ಭಟ್ಕಳ: ಕಳೆದೆರಡು ದಿನಗಳಿಂದ 45 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯಲು ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಅಧಿ ಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಶುಕ್ರವಾರ ಸಂಜೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ತಿಳಿದು ಗ್ರಾಮೀಣ ಭಾಗದಿಂದ ಕೂಡಾ ನೂರಾರು ಜನರು ಆಗಮಿಸಿದ್ದು ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ವೇಳೆಗೆ ಹಲವರು ವಾಪಸ್ ಹೋಗಿದ್ದರು.
ಶನಿವಾರ ಬೆಳಗ್ಗೆ ಕೂಡಾ ಕೂಡಾ ಇದೇ ರೀತಿಯಾಗಿದ್ದು ಮುನ್ನೂರಕ್ಕೂ ಹೆಚ್ಚು ಜನರು ಸೇರಿದ್ದರೆ ಕೇವಲ 75 ಟೋಕನ್ ಕೊಟ್ಟು ಉಳಿದವರು ವಾಪಸ್ ಹೋಗುವಂತೆ ಹೇಳಿರುವುದು ಗೊಂದಲಕ್ಕೆ ಕಾರಣವಾಯಿತು.
ಜನರು ಯಾವುದೇ ಅಂತರ ಕಾಯ್ದುಕೊಳ್ಳದೇ ಜಮಾ ಆಗಿರುವುದು ಇನ್ನಷ್ಟು ಭೀತಿ ಉಂಟಾಗಲು ಕಾರಣವಾಗಿದ್ದು ಮಾತ್ರ ಸತ್ಯ. ಸ್ಥಳಕ್ಕಾಗಮಿಸಿದ ಸಹಾಯಕ ಆಯುಕ್ತೆ ಮಮತಾದೇವಿ, ತಹಶೀಲ್ದಾರ್ ರವಿಚಂದ್ರ, ನಗರ ಎಸ್‌ಐ ಸುಮಾ ಬಿ., ಜನರು ಸಮಾಧಾನ ಪಡಿಸಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ನಂತರ ಹಲವರಿಗೆ ಸಂಜೆ ಬರುವಂತೆ ಹೇಳಿ ಕಳುಹಿಸಿದ್ದು ಗೊಂದಲ ಮುಂದುವರಿದಿದೆ.
ಪ್ರತಿನಿತ್ಯವೂ ಒಂದೊಂದು ಇಲಾಖೆಗೆ, ಒಂದೊಂದು ವರ್ಗಕ್ಕೆ ಲಸಿಕೆ ನೀಡುತ್ತಾ ಇರುವುದಾದರೆ ಮನೆಯಲ್ಲಿರುವ ಜನಸಾಮಾನ್ಯರಿಗೆ ಯಾವಾಗ ಲಸಿಕೆ ನೀಡುತ್ತೀರಿ ಎನ್ನುವ ಪ್ರಶ್ನೆಯೂ ಕೂಡಾ ಹಲವರದ್ದು ಇದಕ್ಕೆ ಅಧಿಕಾರಿಗಳಲ್ಲಿ ಉತ್ತರ ಇಲ್ಲವಾಗಿದೆ.