Advertisement

ಕೊರೊನಾ ಭೀತಿ: ಪರೀಕ್ಷೆ ಮುಗಿಸಲು ಸೂಚನೆ

11:38 PM Mar 11, 2020 | Lakshmi GovindaRaj |

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 1-9ನೇ ತರಗತಿ ಪರೀಕ್ಷೆಯನ್ನು ಮಾ.14 ರಿಂದ 23ರೊಳಗೆ ಮುಗಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಆಯಾ ಜಿಲ್ಲಾ ಉಪನಿರ್ದೇಶಕರು ಗಳಿಗೆ ಬುಧವಾರ ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾ ಉಪನಿರ್ದೇಶಕರಗಳ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಕುರಿತು ಚರ್ಚಿಸಿ, ಪರೀಕ್ಷೆ ಮುಗಿದ ತಕ್ಷಣ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ರಜೆ ನೀಡುವಂತೆ ಸೂಚಿಸಿದ್ದಾರೆ. 1-3ನೇ ತರಗತಿ ಮಕ್ಕಳಿಗೆ ಮಾ.14ರಂದು, 4 ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.17 ರಂದು, 7ನೇ ತರಗತಿಗೆ ಮಾ.21ರಂದು ಹಾಗೂ 8 ರಿಂದ 9ನೇ ತರಗತಿಗೆ ಮಾ.23ರಂದು ಪರೀಕ್ಷೆ ಮುಗಿಯುತ್ತದೆ. ಮಕ್ಕಳಿಗೆ ಮಾತ್ರ ರಜೆ ನೀಡಲಾಗಿದ್ದು, ಶಿಕ್ಷಕರಿಗೆ ರಜೆಯಿಲ್ಲ. ಆ ಸಮಯದಲ್ಲಿ ಶಿಕ್ಷಕರು ಮೌಲ್ಯಮಾಪನ, ಅಂಕವಹಿಗಳ ನಿರ್ವಹಣೆ ಇತ್ಯಾದಿ ಕಾರ್ಯ ಮುಗಿಸಬೇಕು ಎಂದು ನಿರ್ದೇಶಿಸಲಾಗಿದೆ.

ಸಂಜ್ಞಾ ಭಾಷೆ ಶಿಕ್ಷಕರ ನಿಯೋಜನೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶ್ರವಣದೋಷವುಳ್ಳ ಮಕ್ಕಳಿಗೆ ಪರೀಕ್ಷಾ ಕೊಠಡಿಯಲ್ಲಿ ಉಂಟಾಗುವ ಸಂದೇಹ, ಗೊಂದಲಗಳಿಗೆ ಸ್ಪಂದಿಸಲು ಸಂಜ್ಞಾ ಭಾಷೆಯನ್ನು ಅರಿತಿರುವ ಹಾಗೂ ವಿದ್ಯಾರ್ಥಿಯು ಬರೆಯುತ್ತಿರುವ ವಿಷಯ ತಜ್ಞರಲ್ಲದ ವಿಶೇಷ ಶಿಕ್ಷಕರನ್ನು ನಿಯೋಜಿಸಲು ಪ್ರಸ್ತುತ ಸಾಲಿನಿಂದ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿ ಶ್ರವಣ ದೋಷದಿಂದ ಬಳಲುತ್ತಿರುವುದನ್ನು ಖಚಿತಪಡಿಸಿಕೊಂಡು ಸಂಜ್ಞ ಭಾಷಾ ಶಿಕ್ಷಕರನ್ನು ನಿಯೋಜಿಸುವಂತೆ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಹೈಕೋರ್ಟ್‌ ಸಿಬ್ಬಂದಿಗೆ ಬಯೋಮೆಟ್ರಿಕ್‌ ನಿರ್ಬಂಧ
ಬೆಂಗಳೂರು: ಕೊರೊನಾ ವೈರಸ್‌ (ಕೋವಿಡ್‌-19) ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹೈಕೋರ್ಟ್‌ ಸಿಬ್ಬಂದಿಗೆ ಬಯೋಮೆಟ್ರಿಕ್‌ ಬದಲು ಹಾಜರಿ ಪುಸ್ತಕದಲ್ಲಿ ಸಹಿ ಮಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ. ಈ ಕುರಿತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ರಿಜಿಸ್ಟ್ರಾರ್‌ ಜನರಲ್‌ ಮಾ.11ರಂದು ಸುತ್ತೋಲೆ ಹೊರಡಿಸಿದ್ದು, ಮುಂದಿನ ಸೂಚನೆವರೆಗೆ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠದಲ್ಲಿ ಸಿಬ್ಬಂದಿ ಬಯೋಮೆಟ್ರಿಕ್‌ ಬದಲು ಹಾಜರಿ ಪುಸ್ತಕದಲ್ಲಿ ಸಹಿ ಮಾಡಲು ನಿರ್ದೇಶನ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next