Advertisement
ಮಾರಕ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಪಶ್ಚಿಮ ಬಂಗಾಳದ ಪಿನಾಕಿನಿ, ಉತ್ತರಾ ಖಂಡದ ಝೂಲಾಘಾಟ್ ಮತ್ತು ಪಿತ್ರೋಘಡದ ಜೌಲ್ಜಿಬಿ ಎಂಬಲ್ಲಿಗೆ ತಜ್ಞರ ತಂಡಗಳನ್ನು ಕಳುಹಿಸಿಕೊಡಲಾಗಿದೆ. ನೇಪಾಳದ ಜತೆಗೆ ಅಂತಾರಾಷ್ಟ್ರೀಯ ಗಡಿ ಹೊಂದಿರುವ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಪಶ್ಚಿಮ ಬಂಗಾಳ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರ ಜತೆಗೆ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸೂದನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಭಾನುವಾರದವರೆಗೆ ದೇಶಕ್ಕೆ 137 ವಿಮಾನಗಳ ಮೂಲಕ 29, 707 ಪ್ರಯಾಣಿಕರು ಆಗಮಿಸಿದ್ದಾರೆ.
Related Articles
Advertisement
ಚೀನಾದಿಂದ ಬರುವ ಎಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಇದರ ಜತೆಗೆ ನೇಪಾಳ ಜತೆಗೆ ಇರುವ ಗಡಿ ಮತ್ತು ಏಕೀಕೃತ ತಪಾಸಣಾ ಕೇಂದ್ರದ ಮೂಲಕ ಬರುವ ಪ್ರಯಾಣಿಕರ ಮೇಲೆ ಕೂಡ ನಿಗಾ ಇರಿಸಲಾಗಿದೆ.
ಭಾರತದ ನಾಗರಿಕರನ್ನು ವುಹಾನ್‌ನಿಂದ ತೆರವುಗೊಳಿಸುವ ಬಗ್ಗೆ ವಿದೇಶಾಂಗ ಸಚಿವಾಲಯ ಚೀನಾ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಿದೆ.
ವುಹಾನ್‌ನಲ್ಲಿ 250 ರಿಂದ 300 ಮಂದಿ ಭಾರತೀಯ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ನಾಗರಿಕ ವಿಮಾನ ಸಚಿವಾಲಯ ವಿದ್ಯಾರ್ಥಿಗಳನ್ನು ಕರೆ ತರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನಿರ್ದೇಶನ ನೀಡಬೇಕು ಎಂದು ಗೌಬಾ ಹೇಳಿದ್ದಾರೆ.
ದೇಶದ ವಿವಿಧ ಏರ್‌ಪೋರ್ಟ್‌ಗಳಲ್ಲಿ ಇದುವರೆಗೆ 137 ವಿಮಾನಗಳ ಮೂಲಕ ಆಗಮಿಸಿದ 29, 707 ಮಂದಿ ಪ್ರಯಾಣಿಕರನ್ನು ಪರೀಕ್ಷೆ ಮತ್ತು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ.
ಅಂತಾರಾಷ್ಟ್ರೀಯ ಗಡಿ ಹೊಂದಿರುವ ರಾಜ್ಯಗಳಲ್ಲಿ ವಲಸೆ ವಿಭಾಗದ ಪರಿಶೀಲನೆ ಕೈಗೊಳ್ಳುವ ಸಶಸ್ತ್ರ ಸೀಮಾ ಬಲ, ಬಿಎಸ್‌ಎಫ್ ಸಿಬ್ಬಂದಿಗೆ ಆರೋಗ್ಯ ತಪಾಸಣೆ ನೀಡುವ ನಿಟ್ಟಿನಲ್ಲಿ ಸಿಬ್ಬಂದಿ ಒದಗಿಸಲು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಾಗಿದೆ.
ಆಸ್ಪತ್ರೆಗೆ ಚೀನಾ ಮಹಿಳೆ: ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಚೀನಾದಿಂದ ಆಗಮಿಸಿದ ಮಹಿಳೆ ಜ್ವರ ಇದೆ ಎಂದು ತಪಾಸಣೆಗೆ ಬಂದಿದ್ದ ವೇಳೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈ ಏರ್‌ಪೋರ್ಟ್‌ನಲ್ಲಿ ಜ.18ರಿಂದ ಒಂಭತ್ತು ದಿನಗಳ ಅವಧಿಯಲ್ಲಿ 3, 756 ಮಂದಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ಐವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅವರ ಕಫವನ್ನು ಪುಣೆಯ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ.
ಮೊದಲ ಸಾವು: ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಮಾರಕ ವೈರಸ್‌ಗೆ ಮೊದಲ ಸಾವು ಸಂಭವಿಸಿದೆ ಎಂದು ಸರ್ಕಾರ ಖಚಿತಪಡಿಸಿದೆ. 50 ವರ್ಷ ವಯೋಮಿತಿಯ ಆತ ವುಹಾನ್‌ಗೆ ತೆರಳಿದ್ದ. ಅಲ್ಲಿ ಆತನಿಗೆ ಸೋಂಕು ತಗುಲಿತ್ತು. ಇದೇ ವೇಳೆ ಚೀನಾ ಪ್ರಧಾನಿ ಲಿ ಕೆಕಿಯಾಂಗ್ ವುಹಾನ್‌ಗೆ ತೆರಳಿ ಅಲ್ಲಿನ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಅದೇ ವೇಳೆ, ಸೋಂಕಿನಿಂದ ಇದುವರೆಗೆ ಅಸುನೀಗಿದವರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಸುಮಾರು 2,700 ಅಧಿಕ ಮಂದಿಗೆ ಸೋಂಕು ತಗುಲಿದೆ.
ಇತರ ದೇಶಗಳಲ್ಲಿ: ಥೈಲ್ಯಾಂಡ್ 7, ಜಪಾನ್ 3, ದಕ್ಷಿಣ ಕೊರಿಯಾ 3, ಅಮೆರಿಕ 3, ವಿಯೆಟ್ನಾಂ 2, ಸಿಂಗಾಪುರ 4, ಮಲೇಷ್ಯಾ 3, ನೇಪಾಳ 1, ಫ್ರಾನ್ಸ್ 3, ಆಸ್ಟ್ರೇಲಿಯಾಗಳಲ್ಲಿ 4 ಪ್ರಕರಣಗಳು ವರದಿಯಾಗಿವೆ.ಭಾನುವಾರ ವರೆಗೆ ವುಹಾನ್‌ನಿಂದ 50 ಲಕ್ಷ ಮಂದಿ ಬೇರೆ ನಗರಗಳಿಗೆ ವಲಸೆ ಹೋಗಿದ್ದಾರೆ ಎಂದು ಅಲ್ಲಿನ ಮೇಯರ್ ತಿಳಿಸಿದ್ದಾರೆ. 436 ಮಂದಿಯ ಪರೀಕ್ಷೆ: ಚೀನಾದಿಂದ ಕೇರಳಕ್ಕೆ ಇದುವರೆಗೆ ಆಗಮಿಸಿರುವ 436 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಐವರನ್ನು ತೀರಾ ನಿಗಾ ಸ್ಥಿತಿಯಲ್ಲಿ ಇರಿಸಲಾಗಿದೆ. ಎರ್ನಾಕುಳಂನಲ್ಲಿ ಮೂವರು, ತಿರುವನಂತಪುರ ಮತ್ತು ತ್ರಿಶ್ಶೂರ್‌ನಲ್ಲಿ ತಲಾ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಲ್ಲಿ ನಿಗಾಕ್ಕೆ ನಿರ್ಧಾರ
ಕರ್ನಾಟಕದಲ್ಲಿ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೀನಾ ಭಾಗದಿಂದ ಬಂದ 2,572 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ಮೂವರಿಗೆ ಸೋಂಕು ತಗುಲಿದೆ ಎಂಬ ಶಂಕೆಯಿಂದ ರಕ್ತ ಮಾದರಿ ಪರೀಕ್ಷೆ ನಡೆಸಲಾಗಿದೆ. ಅವರು ಮಾತ್ರವಲ್ಲದೆ, ವುಹಾನ್‌ನಿಂದ ಆಗಮಿಸಿರುವ ಆರು ಮಂದಿಯ ಮೇಲೆ ಮುಂದಿನ 28 ದಿನಗಳ ಕಾಲ ನಿಗಾ ವಹಿಸಲು ತೀರ್ಮಾನಿಸಲಾಗಿದೆ. ಪರೀಕ್ಷಿಸಿಕೊಳ್ಳಿ: ಕೊರೊನಾ ವೈರಸ್ ನ್ಯುಮೋನಿಯಾ ಲಕ್ಷಣ ಹೊಂದಿದೆ. ಜನದಟ್ಟಣೆ ಪ್ರದೇಶಗಳಲ್ಲಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹೀಗಾಗಿ, ತೀವ್ರ ಜ್ವರ, ತಲೆನೋವು, ಮೈಕೈ ನೋವು, ಮೂಗು ಸೋರುವಿಕೆ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡು ಬರುತ್ತವೆ. ಮಹಾನಗರಗಳಲ್ಲಿ ನ್ಯೂಮೋನಿಯಾ ಲಕ್ಷಣಗಳು ಕಂಡುಬಂದವರು ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ವೈರಸ್‌ಗೆ ಬಿದ್ದ ಷೇರು ಪೇಟೆ
ಮಾರಕ ವೈರಸ್ ಭೀತಿಗೆ ಸೋಮವಾರ ಬಾಂಬೆ ಷೇರು ಪೇಟೆ ಕುಸಿದಿದೆ. ದಿನದ ಅಂತ್ಯಕ್ಕೆ 458.07 ಪಾಯಿಂಟ್ಸ್‌ಗಳಷ್ಟು ಸೂಚ್ಯಂಕ ಪತನವಾಗಿದೆ. ಇದು ನಾಲ್ಕು ತಿಂಗಳ ಅವಧಿಯಲ್ಲಿ ಇದು ಎರಡನೇ ಅತಿದೊಡ್ಡ ಪತನವಾಗಿದೆ. ಬಿಎಸ್‌ಇನಲ್ಲಿ ಮಧ್ಯಂತರ ವಹಿವಾಟಿನಲ್ಲಿ 500 ಪಾಯಿಂಟ್ಸ್‌ಗಳಷ್ಟು ಕುಸಿದಿದೆ. ದಿನದ ಅಂತ್ಯಕ್ಕೆ 41, 155.12ರಲ್ಲಿ ವಹಿವಾಟು ಮುಕ್ತಾಯವಾಯಿತು. ನಿಫ್ಟಿ ಕೂಡ 129 ಪಾಯಿಂಟ್‌ಗಳಷ್ಟು ಅಂದರೆ 12, 119ರಲ್ಲಿ ಕೊನೆಗೊಂಡಿತು.