ಬೆಂಗಳೂರು: “ರಾಮ ಪಟ್ಟಾಭಿಷೇಕ” ಆಗಿ 15 ದಿನವೂ ಕಳೆದಿಲ್ಲ, ಆಗಲೇ ಲಾಲ್‌ಕೃಷ್ಣನಿಗೆ “ರತ್ನಾಭಿಷೇಕ” ನಡೆದಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾದ ಭವ್ಯ ರಾಮ ಮಂದಿರದಲ್ಲಿ ಬಾಲಕರಾಮನ ಪ್ರಾಣ ಪ್ರತಿಷ್ಠಾಪನೆಯ ಬೆನ್ನಲ್ಲೇ “ಬಿಜೆಪಿಯ ಭೀಷ್ಮ” ಎಂದೇ ಬಣ್ಣಿಸಲ್ಪಡುವ ಲಾಲ್‌ಕೃಷ್ಣ ಆಡ್ವಾಣಿ ಅವರಿಗೆ ದೇಶದ ಸರ್ವೋಚ್ಚ ನಾಗರಿಕ ಗೌರವ ಭಾರತ ರತ್ನ ಸಂದಿದೆ.
ದೇಶದ ಗೃಹ ಸಚಿವರಾಗಿ, ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿರುವ, ಈಗ ದೇಶದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಯನ್ನು ಪ್ರವರ್ಧಮಾನಕ್ಕೆ ತರುವಲ್ಲಿ ಮಹತ್ತರ ಪಾತ್ರ ವಹಿಸಿ ರುವ, ದೇಶದ ಸಾರ್ವಕಾಲಿಕ ಮೇರುನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಆಡ್ವಾಣಿ ಅವರು ಭಾರತ ರತ್ನ ಪುರ ಸ್ಕಾರಕ್ಕೆ ಅರ್ಹರು ಎಂಬುದರಲ್ಲಿ ಎರಡು ಮಾತಿಲ್ಲ. ಅದರ ಜತೆಗೆ ಅವರಿಗೆ ಪ್ರಶಸ್ತಿ ಘೋಷಿಸಿರುವ ಸಂದರ್ಭ ಆಡ್ವಾಣಿ ಕುರಿತಾದ ಅನೇಕ ಚರ್ಚೆಗಳಿಗೆ ತೆರೆ ಎಳೆದಿದೆ.
2014ರಲ್ಲಿ ಮೋದಿ ಪ್ರಧಾನಿಯಾದಾಗ, “ಬಿಜೆಪಿಯ ಮಾರ್ಗದರ್ಶಕ ಮಂಡಲ ರಚಿಸಿ ಅದರಲ್ಲಿ ಆಡ್ವಾಣಿ ಅವ ರನ್ನು ಕುಳ್ಳಿರಿಸಲಾಗಿತ್ತು’ ಎಂಬ ಆರೋಪಗಳಿಂದ ಹಿಡಿದು ಇತ್ತೀಚಿನ ರಾಮಮಂದಿರ ಉದ್ಘಾಟನೆ ವೇಳೆ ಆಡ್ವಾಣಿ ಅವರನ್ನು ಆಹ್ವಾನಿಸದೆ ನಿರ್ಲಕ್ಷಿಸಲಾಗಿತ್ತು ಎಂಬ ಆರೋಪದ ವರೆಗೆ ಬಿಜೆಪಿ, ಕೇಂದ್ರ, ಮೋದಿ ಹಾಗೂ ಆಡ್ವಾಣಿ ಕುರಿತು ಅನೇಕ ಋಣಾತ್ಮಕ ಚರ್ಚೆಗಳು ನಡೆದಿದ್ದವು.
ಪಕ್ಷದಲ್ಲಿ ಆಡ್ವಾಣಿ ಅವರನ್ನು ಮೂಲೆಗುಂಪು ಮಾಡಲಾಗಿದೆ, ಮೋದಿ- ಆಡ್ವಾಣಿ ನಡುವೆ ವಿರಸವಿದೆ ಎಂಬಿತ್ಯಾದಿ ಚರ್ಚೆಗಳು ಎದುರಾಳಿ ರಾಜಕೀಯ ಪಕ್ಷಗಳಷ್ಟೇ ಅಲ್ಲ, ಸ್ವತಃ ಬಿಜೆಪಿಯ ಕೆಲವು ವಲಯಗಳಲ್ಲೂ ನಡೆಯುತ್ತ ಬಂದಿದ್ದವು.
ಗುಜರಾತ್‌ನ ಸಾಮಾನ್ಯ ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಮೋದಿ ಅವರನ್ನು ಮುನ್ನೆಲೆಗೆ ತಂದವರೇ ಆಡ್ವಾಣಿ. 2000ನೇ ಇಸವಿಯಲ್ಲಿ ಮೋದಿಯನ್ನು ಗುಜರಾತ್‌ನ ಮುಖ್ಯಮಂತ್ರಿ ಮಾಡಿದ್ದು, 2002ರ ಗುಜರಾತ್ ಗಲಭೆ ದಂಗೆ ವಿವಾದದ ವೇಳೆ ಮೋದಿಯವರ ಬೆನ್ನಿಗೆ ನಿಂತದ್ದು ಆಡ್ವಾಣಿ. ಇದೇವೇಳೆ ಆಡ್ವಾಣಿ ಅವರ ಚುನಾವಣ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದವರು ಮೋದಿ. ಹೀಗೆ ಗುರು-ಶಿಷ್ಯ ಎನಿಸಿಕೊಂಡಿದ್ದವರ ನಡುವೆ ಅಂತರ ಅಗಾಧವಾಗಿದೆ ಎಂಬಂಥ ಚರ್ಚೆಗಳು 10 ವರ್ಷಗಳಲ್ಲಿ ಬಲವಾಗಿ ನಡೆದಿದ್ದವು. ಇದಕ್ಕೆ ಈಗ ಬಹುತೇಕ ಪೂರ್ಣವಿರಾಮ ಬಿದ್ದಿದೆ ಅಥವಾ ಅಂತಹ ಸಂದೇಶ ರವಾನಿಸುವ ಪ್ರಯತ್ನವನ್ನು ಮೋದಿ ಮಾಡಿದ್ದಾರೆ. ರಾಮಮಂದಿರ ಸಾಕಾರಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಡ್ವಾಣಿಯವರಿಗೆ ಭಾರತ ರತ್ನ ನೀಡಿ ಗೌರವಿಸುವ ನಿರ್ಧಾರವನ್ನು ಸ್ವತಃ ಮೋದಿ ಅವರೇ ಪ್ರಕಟಿಸಿದ್ದಾರೆ. ಇದನ್ನು ಆಡಳಿತಾರೂಢ ಬಿಜೆಪಿಯಷ್ಟೇ ಅಲ್ಲ, ಇತರ ಪಕ್ಷಗಳ ಗಣ್ಯರೂ ಸ್ವಾಗತಿಸಿದ್ದಾರೆ.
ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ಅಧಿಕಾರಸ್ಥರು ತಮ್ಮ ಪರ ಅಥವಾ ಒಲವು ಇರುವವರನ್ನು ಆರಿಸುವುದು, ಆ ಮೂಲಕ ಕೆಲವು ಸಂದೇಶಗಳನ್ನು ರವಾನಿಸುವುದು ರಹಸ್ಯವೇನಲ್ಲ. ಈಗ ಆಡ್ವಾಣಿ ವಿಷಯದಲ್ಲೂ ಹಾಗೆಯೇ ಆಗಿದೆ.