Advertisement
ಮಾಲ್‌ಗಳಿಗೆ ಜನ ಬರಲು ಹಿಂದೇಟು ಹಾಕುತ್ತಿದ್ದು, ಮಂಗಳವಾರ ಮಾಲ್‌ಗಳು, ಚಲನಚಿತ್ರ ಮಂದಿರಗಳಲ್ಲಿ ಜನಸಂಖ್ಯೆ ಇಳಿಮುಖವಾಗಿರುವುದು ಕಂಡು ಬಂತು. ಯಶವಂತಪುರದಲ್ಲಿರುವ ಗೋವರ್ಧನ, ಮೆಜೆಸ್ಟಿಕ್‌ನಲ್ಲಿರುವ ಚಲನಚಿತ್ರ ಮಂದಿರಗಳಲ್ಲಿ ಡಾ.ಶಿವರಾಜ್ ಕುಮಾರ್ ಅಭಿನಯದ ದ್ರೋಣ ಚಿತ್ರ ಪ್ರದರ್ಶನವಾಗುತ್ತಿದ್ದು, ಚಲನಚಿತ್ರ ವೀಕ್ಷಿಸಲು ಕಡಿಮೆ ಜನರು ಬರುತ್ತಿದ್ದಾರೆ,
Related Articles
Advertisement
ಬಸ್ ಪ್ರಯಾಣಿಕರ ಸಂಖ್ಯೆ ಶೇ.20 ಕುಸಿತ: ಕೊರೊನಾ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.20ರಷ್ಟು ಕಡಿಮೆ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಐರಾವತ, ಫ್ಲೈಬಸ್ ಮುಂತಾದ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಅಲ್ಲದೆ, ವಿದೇಶಿಯರು ಒಳಗೊಡಂತೆ ಭಾರತದ ವಿವಿಧ ರಾಜ್ಯಗಳಿಂದ ಮತ್ತು ರಾಜ್ಯದ ವಿವಿಧ ಸ್ಥಳಗಳಿಂದ ಪ್ರಯಾಣಿಕರು ಸಂಚರಿಸುತ್ತಿದ್ದು, ಪ್ರಯಾಣಿಕರು ಮತ್ತು ನಿಗಮದ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಸೋಂಕು ಹರಡದಂತೆ ಕೆಲವೊಂದು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಬಸ್‌ನ ಒಳ ಮತ್ತು ಹೊರ ಭಾಗವನ್ನು ಸ್ವಚ್ಛವಾಗಿಡುವುದರ ಜತೆಗೆ ಬಸ್‌ಗಳ ಒಳಗೆ ಪ್ರಯಾಣಿಕರು ಬಳಸುವ ವಸ್ತುಗಳನ್ನು ಸೋಂಕು ನಿವಾರಣಾ ದ್ರಾವಣಗಳಿಂದ ಶುಚಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಐರಾವತ, ಫ್ಲೈಬಸ್ ಮುಂತಾದ ಪ್ರತಿಷ್ಠಿತ ಸಾರಿಗೆಗಳಲ್ಲಿ “ಆಂಟಿ ಬ್ಯಾಕ್ಟಿರಿಯಲ್ ಸಲ್ಯೂಷನ್’ ಗಳನ್ನು ಬಳಸಿ ಸಿಂಪರಣೆ (ಪ್ಯೂಮಿಗೇಷನ್) ಮಾಡಲಾಗುತ್ತಿದೆ. ದೂರ ಮಾರ್ಗದ ಐರಾವತ ಸಾರಿಗೆಗಳಲ್ಲಿ ಚಾಲನಾ ಸಿಬ್ಬಂದಿಗೆ ಮಾಸ್ಕ್ಗಳನ್ನು ವಿತರಿಸಲಾಗಿದೆ. ಬಸ್ ನಿಲ್ದಾಣಗಳನ್ನು ಆಗಿಂದಾಗ್ಗೆ ಶುಚಿಗೊಳಿಸಲಾಗುತ್ತಿದೆ. ನಿಗಮದ ಬಸ್ ನಿಲ್ದಾಣಗಳಲ್ಲಿ ಜಿಂಗಲ್ಸ್‌ಗಳ ಮೂಲಕ ಕೊರೊನಾ ವೈರಸ್ ಸೋಂಕಿನ ಕುರಿತು ಪ್ರಯಾಣಿಕರ ಮಾಹಿತಿಗೆ ಪ್ರಚಾರ ನೀಡಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಡ್ರಂಕ್ ಆ್ಯಂಡ್ ಡ್ರೈವ್ ಕೊರೊನಾಗಿಂತ ಅಪಾಯಕಾರಿಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೆಲವರು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮುಂದೂಡುವಂತೆ ಮನವಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅದು ಸಾಧ್ಯವಿಲ್ಲ. ಕೊರೊನಾಗಿಂತ ಕುಡಿದು ವಾಹನ ಚಾಲನೆ ಮಾಡುವುದು ಅಪಾಯಕಾರಿ ಎಂದು ನಗರ ಪೊಲೀಸ್ ಆಯುಕ್ತ ಹೇಳಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಕಾರ್ಯ ಮೊದಲಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ: ಕೊರೊನಾ ವೈರಸ್ ಕುರಿತು ಪೊಲೀಸ್ ಸಿಬ್ಬಂದಿ ಎಚ್ಚರಿಕೆ ವಹಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಸಭೆ ನಡೆಸಿದ್ದಾರೆ. ಹೀಗಾಗಿ ವಿಭಾಗದ ಆತಂರಿಕಾ ಸಭೆ ನಡೆಸಿ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಲಾಗಿದೆ. ಪೊಲೀಸರು ಜನರೊಂದಿಗೆ ಸದಾ ಬೆರೆಯುತ್ತಿರುತ್ತಾರೆ. ಹೀಗಾಗಿ ಪೊಲೀಸರು ಜನರೊಂದಿಗೆ ಮಾತನಾಡುವಾಗ ಮಾಸ್ಕ್ ಧರಿಸುವುದರ ಜತೆಗೆ ಅಂತರ ಕಾಯ್ದುಕೊಳ್ಳಬೇಕು. ಠಾಣೆಯಲ್ಲಿ ಶುಚಿತ್ವ ಕಾಪಾಡಲು ಪೊಲೀಸರಿಗೆ ಅಗತ್ಯ ವಸ್ತುಗಳನ್ನು ಠಾಣಾ ವೆಚ್ಚದಲ್ಲಿಯೇ ಒದಗಿಸಲಾಗುತ್ತದೆ. ಪೊಲೀಸರು ಕೊರೋನಾ ಪತ್ತೆ ಅಥವಾ ಅನಾರೋಗ್ಯ ಕ್ಕೊಳಗಾದರೆ ಅಂತಹವರಿಗೆ ರಜೆ ಕೊಡಲಾಗುತ್ತದೆ. ಅಲ್ಲದೆ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈತೊಳೆಯುವ ದ್ರಾವಣ ಬಳಸಬೇಕು ಎಂದು ಹೇಳಿದರು. ಪ್ರತಿಭಟನೆ ಮುಂದೂಡಿಕೆ: ಕೊರೊನಾ ಹರಡುತ್ತಿರುವುದರಿಂದ ಪ್ರತಿಭಟನೆ ನಡೆಸುವ ಸಂಘಟನೆ ಗಳು ಕೆಲ ದಿನಗಳ ಮಟ್ಟಿಗೆ ತಮ್ಮ ಹೋರಾಟವನ್ನು ಮುಂದೂಡುವಂತೆ ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಈ ಮೂಲಕ ಪ್ರತಿಭಟನೆ ಹತ್ತಿಕ್ಕುತ್ತಿಲ್ಲ ಅಥವಾ ಕಡೆಗಣಿಸುತ್ತಿಲ್ಲ. ಪ್ರತಿಭಟನೆ ಸಂದರ್ಭದಲ್ಲಿ ನೂರಾರು ಮಂದಿ ಸೇರುವುದರಿಂದ ಕೊರೋನಾ ಹರಡುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಭಟನಾಕಾರರು ಸದ್ಯಕ್ಕೆ ಪ್ರತಿಭಟನೆಗಳನ್ನು ಮಾಡಬಾರದು ಎಂದು ಮನವಿ ಮಾಡಿದರು. ಹಾಗೆಯೇ ಕೊರೊನಾ ವೈರಸ್ ಬಗ್ಗೆ ನಕಲಿ ಸಂದೇಶಗಳನ್ನು ಹರುಡುವ ವ್ಯಕ್ಕಿಗಳ ಮೇಲೆ ನಿಗಾವಹಿಸುವಂತೆ ಸಾಮಾಜಿಕ ಜಾಲತಾಣ ನಿರ್ವಾಹಣಾ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಹೇಳಿದರು. 2,666 ಮಂದಿ ಶಂಕಿತರ ಗುರುತು: ಸೋಂಕು ದೃಢಪಟ್ಟ ಟೆಕ್ಕಿ ಕುಟುಂಬದೊಂದಿಗೆ ನೇರ ಸಂಪರ್ಕ ಹೊಂದಿದ್ದ 2,666 ಮಂದಿಯನ್ನು ಶಂಕಿತರು ಎಂದು ಆರೋಗ್ಯ ಇಲಾಖೆ ಗುರುತಿಸಿದೆ. ಇದರಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಟೆಕ್ಕಿ ಆಫೀಸ್ ಸಿಬ್ಬಂದಿ, ನೆರೆಹೊರೆ ಸೇರಿದಂತೆ ಎಲ್ಲರನ್ನು ಇದ್ದು, ಮನೆಯಲ್ಲಿಯೇ ಪ್ರತ್ಯೇಕ ನಿಗಾವಹಿಸಿ ತಪಾಸಣೆ ಮಾಡಲಾಗುತ್ತಿದೆ. ಈ ಪೈಕಿ ನೂರಕ್ಕೂ ಹೆಚ್ಚು ಮಂದಿ ಪ್ರಾಥಮಿಕ ಪರೀಕ್ಷೆ ಮಂಗಳವಾರ ಮಾಡಲಾಗಿದೆ. ಟೆಕ್ಕಿ ಕುಟುಂಬ ವಾಸವಾಗಿದ್ದು, ಮನೆ, ಆಫೀಸ್ ಸ್ವಚ್ಛತೆ ಮಾಡಲಾಗಿದೆ. ಬಾಕಿ ಉಳಿದ ಶಂಕಿತರ ತಪಾಸಣೆ ಬುಧವಾರ ಮುಂದುವರಿಯಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಟೋ ಚಾಲಕರ ಅತಂತ್ರ ಸ್ಥಿತಿ: ಕೊರೊನಾ ವೈಸರ್ ಭೀತಿಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಈ ಮೊದಲು ಪ್ರತಿದಿನ 1500 ರೂ. ಗೂ ಅಧಿಕ ಹಣ ಸಂಪಾದಿಸುತ್ತಿದ್ದೆ. ಆದರೀಗ ಕೇವಲ 300 ರೂ. ಮಾತ್ರ ಸಂಪಾದನೆಯಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ತೀವ್ರಗತಿಯಲ್ಲಿ ಕಡಿಮೆಯಾಗಿದೆ. ಇದೇ ರೀತಿ ಮುಂದುವರಿದರೆ ಬಹಳಷ್ಟು ತೊಂದರೆಯಾಗಲಿದೆ. ಈ ಬಗ್ಗೆ ಸರ್ಕಾರ ಜಾಗೃತಿ ಮೂಡಿಸಬೇಕು. ಕೊರೊನಾ ವೈರಸ್‌ಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ನಮ್ಮ ಜೀವನ ಅತಂತ್ರವಾಗಲಿದೆ ಎಂದು ಆಟೋ ಚಾಲಿಕ ಎಂ.ರಾಜು ತಿಳಿಸಿದರು. ಗಂಟೆಗೊಮ್ಮೆ ಮೆಟ್ರೋ ಸ್ವಚ್ಛ!: ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಗಂಟೆಗೊಮ್ಮೆ ಮೆಟ್ರೋ ನಿಲ್ದಾಣ ಹಾಗೂ ರೈಲು ಬೋಗಿಗಳನ್ನು ಸ್ವಚ್ಛ ಮಾಡಲಾಗುತ್ತಿದೆ. ಎಸ್ಕಲೇಟರ್ ಬದಿಯ ಹ್ಯಾಂಡಲ್, ಲಿಫ್ಟ್ಗಳ ಬಟನ್, ಗ್ರಿಲ್, ಎಎಫ್ಸಿ ಗೇಟ್, ಟಿಕೆಟ್ ಕೌಂಟರ್‌ಗಳನ್ನು ಶುದ್ಧಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಕೆಲಸಗಳಿಗಾಗಿ ಪ್ರತ್ಯೇಕ ಸ್ವಚ್ಛತಾ ಸಿಬ್ಬಂದಿಗಳನ್ನು ನಮ್ಮ ಮೆಟ್ರೋ ನಿಗಮ ಆಯೋಜಿಸಿದ್ದು, ಪ್ರಯಾಣಿಕರನ್ನು ತಪಾಸಣೆ ಮಾಡುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಸೋಂಕು ಮುಕ್ತ ಕಾರ್ಯ ಸಮರ್ಪಕವಾಗಿ ನಡೆಯು ತ್ತದೆಯೋ ಇಲ್ಲವೇ ಎಂಬುದನ್ನು ಪರಿಶೀಲಿಸಲು ಪ್ರತಿ ವಿಭಾಗಕ್ಕೆ ಒಬ್ಬ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲೂ ಪ್ರಯಾಣಿಕರ ಕೊರತೆ: ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿದಿನ 35 ಲಕ್ಷಕ್ಕೂ ಅಧಿಕ ಜನರು ಪ್ರಯಾಣ ನಡೆಸುತ್ತಿದ್ದು, ಕೊರೊನಾ ವೈರಸ್ ಸೋಂಕಿನ ಭಯದ ಹಿನ್ನೆಲೆ ಅಲ್ಪ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಈಗಾಗಲೇ ಬಿಎಂಟಿಸಿ ಜಾಗೃತಿ ಫಲಕಗಳು ಅಳವಡಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದರೂ, ಜನರಲ್ಲಿ ಆತಂಕ ಕಡಿಮೆಯಾದಂತಿಲ್ಲ. ಮಂಗಳವಾರ ಮೆಜಸ್ಟಿಕ್, ಶಾಂತಿನಗರ ಸೇರಿದಂತೆ ವಿವಿಧ ಬಸ್ ನಿಲ್ದಾಣಗಳಲ್ಲಿ ಜನರ ಓಡಾಟ ವಿರಳವಾಗಿತ್ತು. ಕೆಲ ಬಿಎಂಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಮಾತ್ರ ಮಾಸ್ಕ್ ಧರಿಸುತ್ತಿರುವುದು ಕಂಡು ಬಂದಿತು. * ಮಂಜುನಾಥ ಗಂಗಾವತಿ