Advertisement
ತುಮಕೂರು: ಬೇಸಿಗೆಯ ಸುಡುಬಿಸಿಲು ದಿನದಿಂದ ದಿನಕ್ಕೆ ಏರುತ್ತಿದೆ. ಸಾಂಕ್ರಾಮಿಕ ರೋಗಗಳಿಂದ ತತ್ತರಿಸುವ ಜನರು ಈಗ ಕೊರೊನಾ ವೈರಸ್ ಭಯದಿಂದ ದಿನದೂಡುವಂತಾಗಿದೆ. ವಿಶ್ವದೆಲ್ಲೆಡೆ ಕೊರೊನಾ ವೈರಸ್ ಕಬಂಧ ಬಾಹು ವಿಸ್ತರಿಸುತ್ತಿದ್ದು, ಇದರಿಂದ ರಾಜ್ಯದಲ್ಲೂ ಆತಂಕ ಸೃಷ್ಟಿಯಾಗಿದ್ದು, ಜ್ವರ, ನೆಗಡಿ, ಕೆಮ್ಮು, ತಲೆನೋವು ಶುರುವಾದರೆ ಸಾಕು ಜಿಲ್ಲೆಯ ಜನರು ಭಯದಿಂದ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. 2009ರಲ್ಲಿ ಎಚ್1ಎನ್1 ಮಹಾಮ್ಮಾರಿಗೆ ಬೆಚ್ಚಿ ಬಿದ್ದಿದ್ದ ಜನರು ಜನ ನಿಭಿಡ ಪ್ರದೇಶ, ಸಭೆ-ಸಮಾರಂಭ, ಜಾತ್ರೋತ್ಸವಗಳಿಗೆ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಸರ್ಕಾರಿ ಅಧಿಕಾರಿಗಳಿಗೆ ರಜೆ ರದ್ದು: ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿರುವ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಚಿಕಿತ್ಸೆ ನೀಡುವ ಕುರಿತು, ಬಸ್ ಪ್ರಯಾಣಿಕರಿಗೆ, ಬಸ್ ಕಂಡಕ್ಟರ್‌ಗಳಿಗೆ ತರಬೇತಿ ನೀಡಲು ಜಿಲ್ಲಾಡಳಿತ ಸೂಚಿಸಿದೆ. ಅಲ್ಲದೇ ಸರ್ಕಾರಿ ವೈದ್ಯರು ಹಾಗೂ ಸಿಬ್ಬಂದಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅನುಮತಿ ಪಡೆಯದೆ ರಜೆ ತೆಗೆದುಕೊಳ್ಳುವ ಆಗಿಲ್ಲ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.
ವದಂತಿಗೆ ಕಿವಿಗೊಡದಿರಿ: ಜಿಲ್ಲೆಯ 13 ಜನರು ವಿದೇಶಗಳಿಂದ ಬಂದಿದ್ದು, ಯಾರಿಗೂ ಕೊರೊನಾ ವೈರಸ್ ಸೋಂಕು ಕಂಡು ಬಂದಿರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸಾರ್ವಜನಿಕರು ಕೈಕಾಲು ಸೋಪು, ನೀರಿನಿಂದ ತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿ ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಕೆಮ್ಮು-ಶೀತ ಇರುವವರು ಮಾಸ್ಕ್ ಬಳಸಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡದಿರಿ ಎಂದು ಕೂಡ ಸೂಚಿಸಿದೆ.
ಮಾನಿಟರಿಂಗ್ ಟೀಮ್ ರಚನೆ: ತಜ್ಞ ವೈದ್ಯರನ್ನೊಳಗೊಂಡ ಮಾನಿಟರಿಂಗ್ ಟೀಮ್ ಮಾಡಲಾಗಿದೆ. ಈ ಟೀಮ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಹೃದ್ರೋಗ ತಜ್ಞರನ್ನೊಳಗೊಂಡ ಮೂರು ಟೀಮ್ ಇದ್ದು, ಇದರಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎರಡು ಟೀಮ್‌ಗಳಿವೆ. ಹಾಗೂ ತಾಲೂಕು ಮಟ್ಟದಲ್ಲಿಯೂ ಟೀಮ್‌ಗಳು ಕಾರ್ಯಪ್ರವೃತ್ತಿಯಾಗಿವೆ. ವೈರಸ್ ಮಾಹಿತಿಗೆ ಜಿಲ್ಲಾಸ್ಪತ್ರೆ 0816-2252935 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸೋಂಕು ಕಂಡುಬಂದಿಲ್ಲ. ಜನರು ಭಯ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ.-ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ ಜಿಲ್ಲಾದ್ಯಂತ ಕೊರೊನಾ ವೈರಸ್ ಕುರಿತಂತೆ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಆ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
-ಡಾ.ಬಿ.ಆರ್.ಚಂದ್ರಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಿಲ್ಲೆಯಲ್ಲಿ ಜನರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಸಂಶಯಾತ್ಮಕ ಸೋಂಕು ಕಂಡು ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ವೈರಸ್‌ನ ಲಕ್ಷಣ ಇರುವವರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಬೇಕು.
-ಡಾ. ವೀರಭದ್ರಯ್ಯ, ಜಿಲ್ಲಾ ಶಸ್ತ್ರ ಚಿಕಿತ್ಸಕ * ಚಿ.ನಿ.ಪುರುಷೋತ್ತಮ್