ಜಿನೇವಾ: ಕೊರೊನಾ ತೀವ್ರತೆ ಎಲ್ಲೆಡೆ ಕಡಿಮೆಯಾಗಿದೆ ಎಂದು ಜನರು ನೆಮ್ಮದಿಯಾಗಿ ಜೀವನ ನಡೆಸಲು ಪುನಃ ಆರಂಭಿಸಿದ್ದಾರೆ. ಅಲ್ಲದೇ ವಿಶ್ವಾದ್ಯಂತ ವ್ಯಾಪಾರ, ವಹಿವಾಟು, ಪ್ರವಾಸೋದ್ಯಮ ಗರಿಗೆದರಿದೆ. ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಹೊಸ ಬಾಂಬ್ ಸಿಡಿಸಿದೆ. “ಕೋವಿಡ್-19 ಸಾಂಕ್ರಾಮಿಕ ಇನ್ನೂ ಕೊನೆಗೊಂಡಿಲ್ಲ. ಕೊರೊನಾ ಮತ್ತೂಂದು ಅಲೆಯನ್ನು ವಿಶ್ವ ಎದುರಿಸಲಿದೆ. ಇದು ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಎಲ್ಲ ರಾಷ್ಟ್ರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ಡಬ್ಲ್ಯುಎಚ್‌ಒ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕೊರೊನಾ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಅನೇಕರು ತಮ್ಮ ಪ್ರಾಣ ಕಳೆದುಕೊಂಡರು. ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯಗಳು ದೊರೆಯದೇ ನರಳಾಡಿದರು. ಸೋಂಕು ತಗಲಿ ಗುಣಮುಖರಾದ ಅನೇಕರಲ್ಲಿ ಈಗಲೂ ಆರೋಗ್ಯದಲ್ಲಿ ಕೊರೊನಾ ನಂತರದ ಪರಿಣಾಮಗಳನ್ನು ಎದುರಿಸುವಂತಾಗಿದೆ.