Advertisement

2021ರಲ್ಲೂ ಕೊರೊನಾ ಟ್ರೆಂಡ್:  ಗೂಗಲ್‌ನಲ್ಲಿ‌ ಜನರು ಹೆಚ್ಚು ಹುಡುಕಿದ್ದೇನು?

12:59 PM Dec 31, 2021 | Team Udayavani |

2021ರಲ್ಲಿ ಜನರು ಸರ್ಚ್ ಮಾಡುತ್ತಿದ್ದ ವಿಷಯ ನೋಡಿದರೆ ಕೋವಿಡ್ ಯಾವ ಸ್ವರೂಪದಲ್ಲಿ ಜನರನ್ನು ಕಂಗೆಡಿಸಿತ್ತು ಎನ್ನುವುದು ಗೊತ್ತಾಗುತ್ತದೆ. ಗೂಗಲ್ ಸಾಮಾನ್ಯವಾಗಿ ತನ್ನ ಟಾಪ್ ಟ್ರೆಂಡಿಂಗ್ ಅನ್ನು ಪ್ರಕಟಿಸುತ್ತಿರುತ್ತದೆ. ಅದರಲ್ಲೂ 2021ರಲ್ಲಿ ಭಾರತದಲ್ಲಿ ಗೂಗಲ್ ಸರ್ಚ್‌ನಲ್ಲಿ ಟ್ರೆಂಡ್ ಆಗಿದ್ದ ವಿಷಯಗಳು ಯಾವುವು ಎನ್ನುವುದನ್ನು ನೋಡಿದರೆ ಕೋವಿಡ್ ವೈರಸ್ ಬಗ್ಗೆ ಜನರಿಗಿದ್ದ ಆತಂಕ ಗೊತ್ತಾಗುತ್ತದೆ.

Advertisement

ಕುತೂಹಲ ಮೂಡಿಸಿದ ಸರ್ಚ್‌!

ಸಾಮಾನ್ಯವಾಗಿ ಗೂಗಲ್‌ನಲ್ಲಿ ನಿಯರ್‌ ಮಿ ಅಂತ ಸರ್ಚ್ ಮಾಡುವುದು ಕಾಮನ್. ಅಂದರೆ ನಾವಿದ್ದ ಸ್ಥಳದಿಂದ ಹತ್ತಿರದಲ್ಲೇ ನಮಗೆ ಬೇಕಿರುವ ಯಾವುದೇ ವಸ್ತು, ಕಚೇರಿ, ಆಸ್ಪತ್ರೆ, ಹೊಟೇಲ್ ಹೀಗೆ ನಾನಾ ರೀತಿಯ ವಿಷಯಗಳನ್ನು ಜನರು ಗೂಗಲ್ ನಲ್ಲಿ ಹುಡುಕುತ್ತಾರೆ. 2021ರಲ್ಲಿ ಭಾರತದಲ್ಲಿ ಜನ ಹೀಗೆ ನಿಯರ್ ಮಿ ಎಂದು ಸರ್ಚ್‌ ಮಾಡಿರುವುದರಲ್ಲಿ ಟಾಪ್ 1 ಸ್ಥಾನದಲ್ಲಿ ಇರುವುದು ಕೋವಿಡ್ ವ್ಯಾಕ್ಸಿನ್ ನಿಯರ್ ಮಿ (COVID VACCINE NEAR ME). ಅಂದರೆ ನಮ್ಮಲ್ಲಿ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಜನರು ದೊಡ್ಡ ಸಂಖ್ಯೆಯಲ್ಲಿಯೇ ಮುಂದಾಗಿದ್ದರು. ಇದೇ ಕಾರಣಕ್ಕೆ ಇಂತದ್ದೊಂದು ಹುಡುಕಾಟ ಗೂಗಲ್‌ನಲ್ಲಿ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಇದರಲ್ಲಿ ನಂಬರ್ 2 ಸ್ಥಾನದಲ್ಲಿರೋದು ಕೋವಿಡ್ ಟೆಸ್ಟ್ ನಿಯರ್ ಮಿ (COVID TEST NEAR ME). ಅಂದರೆ ಕೋವಿಡ್ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳುವುದರ ಬಗ್ಗೆಯೂ ಜನ ತುಂಬಾನೇ ತಲೆ ಕೆಡಿಸಿಕೊಂಡಿದ್ದರು ಎಂದು ಗೊತ್ತಾಗುತ್ತದೆ. ಮೂರನೇ ಸ್ಥಾನದಲ್ಲಿ ಫುಡ್ ಡೆಲಿವರಿ ನಿಯರ್ ಮಿ (FOOD DELIVERY NEAR ME) ಅಂತ ಜನ ಸರ್ಚ್‌ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಆಹಾರ ಖರೀದಿ ಇತ್ತೀಚೆಗೆ ಹೆಚ್ಚಾಗಿದೆ. ಅದರಲ್ಲೂ ಕೋವಿಡ್‌ ಸಂದರ್ಭದಲ್ಲಿ ಲಾಕ್‌ಡೌನ್ ಆದಾಗ ಆನ್‌ಲೈನ್‌ ಫುಡ್‌ ಡೆಲಿವರಿಯ ಮೊರೆ ಹೋಗಿದ್ದರು ಎನ್ನುವುದು ಈ ಸರ್ಚಿಂಗ್ ಟ್ರೆಂಡ್‌ ನಿಂದ ಗೊತ್ತಾಗುತ್ತಿದೆ.  ಆಕ್ಸಿಜನ್ ಸಿಲಿಂಡರ್ ನಿಯರ್ ಮಿ (OXYGEN CYLINDER NEAR ME) ಎನ್ನುವ ಬಗ್ಗೆ ಜನ ಸಿಕ್ಕಾಪಟ್ಟೆ ಸರ್ಚ್‌ ಮಾಡಿದ್ದಾರೆ. ಕೊವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್ ಸಿಲಿಂಡರ್‌ಗಾಗಿ ಜನ ಪರದಾಡಿದ್ದರು. ಇದೇ ಕಾರಣಕ್ಕೆ ಜನರು ಗೂಗಲ್ ಮೂಲಕ ಆಕ್ಸಿಜನ್ ಸಿಲಿಂಡರ್ ಎಲ್ಲಿ ಸಿಗುತ್ತದೆ ಎಂದು ಹುಡುಕಿದ್ದರು. ಇದು ನಾಲ್ಕನೇ ಸ್ಥಾನದಲ್ಲಿದ್ದ ನಿಯರ್ ಮಿ ಸರ್ಚ್‌ ಆಗಿದ್ದರೆ, ಕೋವಿಡ್ ಹಾಸ್ಪಿಟಲ್‌ ನಿಯರ್‌ ಮಿ (COVID HOSPITAL NEAR ME) ಎನ್ನುವುದು ಟಾಪ್ 5 ಸರ್ಚ್‌ ಆಗಿತ್ತು. ಅಂದರೆ ಟಾಪ್‌ ಐದರಲ್ಲಿ ನಾಲ್ಕು ಸರ್ಚ್‌ ಕೋವಿಡ್‌ ಹಾಗೂ ಕೋವಿಡ್‌ ಸಂಬಂಧಿತ ವಿಷಯಗಳ ಮೇಲೆಯೇ ಆಗಿರುವುದನ್ನು ಗಮನಿಸಿದರೆ, ಜನರಿಗೆ ಕೊರೊನಾ ವೈರಸ್‌ನಿಂದ ಆಗಿರುವ ತೊಂದರೆಗಳು ಯಾವ ಮಟ್ಟದಲ್ಲಿತ್ತು ಮತ್ತು ಜನರು ಎಷ್ಟೊಂದು ಆತಂಕಿತರಾಗಿದ್ದರು ಎಂದು ಅರ್ಥವಾಗುತ್ತದೆ.

ಟಾಪ್‌ 1ನಲ್ಲಿ ಗೋಲ್ಡನ್ ಬಾಯ್

ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳಲ್ಲಿ ನೀರಜ್ ಚೋಪ್ರಾ ಅಗ್ರಸ್ಥಾನದಲ್ಲಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸುವ ಮೂಲಕ ಗಮನಸೆಳೆದಿದ್ದ ನೀರಜ್ ಬಗ್ಗೆ ತಿಳಿದುಕೊಳ್ಳಲು ಜನ‌ ಹುಡುಕಾಟ ನಡೆಸಿದ್ದರಿಂದ ಅವರು ಪಟ್ಟಿಯ ಉತ್ತುಂಗಕ್ಕೇರಿದ್ದಾರೆ. ನೀರಜ್ ಜಾವೆಲನ್ ಥ್ರೋದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿದ್ದರು. ಇನ್ನು ಆರ್ಯನ್ ಖಾನ್‌ (ARYAN KHAN) ಡ್ರಗ್ಸ್ ಪ್ರಕರಣದಲ್ಲಿ‌ ಬಂಧಿತರಾಗಿದ್ದ ಕಾರಣ ಅವರ ಬಗ್ಗೆ ತಿಳಿದುಕೊಳ್ಳಲು‌ ಜನ ಜಾಲತಾಣದಲ್ಲಿ ಹುಡುಕಾಟ ನಡೆಸಿದ್ದರು. ಜನರು ಗೂಗಲ್‌ ಮೂಲಕ ಹೆಚ್ಚು ಹುಡುಕಾಡಿದ ವ್ಯಕ್ತಿಗಳಲ್ಲಿ ಆರ್ಯನ್ ಖಾನ್ ಎರಡನೇ ಸ್ಥಾನ ಪಡೆದಿದ್ದರು. ವಿಕ್ಕಿ ಕೌಶಲ್, ಶೆಹನಾಜ್ ಗಿಲ್ ಮತ್ತು ರಾಜ್ ಕುಂದ್ರಾ ಜೊತೆಗೆ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ (ELON MUSK) ಬಗ್ಗೆಯೂ ಜನ 2021ರಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ್ದರು.

Advertisement

ಪ್ರಾದೇಶಿಕ ಸಿನಿಮಾಗಳ ಹವಾ!

ಇನ್ನು‌ ಸಿನಿಮಾ ಕೆಟಗರಿಯಲ್ಲಿ ಬಾಲಿವುಡ್, ಹಾಲಿವುಡ್ ಜೊತೆಗೆ ಪ್ರಾದೇಶಿಕ ಸಿನಿಮಾಗಳು ಟ್ರೆಂಡ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದವು. 2021 ರಲ್ಲಿ ಸಿನಿಪ್ರಿಯರನ್ನು ಹೆಚ್ಚು ಸೆಳೆದಿರುವ ಸಿನಿಮಾಗಳಲ್ಲಿ ತಮಿಳಿನ ಬ್ಲಾಕ್‌ಬಸ್ಟರ್ ಸಿನಿಮಾ ಜೈ ಭೀಮ್ (JAI BHIM) ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಬಾಲಿವುಡ್ ಬ್ಲಾಕ್‌ಬಸ್ಟರ್ ಶೇರ್ಷಾ‌ ಇದ್ದರೆ ರಾಧೆ ಮತ್ತು ಬೆಲ್ ಬಾಟಮ್ ಟ್ರೆಂಡಿಂಗ್ ಚಾರ್ಟ್‌ನಲ್ಲಿ ಮೂರು ಮತ್ತು ನಾಲ್ಕನೆ ಸ್ಥಾನದಲ್ಲಿದ್ದ ಹಿಂದಿ ಚಲನಚಿತ್ರಗಳಾಗಿವೆ. ಗಾಡ್ಜಿಲ್ಲಾ ವರ್ಸಸ್ ಕಾಂಗ್ ಮತ್ತು ಎಟರ್ನಲ್ಸ್ – ಹಾಲಿವುಡ್ ಚಲನಚಿತ್ರಗಳು ಈ ವರ್ಷದ ಟಾಪ್ ಟ್ರೆಂಡಿಂಗ್ ಚಲನಚಿತ್ರಗಳ ಪಟ್ಟಿಯಲ್ಲಿದ್ದವು.

ಜನರನ್ನು ಕಾಡಿದ ಕೊರೊನಾ

ಗೂಗಲ್‌ನಲ್ಲಿ ಸರ್ಚ್‌ ಮಾಡುವಾಗ WHAT IS.. ಅಥವಾ HOW TO.. ಅಂತ ಹುಡುಕುವುದು ಸಾಮಾನ್ಯ. ಈ ‘ಏನು’ ಮತ್ತು ‘ಹೇಗೆ’ ಎಂಬ ಹುಡುಕಾಟದಲ್ಲಿ ಕೋವಿಡ್‌ ಮತ್ತೆ ಅಗ್ರಸ್ಥಾನ ಪಡೆದಿತ್ತು. ಇದು ಜನರು ಕೊರೊನಾದಿಂದ ಅನುಭವಿಸಿದ್ದ ನೋವಿಗೂ ಸಾಕ್ಷಿಯಂತಿತ್ತು. WHAT IS.. ಕೆಟಗರಿಯಲ್ಲಿ ಕಪ್ಪು ಶಿಲೀಂಧ್ರ (BLACK FUNGUS) ದ ಬಗ್ಗೆ ಜನರು ಹೆಚ್ಚು ಹುಡುಕಾಡಿದ್ದರು. ಅಲ್ಲದೆ ಇದೇ ಪಟ್ಟಿಯಲ್ಲಿ ರೆಮಿಡಿಸಿವಿರ್‌ ಬಗ್ಗೆಯೂ ಜನರು ಹೆಚ್ಚು ಹುಡುಕಾಟ ನಡೆಸಿದ್ದರಿಂದ ಅದೂ ಟಾಪ್‌ ಟ್ರೆಂಡಿಂಗ್‌ ಪಟ್ಟಿಯಲ್ಲಿತ್ತು. ಇನ್ನು HOW TO.. ಎಂದು ಹುಡುಕಾಟ ನಡೆಸುವಾಗ ಕೊವಿಡ್‌ ಲಸಿಕೆ ಹಾಕಿಸಿಕೊಳ್ಳಲು ನೋಂದಾವಣೆ ಮಾಡುವುದು ಹೇಗೆ ಎಂಬ ಪ್ರಶ್ನೆ ಹೆಚ್ಚು ಜನರನ್ನು ಕಾಡಿತ್ತು. ಇದು ಟಾಪ್‌ 1 ಸ್ಥಾನದಲ್ಲಿದ್ದರೆ ನಂತರ ಸ್ಥಾನದಲ್ಲಿ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಎರಡನೇ ಸ್ಥಾನದಲ್ಲಿತ್ತು. ಇನ್ನು ದೇಹದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸುವುದು ಹೇಗೆ? ಎಂಬ ಪ್ರಶ್ನೆ ಮೂರನೇ ಸ್ಥಾನದ ಟ್ರೆಂಡಿಂಗ್‌ನಲ್ಲಿದ್ದರೇ ಮನೆಯಲ್ಲೇ ಆಕ್ಸಿಜನ್‌ ತಯಾರಿಸುವುದು ಹೇಗೆ ಎಂಬ ಪ್ರಶ್ನೆಯೂ ಜನರನ್ನು ಕಾಡಿದ್ದು ಗೂಗಲ್‌ ಟ್ರೆಂಡಿಂಗ್‌ನಿಂದ ಗೊತ್ತಾಗುತ್ತಿದೆ.

ಕೋವಿಡ್-19 ಸುತ್ತಲಿನ ಸುದ್ದಿಗಳು ಗಮನ ಸೆಳೆಯುತ್ತಲೇ ಇದ್ದರೂ, ಪ್ರಮುಖ ಜಾಗತಿಕ ಘಟನೆಗಳು ಮತ್ತು ಟೋಕಿಯೊ ಒಲಿಂಪಿಕ್ಸ್, ಅಫ್ಘಾನಿಸ್ತಾನ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳಂತಹ ವಿಷಯಗಳ ಬಗ್ಗೆ ಜನರು ಹೆಚ್ಚು ಸರ್ಚ್‌ ಮಾಡಿರುವುದು ಟಾಪ್‌ ಟ್ರೆಂಡಿಂಗ್‌ಗಳಿಂದ ಗೊತ್ತಾಗುತ್ತದೆ. 2021ರ ಟಾಪ್‌ ಟ್ರೆಂಡಿಂಗ್‌ನ ಹೆಚ್ಚಿನ ಕೆಟಗರಿಗಳಲ್ಲಿ ಕೋವಿಡ್‌ ಸಂಬಂಧಿತ ವಿಷಯದ ಹುಡುಕಾಟವೇ ಅಗ್ರಸ್ಥಾನ ಪಡೆದಿರುವುದನ್ನು ನೋಡಿದರೆ ಕೊರೊನಾ ಸೋಂಕು ಜನರಿಗೆ ಅದೆಷ್ಟು ಕಾಟ ಕೊಟ್ಟಿದೆ ಎನ್ನುವುದು ಗೊತ್ತಾಗುತ್ತದೆ.

-ಶ್ವೇತಾ ಮುಂಡ್ರುಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next