Advertisement

ಆರೋಗ್ಯ ಕಾರ್ಯಕರ್ತರ ನಿಯೋಜನೆ ಸಾಧ್ಯತೆ

11:59 PM Jan 25, 2020 | mahesh |

ಮಂಗಳೂರು: ಚೀನದಲ್ಲಿ ಪತ್ತೆಯಾದ ಕೊರೊನಾ ವೈರಸ್‌ ಬಗ್ಗೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ವಿದೇಶದಲ್ಲಿರುವ ಭಾರತೀಯರು ಅಥವಾ ವಿದೇಶಿಗರು ಮಂಗಳೂರಿಗೆ ಬಂದ ಸಂದರ್ಭದಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಲು ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿಶೇಷ ಆರೋಗ್ಯ ಕಾರ್ಯಕರ್ತರ ನಿಯೋಜನೆಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

Advertisement

ಸೌದಿ ಅರೇಬಿಯಾದಲ್ಲಿರುವ ಕೇರಳ ಮೂಲದ ನರ್ಸ್‌ ಒಬ್ಬರಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದ್ದು, ಈಗಾಗಲೇ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಗಲ್ಫ್ ಅಥವಾ ಇತರ ರಾಷ್ಟ್ರಗಳಿಂದ ಮಂಗಳೂರಿಗೆ ಆಗಮಿಸುವವರ ತಪಾಸಣೆ ಅಗತ್ಯವಾದರೆ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸುವ ಉದ್ದೇಶವಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಈವರೆಗೆ ಕೊರೊನಾ ವೈರಸ್‌ ಪತ್ತೆಯಾಗಿಲ್ಲ. ಆದರೂ ಇದು ಪಾಯಕಾರಿಯಾಗಿರುವುದರಿಂದ ಜನ ಜಾಗ್ರತೆ ವಹಿಸಬೇಕು. ಬೆಕ್ಕು ಮತ್ತು ಇತರ ಪ್ರಾಣಿಗಳಿಂದ ಆದಷ್ಟು ದೂರ ಇರಬೇಕು. ಶ್ವಾಸಕೋಶ ವಿಫ‌ಲಗೊಳಿಸಿ ಮಾರಣಾಂತಿಕವಾಗಿ ಪರಿಣಮಿಸಬಲ್ಲದು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ

ಕೊರೊನಾ ಲಕ್ಷಣಗಳು
ಶೀತ, ಜ್ವರ, ಕೆಮ್ಮು, ತಲೆನೋವು, ತಲೆಭಾರ, ನ್ಯುಮೋನಿಯಾ, ಉಸಿರಾಟದ ಸಮಸ್ಯೆ ಇವೇ ಮುಂತಾದ ಲಕ್ಷಣಗಳನ್ನು ಕೊರೊನಾ ವೈರಸ್‌ ಜ್ವರ ಹೊಂದಿದೆ. ಸಣ್ಣ ಜ್ವರ, ಶೀತವನ್ನು ನಿರ್ಲಕ್ಷ್ಯ ಮಾಡದೇ, ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆದರೆ ಯಾವುದೇ ಆತಂಕ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next