ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬಿಬಿಎಂಪಿ ಸಹಿತವಾಗಿ ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ಶೈಕ್ಷಣಿಕ ಜಿಲ್ಲೆ ಗಳ ಪ್ರಾಥಮಿಕ ಶಾಲೆಗೆ ಮಂಗಳವಾರ ದಿಂದಲೇ ಸರ್ಕಾರ ರಜಾ ಘೋಷಣೆ ಮಾಡಿದೆ. ಉಳಿದ ಜಿಲ್ಲೆಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ (ಎಸ್ಸೆಸ್ಸೆಲ್ಸಿ ಹೊರತುಪಡಿಸಿ) ಪರೀಕ್ಷೆಗಳನ್ನು ಮಾ. 23ರ ಒಳಗೆ ಮುಗಿಸುವಂತೆಯೂ ಸೂಚನೆ ನೀಡಲಾಗಿದೆ.
ರಾಜ್ಯದ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆ ಯಲ್ಲಿ ಶಿಕ್ಷಣ ಸಚಿವರು, ಇಲಾಖೆಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಸೋಮವಾರ ನಡೆದಿದ್ದು, ಈ ಸಭೆಯಲ್ಲಿ ಬಿಬಿಎಂಪಿ ಸಹಿತ ಬೆಂಗಳೂರು ದಕ್ಷಿಣ, ಬೆಂ.ಉತ್ತರ ಹಾಗೂ ಬೆಂ.ಗ್ರಾಮಾಂತರ ಶೈಕ್ಷಣಿಕ ಜಿಲ್ಲೆಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ಮುಂದಿನ ಆದೇಶದವರೆಗೂ ರಜೆ ಘೋಷಿಸಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನರ್ಸರಿ, ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಗಳಿಗೆ ಸೋಮವಾರದಿಂದಲೇ ರಜಾ ಘೋಷಣೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಜಿಲ್ಲೆಗಳ ಪ್ರಾಥಮಿಕ ಶಾಲೆಗಳಿಗೂ ರಜಾ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳು, ಪಾಲಕ, ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಕೊರೊನಾ ಸಂಬಂಧ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ. ಮಕ್ಕಳ ಸೂಕ್ಷ್ಮ ಶರೀರ ವನ್ನು ಗಮನದಲ್ಲಿಟ್ಟುಕೊಂಡು ಕ್ರಮ ತೆಗೆದುಕೊಂಡಿ ದ್ದೇವೆ. ಮನೆಯಲ್ಲೂ ಪಾಲಕ, ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ.
ಕಾಲಮಿತಿಯೊಳಗೆ ಪರೀಕ್ಷೆ ಪೂರ್ಣಗೊಳಿಸಲು ಸೂಚನೆ: ಬೆಂಗಳೂರು ದಕ್ಷಿಣ, ಬೆಂ.ಉತ್ತರ ಮತ್ತು ಬೆಂಗಳೂರು ಗ್ರಾಮಾಂತರ ಶಾಲೆಗಳನ್ನು ಹೊರತುಪಡಿಸಿ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಳಿದ ಜಿಲ್ಲೆಗಳಲ್ಲೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, 2019-20ನೇ ಸಾಲಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.11 ರಿಂದ 23ರೊಳಗೆ ಪರೀಕ್ಷೆ ಪೂರ್ಣಗೊಳಿಸಲು ಸೂಚಿಸಿದೆ.
10ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿಯಾಗಿರುವ ವೇಳಾ ಪಟ್ಟಿಯಂತೆ ಪರೀಕ್ಷೆ ನಡೆಯಲಿದೆ. ರಾಜ್ಯದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ವಾರ್ಷಿಕ ಪರೀಕ್ಷೆ ನಡೆಸಿ ಬೇಸಿಗೆ ರಜೆ ಘೋಷಿಸಲು ಕ್ರಮ ವಹಿಸುವಂತೆ ಸಲಹೆ ನೀಡಲಾಗಿದೆ. ಎಲ್ಲ ಜಿಲ್ಲಾ ಉಪ ನಿರ್ದೇಶಕರೊಂದಿಗೆ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಿದಂತೆ 2019-20ನೇ ಸಾಲಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳನ್ನು ಕಾಲಮಿತಿಯೊಳಗೆ ನಡೆಸಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.11 ರಿಂದ 16ರ ವರೆಗೆ, 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.23ರೊಳಗೆ ಪರೀಕ್ಷೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಯಾವುದೇ ವಿದ್ಯಾರ್ಥಿ ಜ್ವರ, ಕೆಮ್ಮು, ನೆಗಡಿ ಅಥವಾ ಇತರೆ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ತಕ್ಷಣ ಸೂಕ್ತ ಚಿಕಿತ್ಸೆ ನೀಡಿ ಕಡ್ಡಾಯ ರಜೆ ನೀಡಲು ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.
ಎಸ್.ಎ-2 ಪರೀಕ್ಷೆ: ಪ್ರಸಕ್ತ ಸಾಲಿನ 1 ರಿಂದ 9ನೇ ತರಗತಿಗಳ ಎಸ್.ಎ-2 ಪರೀಕ್ಷೆಗಳನ್ನು ಈ ಕೆಳಕಂಡ ವೇಳಾಪಟ್ಟಿಯಂತೆ ನಡೆಸಲು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಿಗೆ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ. ಮಾ.10 ರಿಂದ 16ರವರೆಗೆ 1 ರಿಂದ 6 ನೇ ತರಗತಿ, ಮಾ.16 ರಿಂದ 21ರ ವರೆಗೆ 7 ನೇ ತರಗತಿ, ಮಾ.16 ರಿಂದ 23ರ ವರೆಗೆ 8 ಹಾಗೂ 9ನೇ ತರಗತಿಗೆ ಪರೀಕ್ಷೆ ನಡೆಸಲು ನಿರ್ದೇಶನ ನೀಡಲಾಗಿದೆ.