Advertisement

ವನ್ಯಜೀವಿ ಮಾಂಸ ಮಾರಾಟ-ಸೇವನೆಗೆ ನಿಷೇಧ ; ಕೊರೊನಾ ಹಿನ್ನೆಲೆಯಲ್ಲಿ ಚೀನದಿಂದ ಮಹತ್ವದ ಘೋಷಣೆ

10:29 PM Mar 20, 2020 | Hari Prasad |

ಬೀಜಿಂಗ್‌: ಕೊರೊನಾವೈರಸ್‌ ವ್ಯಾಪಿಸುವಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಚೀನ, ದೇಶಾದ್ಯಂತ ವನ್ಯಜೀವಿಗಳ ವ್ಯಾಪಾರ ಮತ್ತು ಅವುಗಳ ಮಾಂಸದ ಸೇವನೆಗೆ ಸಂಪೂರ್ಣವಾಗಿ ನಿಷೇಧ ಹೇರಿ ಸೋಮವಾರ ಆದೇಶ ಹೊರಡಿಸಿದೆ.

Advertisement

ವುಹಾನ್‌ನ ವನ್ಯಜೀವಿ ಮಾರುಕಟ್ಟೆಯೇ ಕೋವಿಡ್‌- 19 ವೈರಸ್‌ನ ಕೇಂದ್ರ ಸ್ಥಾನವಾಗಿರುವ ಕಾರಣ, ಅವುಗಳ ಅಕ್ರಮ ಮಾರಾಟ, ಮಾಂಸದ ವಿಪರೀತ ಸೇವನೆಗೆ ನಿಷೇಧ ಹೇರುವ ಪ್ರಸ್ತಾವವನ್ನು ಅಂಗೀಕರಿಸಲಾಗಿದೆ. ಆ ಮೂಲಕ ಜನರ ಆರೋಗ್ಯ ಮತ್ತು ಜೀವ ರಕ್ಷಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ ಎಂದು ಚೀನ ಘೋಷಿಸಿದೆ.

ಈಗಾಗಲೇ ಚೀನದಲ್ಲಿ ಈ ವೈರಸ್‌ಗೆ 2,592 ಮಂದಿ ಬಲಿಯಾಗಿದ್ದು, 77 ಸಾವಿರ ಮಂದಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಚೀನ ತನ್ನ ವಾರ್ಷಿಕ ಸಂಸತ್‌ ಅಧಿವೇಶನವನ್ನು ಮುಂದೂಡಿಕೆ ಮಾಡಿದೆ.

ಕುವೈಟ್‌, ಬಹ್ರೈನ್‌ನಲ್ಲೂ: ಕುವೈಟ್‌ ಮತ್ತು ಬಹ್ರೈನ್‌ಗೂ ಕೊರೊನಾ ವ್ಯಾಪಿಸಿದ್ದು, ಮೊದಲ ಪ್ರಕರಣಗಳು ಪತ್ತೆಯಾಗಿ ರುವುದಾಗಿ ಹೇಳಿಕೊಂಡಿವೆ. ಇನ್ನು ಚೀನದ ಬಳಿಕ ಅತಿಹೆಚ್ಚು ಪ್ರಕರಣಗಳು ದಕ್ಷಿಣ ಕೊರಿಯಾದಲ್ಲಿ ಪತ್ತೆಯಾಗಿದ್ದು, ಇಲ್ಲಿ ಸೋಂಕಿತರ ಸಂಖ್ಯೆ 833ಕ್ಕೇರಿಕೆಯಾಗಿದೆ. ಇರಾನ್‌ನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಸೋಮವಾರ 12ಕ್ಕೇರಿದೆ. ಇಟಲಿಯಲ್ಲಿ ಸೋಮವಾರ 4ನೇ ಸಾವು ಸಂಭವಿಸಿದೆ.

ಸರ್ವವ್ಯಾಪಿ ವ್ಯಾಧಿ ಎದುರಿಸಲು ಸನ್ನದ್ಧರಾಗಿ
ಕೊರೊನಾವೈರಸ್‌ ವ್ಯಾಪಿಸುತ್ತಿರುವ ತೀವ್ರತೆ ನೋಡಿದರೆ ಆಘಾತವಾಗುತ್ತಿದ್ದು, ಜಗತ್ತು ಈ ಸಂಭಾವ್ಯ ‘ಸರ್ವವ್ಯಾಪಿ ವ್ಯಾಧಿ’ಯನ್ನು ಎದುರಿಸಲು ಸನ್ನದ್ಧವಾಗಬೇಕಿದೆ ಎಂದು ವಿಶ್ವಸಂಸ್ಥೆ ಕರೆ ನೀಡಿದೆ.

Advertisement

ಕೊರೊನಾದಿಂದಾಗಿ ಚೀನದಲ್ಲಿ ಅತ್ಯಂತ ಗಂಭೀರ ಸ್ಥಿತಿ ಉಂಟಾಗಿದೆ ಎಂದೂ ಹೇಳಿದೆ. ಜತೆಗೆ, ಜ.23ರಿಂದ ಫೆ.2ರವರೆಗೆ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗಿದ್ದು, ತದನಂತರ ಇದರ ತೀವ್ರತೆ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ ಎಂದೂ ತಿಳಿಸಿದೆ.

ಭಾರತೀಯ ಮಹಿಳೆಗೆ ಥಳಿತ:
ಕೊರೊನಾವೈರಸ್‌ನ ಕಾರಣ ಹೇಳಿ ಚೀನದ ಮಹಿಳೆಗೆ ಜನಾಂಗೀಯ ನಿಂದನೆ ಮಾಡಿದ್ದನ್ನು ವಿರೋಧಿಸಿದ್ದಕ್ಕೆ ವ್ಯಕ್ತಿಯೊಬ್ಬ ಭಾರತೀಯ ಮೂಲದ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಲಂಡನ್‌ನಲ್ಲಿ ನಡೆದಿದೆ.

ಮೀರಾ ಸೋಲಂಕಾ(29) ಎಂಬವರೇ ಹಲ್ಲೆಗೊಳಗಾದವರು. ತಮ್ಮ ಚೀನೀ ಗೆಳತಿ ಮ್ಯಾಂಡಿ ಹುವಾಂಗ್‌ರನ್ನು ನಿಂದಿಸಿದ್ದಕ್ಕೆ ಮೀರಾ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಆತ ಮೀರಾರ ತಲೆಗೆ ಹೊಡೆದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next