Advertisement
ಹಬ್ಬ ಮುಗಿದು ಹೀಗೇ ಒಂದೆರೆಡು ದಿನ ಕಳೆಯುತ್ತಲೇ ದೂರದಲ್ಲೆಲ್ಲೋ ನಮ್ಮಲ್ಲಿಯ ಹುಲಿಕುಣಿತ ನೆನಪಿಸುವ ಸಿಂಹ ನೃತ್ಯದ ತಂಡ ಅಂಗಡಿಗಳಿಗೋ ಮನೆಗಳಿಗೋ ಭೇಟಿ ಕೊಡುತ್ತವೆ. ಹೊಸ ವರ್ಷದ ಶುಭಾರಂಭಕ್ಕೆ ಅಶುಭಗಳನ್ನೆಲ್ಲ ಹೊಡೆದೋಡಿಸಲು ತಮಟೆ, ಡ್ರಮ್ಮು ಕುಟ್ಟುತ್ತ ಸಿಂಹದ ವೇಷ ತೊಟ್ಟ ನಾಲ್ಕಾರು ಜನ ತರಹೇವಾರಿ ನಾಟ್ಯಮಾಡುತ್ತ ಬರುವ ಶಬ್ದ ಅಕ್ಕಪಕ್ಕದ ರಸ್ತೆಗಳಿಂದ ಕೇಳಿಸಲು ಶುರುವಾಗುತ್ತದೆ. ಹದಿನೈದು ದಿನವಾದರೂ ಈ ಶಬ್ದ ಇರುವಂತದ್ದು. ಈ ಸಾರಿ ಮಾತ್ರ ಕೇವಲ ಒಂದೆರಡು ದಿನ ಮಾತ್ರ ಈ ಶಬ್ದ ಕೇಳಿಸಿತು. ಈ ಶಬ್ದವನ್ನು ಮೀರಿದ ಗಲಾಟೆಯೊಂದು ಶುರುವಾಗಿದೆ.
ಚೀನೀಯರ ಒಂದೇ ಒಂದು ಮಹತ್ವದ ಹಬ್ಬ ಈ ಹೊಸವರ್ಷಾಚರಣೆ. ಈ ಹಬ್ಬದ ಸಂಭ್ರಮದಲ್ಲಿ ತಮ್ಮ ತಮ್ಮ ಮನೆಗೆ ತೆರಳುವ ಚೀನೀ ಕಾರ್ಮಿಕರ ಬೃಹತ್ ಸಮುದಾಯ. ಆ ದೊಡ್ಡ ದೇಶದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾವಿರಾರು ಮೈಲಿ ಪ್ರಯಾಣ ಮಾಡುವುದು ಈ ಪ್ರಪಂಚದ ಒಂದು ಅದ್ಭುತ ಎನಿಸಿಕೊಂಡಿದೆ. ಭೂಮಿಯಿಂದ ಹೊರಗೆ ಅಂತರಿಕ್ಷದಿಂದಲೂ ಈ ಮಾನವನ ಸಾಮೂಹಿಕ ಪ್ರಯಾಣವನ್ನು ಗುರುತಿಸಬಹುದಂತೆ! ಅಲ್ಲಿನ ಹೆದ್ದಾರಿಗಳಲ್ಲಿ ಹರಿದಾಡುವ ವಾಹನ ದಟ್ಟಣೆ ಹಾಗಿರುತ್ತದೆ. ಇಂಥಾ ಸಮಯದಲ್ಲಿ ಹಬ್ಬಕ್ಕಾಗಿ ನಾವು ಕುಂಬಳಕಾಯಿ, ಚೀನೀಕಾಯಿ ಕೊಯ್ದು ತಂದು ವಿಶೇಷ ಅಡುಗೆ ಮಾಡಿದಂತೆ, ನಮ್ಮ ನೆರೆ ದೇಶದ ಚೀನೀ ಬಾಂಧವರು ಬಾವಲಿಗಳನ್ನೋ ಎಳೆಯ ಮಿಡಿ ನಾಗರವನ್ನೋ ಹಾಕಿ ಹಬ್ಬದಡುಗೆ ಮಾಡುವುದು ಸಾಮಾನ್ಯ. ಈ ಬಾರಿ ಕೂಡ ಚೀನೀಯರೆಲ್ಲ ಹೀಗೆ ಹಬ್ಬದಡುಗೆ ತಿನ್ನುತ್ತಾ ಖುಷಿಯಾಗಿದ್ದರು. ಅಷ್ಟರಲ್ಲೇ ಹುಬೈ ಪ್ರಾಂತ್ಯದ ವೂಹಾನ್ ಎಂಬ ಪಟ್ಟಣದಲ್ಲಿ ಹಲವಾರು ಜನ ನ್ಯುಮೋನಿಯಾ ರೀತಿಯ ಜ್ವರದಿಂದ ಆಸ್ಪತ್ರೆ ಸೇರತೊಡಗಿದರು. ಈ ರೀತಿ ಜನರು ಆಸ್ಪತ್ರೆ ಸೇರುವ ಪ್ರಮಾಣ ಎಷ್ಟಾಯಿತೆಂದರೆ ಆಸ್ಪತ್ರೆಗಳಲ್ಲಿ ಜಾಗವಿಲ್ಲದೇ ಅಕ್ಕಪಕ್ಕದ ಊರು, ಪುರ, ಪಟ್ಟಣಗಳ ಆಸ್ಪತ್ರೆಗಳೂ ಜನರಿಂದ ತುಂಬಿ ತುಳುಕತೊಡಗಿತು. ತಾಂತ್ರಿಕ ಪರಿಣತಿಯಲ್ಲಿ ಬಹಳ ಮುಂದಿರುವ ಚೀನಾ ಕೇವಲ ಆರೇಳು ದಿನಗಳಲ್ಲೇ ಒಂದು ಹೊಸ ಆಸ್ಪತ್ರೆ ಕಟ್ಟಿಸಿ ದಾಖಲೆ ಸೃಷ್ಟಿಸಿತು. ವೂಹಾನ್‌ನಲ್ಲಿರುವ ಮೀನು ಮಾರುಕಟ್ಟೆಯಿಂದಲೇ ಈ ಕಾಯಿಲೆ ಬಂತೆಂದೂ, ಬಾವಲಿಯೋ, ಹಾವೋ ತಿಂದಿದ್ದರಿಂದ ಪ್ರಾಣಿಗಳಲ್ಲಿ ಮಾತ್ರ ಇರುವ ಕೊರೊನಾ ಎಂಬ ಗುಂಪಿನ ಹೊಸ ವೈರಸ್ ಮನುಷ್ಯನ ರಕ್ತದ ರುಚಿ ಹತ್ತಿ ತನ್ನ ನಾಲಗೆಯನ್ನು ಇಡೀ ಚೀನಾಕ್ಕೇ ಚಾಚಿ ಅದೂ ಸಾಲದೆಂದು ಭೂಮಂಡಲದ ಅನೇಕಾನೇಕ ಕಡೆಗೂ ವಿಸ್ತರಿಸತೊಡಗಿತು. ಈ ಕಾಯಿಲೆಯನ್ನು ಅದರ ಮೂಲವನ್ನು ಮೊತ್ತಮೊದಲು ಕಂಡುಹಿಡಿದ ವೈದ್ಯ ಇದೇ ಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿದರು. ವೈರಸ್ ಮಾತ್ರ ತನ್ನ ನರಮೇಧವನ್ನು ಇನ್ನೂ ಮುಂದುವರೆಸಿದೆ. ಚೀನಾದಲ್ಲೀಗಾಗಲೇ ಸಾವಿನ ಸಂಖ್ಯೆ ಎಂಟುನೂರರ ಗಡಿ ದಾಟಿದೆ. ವೂಹಾನ್ ಜೊತೆಗೆ ಯಾರಿಗೂ ಒಡನಾಟ ಬೇಡ. ಇಡೀ ಚೀನಾವೇ ವೂಹಾನ್‌ನ್ನು ಸುಳಿದುಬಿಟ್ಟಿದೆ. ಅಲ್ಲಿನ ಲಕ್ಷಾಂತರ ಜನ ಗೃಹಬಂಧನದಲ್ಲಿದ್ದಾರೆ. ಅಲ್ಲಿದ್ದ ನಮ್ಮ ದೇಶದ ಅನೇಕರನ್ನು ಈಗಾಗಲೇ ಮೋದಿ ಸರ್ಕಾರ ವಿಶೇಷ ವ್ಯವಸ್ಥೆ ಮಾಡಿ ಕರೆಸಿಕೊಂಡಿದೆ. ಇನ್ನೂ ಉಳಿದ ಸ್ವಲ್ಪ ನಮ್ಮ ದೇಶದ ಜನ “ಪ್ರೇತದ ಊರಿಂದ’ ಮರಳಿ ಗೂಡಿಗೆ ತೆರಳಲು ಹಾತೊರೆಯುತ್ತಿದ್ದಾರೆ.
Related Articles
ನಾನಿರುವ ಸಿಂಗಾಪುರಕ್ಕೂ ಚೀನಾಕ್ಕೂ ಹೊಕ್ಕುಳ ಬಳ್ಳಿಯ ಸಂಬಂಧ. ಚೀನಾದೊಂದಿಗೆ ವ್ಯಾಪಾರ, ವಾಣಿಜ್ಯ, ಊಟ, ಆಹಾರ, ವಿಹಾರ, ವಿವಾಹ ಎಲ್ಲಾ ರೀತಿಯ ಸಂಬಂಧವನ್ನು ನನ್ನೀ ದೇಶವಾಸಿಗಳು ಹೊಂದಿ¨ªಾರೆ. ಹಾಗಾಗಿಯೇ ಚೀನಾದಲ್ಲಿ ಜೋರಾಗಿ ಯಾರಾದರೂ ಸೀನಿದರೂ ಇಲ್ಲಿಗದು ತಲುಪುತ್ತದೆ. ಚೀನಾ ಹೊರಪ್ರಪಂಚ ಸಂಬಂಧವನ್ನೆಲ್ಲ ಕಡಿದುಕೊಂಡಿದೆ. ವಿಮಾನಯಾನ ರದ್ದುಗೊಳಿಸಿದೆ. ಸಿಂಗಾಪುರ ಕೂಡ ಹಾಗೇ ಮಾಡಿ, ಚೀನಾದಿಂದ ಮರಳಿದ ತನ್ನ ನಾಗರೀಕರನ್ನೂ, ಶಾಲಾ ವಿದ್ಯಾರ್ಥಿಗಳನ್ನೂ, ವಿದೇಶಿ ಪ್ರವಾಸಿಗರನ್ನೂ ವಿಮಾನ ನಿಲ್ದಾಣದಲ್ಲೇ ತಪಾಸಣೆ ಮಾಡಿ ಮೈಗರಮ್ ಇರುವವರನ್ನು ಅಲ್ಲಿಂದಲೇ ದೂರದ ಕ್ಯಾಂಪ್‌ಗೆ ಸ್ಥಳಾಂತರಿಸುತ್ತಿದ್ದಾರೆ. ಆದರೂ ಇಲ್ಲಿ ದಿನದಿನವೂ ಹೊಸ ಹೊಸ ರೋಗಿಗಳ ಹೆಸರು “ವೈರಲ್’ ಆಗುತ್ತಿದೆ! ವೈರಸ್‌ನಿಂದ ವೈರಲ್ ಆಗುವ ದುರಂತ ಯಾವ ಪಾಪಿಗೂ ಬರಬಾರದು. ಹದಿನೈದು ದಿನ ಸಾಕಿದ ನಾಯಿಯ ಹಾಗೆ ಅವರು ಹಾಕಿದ್ದನ್ನು ತಿನ್ನುತ್ತ ಗಳಿಗೆಗೊಮ್ಮೆ ಡಾಕ್ಟರ್ ಹತ್ತಿರ ಚುಚ್ಚಿಸಿಕೊಳ್ಳುತ್ತ ಇರಬೇಕಾದ ಕರ್ಮ, ಜೊತೆಗೇ ಔಷಧವಿಲ್ಲದ ವೈರಾಣುವಿನೊಡನೆ ಸೆಣಸಾಟ! ಅಬ್ಟಾ ನೆನೆಸಿಕೊಂಡರೇ ಭಯವಾಗುತ್ತದೆ.
Advertisement
ಮೊದಲೇ ಸ್ವಚ್ಛತೆ ಎನ್ನುವ ಸಿಂಗಾಪುರಕ್ಕೀಗ ಹುಚ್ಚೇ ಹಿಡಿದಿದೆ. ಮನೆ, ಮಠ, ಬಸ್ಸು, ಕಾರು, ರೈಲು, ಸ್ಟೇಶನ್ನು, ಶಾಲೆ, ಮಂದಿರ, ಮಸೀದಿ, ಮಾರುಕಟ್ಟೆ ಎಲ್ಲವನ್ನೂ ಡೆಟ್ಟಾಲ್ ಹಾಕಿ ದಿನಕ್ಕೆ ಮೂರು ಸಲ ಉಜ್ಜುತ್ತಿ¨ªಾರೆ! ಆದರೂ ದಿನವೂ ಮೂರಾದರೂ ರೋಗಿಗಳನ್ನು ವೈರಾಣು ಅಂಟುತ್ತಿದೆ. ಇಲ್ಲಿನ ಸರ್ಕಾರ ಮೊನ್ನೆ ಆಪತ್ಕಾಲೀನ ಪರಿಸ್ಥಿತಿಯನ್ನು ಹಳದಿಯಿಂದ ಕಿತ್ತಳೆಗೆ ಏರಿಸಿತು! ಅಲ್ಲಿಂದ ಶುರುವಾಯಿತು ನೋಡಿ ಜನರ ದೊಂಬರಾಟ!
ಕೊರೊನಾ, ಬಿಟ್ಟುಬಿಡು ನಮ್ಮನ್ನಾ…ವೈರಸ್‌ಗೆ ಹೆದರಿ ಇಷ್ಟು ದಿನ ಮನೆಯಲ್ಲೇ ಅವಿತಿದ್ದ ಇಲಿಗಳೆಲ್ಲ ಬಿಲದಿಂದ ಹೊರಬಿದ್ದಂತೆ ಬುಳುಬುಳನೆ ಎದ್ದು ಓಡಿ ತಳ್ಳು ಗಾಡಿ ಹಿಡಿದು ಸೂಪರ್ ಮಾರ್ಕೆಟ್‌ನಲ್ಲಿ ಸಾಮಾನುಗಳನ್ನೆಲ್ಲ ತುಳುಕಾಡುವಷ್ಟು ತುಂಬಿಸಿಕೊಂಡು ಬರತೊಡಗಿದರು. ಸ್ವತಃ ಇಲ್ಲಿನ ಪ್ರಧಾನಿ, “ಸಾಕ್ರಪ್ಪಾ ಈ ಹುಚ್ಚುತನ, ನಿಮಗೆಲ್ಲ ಸಾಕು ಬೇಕಾಗುವಷ್ಟು ಸಾಮಾನು ನಮ್ಮ ದಾಸ್ತಾನಿನಲ್ಲಿದೆ. ಈ ರೀತಿ ಯುದ್ಧ ಭೀತಿಯ ಹಾಗೆ ಮಾಡಬೇಡಿ’ ಎನ್ನಬೇಕಾಯಿತು. ಆದರೂ ಇಲ್ಲೀಗ ಮುಖಕ್ಕೆ ಮಾಸ್ಕ್ ಸಿಗುತ್ತಿಲ್ಲ. ಹ್ಯಾಂಡ್ ಸ್ಯಾನಿಟೈರ್ಸ್, ಬ್ರೆಡ್, ಟಿಶ್ಯೂ ಮುಂತಾದ ಸಾಮಾನು ಸಿಗುತ್ತಿಲ್ಲ. ಅವೆಲ್ಲಾ ಯಾರ್ಯಾರದ್ದೋ ಮನೆಯ ಅಟ್ಟ ಸೇರಿ ಕೂತಿವೆ! ನಮ್ಮ ಮನೆಯಲ್ಲೂ ಯುದ್ಧದ ಕರಿನೆರಳು ಕವಿದಿದೆ. ಬೆಳಗೆದ್ದು ಆಫೀಸಿಗೆ ಓಡುವಾಟ ಇಲ್ಲ. ಮನೆಯೊಳಗೇ ಇದ್ದೂ ಇದ್ದೂ ಮೈಕೈ ನೋವು ಬರುತ್ತಿದೆ. ಈ ತುರ್ತು ಪರಿಸ್ಥಿತಿ ಸದ್ಯಕ್ಕಂತೂ ಮುಗಿಯುವ ಹಾಗೆ ಕಾಣುತ್ತಿಲ್ಲ. ನಮ್ಮಲ್ಲಿ ಅಂದರೆ ನಮ್ಮ ದೇಶದಲ್ಲಿ ಹೋಮ-ಹವನ ಹರಕೆಯ ಮೊರೆಯನ್ನಾದರೂ ಹೋಗಬಹುದಿತ್ತು. ಇಲ್ಲಿ ಆ ಸೌಕರ್ಯವೂ ಇಲ್ಲ. “ಕೊರೊನಾ, ಬಿಟ್ಟು ಬಿಡು ನಮ್ಮನ್ನಾ …’ ಅಂತ ದೇವರನ್ನ ಮನಸ್ಸಿನಲ್ಲೇ ಮೊರೆಯಿಡುವುದೊಂದೇ ನಮಗಿರುವ ದಾರಿ. ಜಯಶ್ರೀ ಭಟ್