕಚ್ಚಾ ತೈಲ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ.

ಮತ್ತಷ್ಟು ಕುಸಿಯಲಿದೆ…!
ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯಬಹುದು ಎಂದು ಮಾರುಕಟ್ಟೆ ವರದಿಗಳು ಉಲ್ಲೇಖ ಮಾಡಿವೆ. ಭಾರತ ಸಹಿತ ಇತರ ರಾಷ್ಟ್ರಗಳಿಂದ ಚೀನಕ್ಕೆ ಪ್ರಯಾಣ ಮಾಡುವ ಜನರು ತಮ್ಮ ಟಿಕೆಟ್‌ಗಳನ್ನು ಹಿಂದೆಗೆದುಕೊಳ್ಳುತ್ತಿದ್ದಾರೆ. ಈ ನಡುವೆ ಕೆಲವು ದೇಶಗಳು ತಮ್ಮ ಪ್ರಜೆಗಳಿಗೆ ಅನಾವಶ್ಯಕ ಪ್ರವಾಸ ಕೈಗೊಳ್ಳಬಾರದು ಎಂದೂ ತಿಳಿಸಿದ್ದು, ಕೆಲವು ದೇಶಗಳು ಚೀನಕ್ಕೆ ವಿಮಾನ ಯಾನ ಸಂಚಾರವನ್ನೂ ಮೊಟಕುಗೊಳಿಸಿವೆ. ಇವೆಲ್ಲದರ ಪರಿಣಾಮವಾಗಿ ತೈಲ ಬೆಲೆ ಮತ್ತಷ್ಟು ಇಳಿಕೆಯಾಗುವ ಸಂಭವ ಇದೆ.

Advertisement

2 ರೂ. ಇಳಿಕೆ
ಕಳೆದ 10 ದಿನಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ ಸುಮಾರು 2 ರೂ.ಗಳಷ್ಟು ಕಡಿಮೆಯಾಗಿದೆ. ಪ್ರತಿದಿನ 10-15 ಪೈಸೆ ಇಳಿಕೆಯಾಗುತ್ತಿರುವುದು ಜನಸಾಮಾನ್ಯರಿಗೆ ಸಮಾಧಾನ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next