ತಿರುವನಂತಪುರ: ಹೊಸತಾಗಿ ಆರು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದೇವರ ಸ್ವಂತ ರಾಜ್ಯ- ಕೇರಳ ಕಂಗಾಲಾಗಿದೆ. ಮಾ. 31ರವರೆಗೆ ಶಾಲೆ, ಕಾಲೇಜುಗಳು, ಚಿತ್ರಮಂದಿರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಠಿನ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಇಟೆಲಿಯಿಂದ ಆಗಮಿಸಿದ ದಂಪತಿ ಜತೆಗೆ ವಾಸಿಸುತ್ತಿರುವ ಇಬ್ಬರಿಗೆ ಸೋಂಕು ಇರುವುದು ದೃಢವಾಗಿದೆ. ಅವರು ಪಟ್ಟಣಂತಿಟ್ಟದ ರನ್ನೆ ಎಂಬಲ್ಲಿಯ ನಿವಾಸಿಗಳಾಗಿದ್ದಾರೆ. ವಯಸ್ಸಾಗಿರುವ ಅವರ ಹೆತ್ತವರಿಗೂ ಸೋಂಕು ತಗುಲಿದೆ. ಹೊಸತಾಗಿ ದೃಢಪಟ್ಟ ಆರು ಮಂದಿಗಳ ಪೈಕಿ ಅವರೂ ಸೇರಿದ್ದಾರೆ ಎಂದು ಸಿಎಂ ಪಿಣರಾಯಿ ಮತ್ತು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
ದೇಶದಲ್ಲಿ ಮೊದಲ ಮೂರು ವೈರಸ್ ಪ್ರಕರಣಗಳು ಪತ್ತೆ ಯಾಗಿದ್ದೇ ಕೇರಳದಲ್ಲಿ. ಹೀಗಾಗಿ, ಆ ರಾಜ್ಯದಲ್ಲಿ ಎರಡನೇ ಆವೃತ್ತಿಯಲ್ಲಿ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು 12 ವೈರಸ್ ಸೋಂಕು ದೃಢವಾಗಿದೆ. ಸಂಜೆಯ ವೇಳೆಗೆ ಮತ್ತೆ 2 ಪ್ರಕರಣಗಳು ದೃಢ ಪಟ್ಟವು. ಕರ್ನಾಟಕದಲ್ಲಿ 3, ಮಹಾರಾಷ್ಟ್ರದಲ್ಲಿ ಹೊಸತಾಗಿ 2 ಪ್ರಕರಣಗಳು ದೃಢವಾಗಿರುವುದರಿಂದ ದೇಶದಲ್ಲಿ ಒಟ್ಟು 58 ಪ್ರಕರಣಗಳು ಗೊತ್ತಾದಂತಾಗಿವೆ.
ಸಿನೆಮಾ, ಶಿಕ್ಷಣ ಸಂಸ್ಥೆಗಳು ಬಂದ್: ಹೊಸ ಪ್ರಕರಣಗಳ ಹಿನ್ನೆಲೆಯಲ್ಲಿ ಮಾ. 31ರ ವರೆಗೆ ಸಿನೆಮಾ ಮಂದಿರಗಳು, ಶಾಲೆ, ಕಾಲೇಜುಗಳನ್ನು ಮುಚ್ಚಲು ಆದೇಶ ನೀಡಲಾಗಿದೆ 1-7 ತರಗತಿ, ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳ ಪರೀಕ್ಷೆಗಳು ಶುರುವಾಗಿದ್ದರೂ ಸದ್ಯಕ್ಕೆ ಅದನ್ನು ಮುಂದುವರಿಸದೇ ಇರಲು ನಿರ್ಧರಿಸಲಾಗಿದೆ ಎಂದಿದ್ದಾರೆ ಪಿಣರಾಯಿ ವಿಜಯನ್. ಆದರೆ ಹತ್ತನೇ ತರಗತಿ, ಪದವಿ ಪೂರ್ವ, ವೊಕೇಷನಲ್ ಹೈಯರ್ ಸೆಕೆಂಡರಿ ಕೋರ್ಸ್‌ಗಳ ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯಲಿವೆ ಎಂದಿದ್ದಾರೆ.
ಧಾರ್ಮಿಕ ಉತ್ಸವಗಳು ಬೇಡ: ವೈರಸ್ ಹಿನ್ನೆಲೆಯಲ್ಲಿ ದೇಗುಲ, ಚರ್ಚ್‌ಗಳಲ್ಲಿ ಸಾರ್ವಜನಿಕರು, ಭಕ್ತರು ಪಾಲ್ಗೊಳ್ಳುವ ಧಾರ್ಮಿಕ ಉತ್ಸವಗಳು ಬೇಡ ಎಂದು ಸಿಎಂ ಮನವಿ ಮಾಡಿದ್ದಾರೆ. ಮದುವೆ ಮತ್ತು ಇತರ ಕಾರ್ಯಕ್ರಮಗಳು ನಡೆಯುವಂತಿದ್ದರೂ, ಹೆಚ್ಚು ಜನರು ಸೇರುವುದು ಬೇಡ ಎಂದು ಹೇಳಿದ್ದಾರೆ.
ಸರಕಾರಿ ಮಟ್ಟದ ಕಾರ್ಯಕ್ರಮಗಳೆಲ್ಲವೂ ಮುಂದೂಡಿಕೆಯಾಗಿದೆ. ಸರಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಿ ವ್ಯವಸ್ಥೆ ಮಾ. 31ರ ವರೆಗೆ ರದ್ದುಗೊಳಿಸಲಾಗಿವೆ. ಜತೆಗೆ 14 ಜಿಲ್ಲಾಧಿಕಾರಿ ಗಳು ಪರಿಸ್ಥಿತಿ ಮೇಲೆ ನಿಗಾ ಇರಿಸುವಂತೆಯೂ ಸೂಚನೆ ನೀಡಲಾಗಿದೆ ಎಂದಿದ್ದಾರೆ ಸಿಎಂ ವಿಜಯನ್.