Advertisement
ವಾರದ ಸಂತೆ ನೀರಸಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಪ್ರತಿ ಶನಿವಾರ ನಡೆಯುವ ವಾರದ ಸಂತೆಗೆ ಈ ಭಾಗದಲ್ಲಿಯೇ ನಡೆಯುವ ದೊಡ್ಡ ಸಂತೆ ಎನ್ನುವ ಹೆಸರಿದೆ. ಕುಂದಾಪುರದ ಗ್ರಾಮೀಣ ಭಾಗಗಳಿಂದ ಇಲ್ಲಿಗೆ ಖರೀದಿಗೆ ಸಾಕಷ್ಟು ಮಂದಿ ಬರುತ್ತಾರೆ. ಇನ್ನು ಹೊರ ಜಿಲ್ಲೆಗಳಿಂದ ವ್ಯಾಪಾರಕ್ಕೆ ನೂರಾರು ಮಂದಿ ಆಗಮಿಸುತ್ತಾರೆ. ಆದರೆ ಈ ಶನಿವಾರ ಮಾತ್ರ ಕೊರೊನಾ ಹಿನ್ನೆಲೆಯಲ್ಲಿ ಎಂದಿಗಿಂತ ಗಣನೀಯವಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾದಂತೆ ಕಂಡು ಬಂತು. ವ್ಯಾಪಾರಿಗಳಲ್ಲಿ ಕೇಳಿದಾಗ ಏನೂ ವ್ಯಾಪಾರ ಆಗಿಲ್ಲ ಅನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿ ವ್ಯಕ್ತವಾಯಿತು.
ಇನ್ನು ಶುಕ್ರವಾರವೇ ಇಲ್ಲಿಗೆ ದೂರ -ದೂರದ ಊರುಗಳಿಂದ ವ್ಯಾಪಾರಿಗಳು ಆಗಮಿಸಿದ್ದು, ಅವರಿಗೆ ಎಪಿಎಂಸಿ ವತಿಯಿಂದ ಸ್ವಚ್ಛತೆಗೆ ಆದ್ಯತೆ ವಹಿಸುವಂತೆ ಮನವಿ ಮಾಡಲಾಗಿತ್ತು. ಕುಡಿಯುವ ನೀರಿನ ಪೂರೈಕೆಯನ್ನು ಮಾಡ ಲಾಗಿತ್ತು. ಸಂತೆ ಮಾರುಕಟ್ಟೆ ಆವರಣ ದಲ್ಲಿರುವ ಶೌಚಾಲಯದ ನಿರ್ವಹಣೆಗೂ ಸಿಬಂದಿ ನೇಮಕ ಮಾಡಲಾಗಿತ್ತು. ಉತ್ತಮ ವ್ಯಾಪಾರವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಸಾಕಷ್ಟು ಹಣ್ಣುಗಳನ್ನು ತರಲಾಗಿತ್ತು. ಆದರೆ ಇಲ್ಲಿ ನೋಡಿದರೆ ಬೆಳಗ್ಗಿನಿಂದ ಅಷ್ಟೇನೂ ವ್ಯಾಪಾರವೇ ಆಗಿಲ್ಲ. ಈ ವರೆಗೆ ಇಲ್ಲಿನ ಶುಲ್ಕ ಕಟ್ಟುವಷ್ಟು ಮಾತ್ರ ವ್ಯಾಪಾರವಾಗಿದೆ ಎನ್ನುವುದಾಗಿ ಹುಬ್ಬಳ್ಳಿಯಿಂದ ಬಂದ ಹಣ್ಣಿನ ವ್ಯಾಪಾರಿ ಶೇಖರ್ ಹೇಳುತ್ತಾರೆ.
Related Articles
Advertisement
ಮೀನು ಮಾರುಕಟ್ಟೆ ಯಥಾಸ್ಥಿತಿಇನ್ನು ಕುಂದಾಪುರದ ಪುರಸಭೆ ಕಚೇರಿ ಸಮೀಪವಿರುವ ಬೃಹತ್ ಮೀನು ಮಾರುಕಟ್ಟೆ ಯಲ್ಲಿ ಗ್ರಾಹಕರ ಸಂಖ್ಯೆ ಸ್ವಲ್ಪ ಮಟ್ಟಿಗೆ ಉತ್ತಮವಾಗಿಯೇ ಕಂಡು ಬಂತು. ಆದರೆ ಹಿಂದೆಗೆ ಹೋಲಿಸಿದರೆ ತುಸು ಕಡಿಮೆಯಿದ್ದರೂ, ಇತ್ತೀಚಿನ ಕೆಲವು ದಿನಗಳಲ್ಲಿ ಈ ದಿನ ಪರವಾಗಿಲ್ಲ ಎನ್ನುವ ಅಭಿಪ್ರಾಯ ಮಹಿಳಾ ಮೀನು ವ್ಯಾಪಾರಸ್ಥರಲ್ಲಿ ವ್ಯಕ್ತವಾಗಿತ್ತು. ಬಿಸಿಲಿನ ತಾಪದಿಂದಾಗಿ ರಸ್ತೆ ಬದಿ ಕಬ್ಬಿನ ಹಾಲಿಗೂ ಉತ್ತಮ ವ್ಯಾಪಾರವಾಗುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ಪೇಟೆಯಲ್ಲಿ ಜನ ಸಂಚಾರವೇ ವಿರಳವಾದ್ದರಿಂದ ಅಷ್ಟೇನು ವ್ಯಾಪಾರವಿಲ್ಲ ಎನ್ನುವುದು ಕಬ್ಬಿನ ಹಾಲಿನ ವ್ಯಾಪಾರಿಯೊಬ್ಬರ ಮಾತು. ಚಿತ್ರ ಪ್ರದರ್ಶನ ರದ್ದು
ಕೊರೊನಾ ಹಿನ್ನೆಲೆಯಲ್ಲಿ ಕುಂದಾಪುರ ದಲ್ಲಿರುವ ವಿನಾಯಕ ಚಿತ್ರ ಮಂದಿರದಲ್ಲಿ ಶನಿವಾರದಿಂದ ಆರಂಭಗೊಂಡು ಮುಂದಿನ ಗುರುವಾರದವರೆಗೆ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.
ಕೊರೊನಾ ಭೀತಿಯಿದ್ದರೂ ಕೂಡ ಆಜ್ರಿ ಗ್ರಾಮದ ಚೋನಮನೆ ಶ್ರೀ ಶನೈಶ್ಚರ ದೇವಸ್ಥಾನ ದಲ್ಲಿ ಶನಿವಾರ ಹಾಗೂ ಸಂಕ್ರಮಣ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಉತ್ತಮವಾಗಿತ್ತು. ಸಾರ್ವಜನಿಕ ಆಸ್ಪತ್ರೆ: 10 ಹಾಸಿಗೆಯ ಪ್ರತ್ಯೇಕ ವಾರ್ಡ್
ಕೊರೊನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಸರ್ವಸನ್ನದ್ಧವಾಗಿದ್ದು, ಚಿಕಿತ್ಸೆಗಾಗಿ 10 ಬೆಡ್‌ನ ಪ್ರತ್ಯೇಕ ವಾರ್ಡನ್ನು ಈಗಾಗಲೇ ತೆರೆಯಲಾಗಿದೆ. ಜತೆಗೆ ತಜ್ಞ ವೈದ್ಯರು, ನರ್ಸ್, ಸಿಬಂದಿಯನ್ನೊಳಗೊಂಡ ದಿನದ 24 ಗಂಟೆ ನಿರಂತರವಾಗಿ ಸಕ್ರಿಯವಾಗಿರುವ ಕಾರ್ಯಪಡೆಯನ್ನು ಕೂಡ ರಚಿಸಲಾಗಿದೆ. ಆಸ್ಪತ್ರೆಯ ವೈದ್ಯಾಧಿಕಾರಿ ಯೊಂದಿಗೆ ಫಿಸೀಶಿಯನ್, ಇಬ್ಬರು ಮಕ್ಕಳ ತಜ್ಞರು, ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿ, ಮೂವರು ಶುಶ್ರೂಷಕರು, ಇಬ್ಬರು ಪ್ರಯೋಗ ಶೀಲ ತಂತ್ರಜ್ಞರು, ಮೂವರು ಗ್ರೂಪ್ ಡಿ ಸಿಬಂದಿ, ಇಬ್ಬರು ವಾಹನ ಚಾಲಕರನ್ನು ಒಳಗೊಂಡ ಕೊರೊನಾಗೆ ಸಂಬಂಧಿಸಿದ ಈ ತುರ್ತು ಚಿಕಿತ್ಸಾ ತಂಡವನ್ನು ರಚಿಸಲಾಗಿದೆ. ಜನ ಸಂಚಾರ ವಿರಳ
ಶನಿವಾರ ಕುಂದಾಪುರ ಪೇಟೆಯಲ್ಲಿ ಉತ್ತಮ ಜನಸಂಚಾರ ಇರುತ್ತಿತ್ತು. ಆದರೆ ಈ ವಾರ ಮಾತ್ರ ಜನ ಸಂಚಾರ ವಿರಳವಾಗಿತ್ತು. ಎರಡನೇ ಶನಿವಾರ ಆಗಿರುವುದರಿಂದ ಸರಕಾರಿ ಕಚೇರಿ, ಬ್ಯಾಂಕ್‌ಗಳಿಗೆ ರಜೆ ಇದ್ದುದು ಹಾಗೂ ಶಾಲಾ – ಕಾಲೇಜುಗಳಿಗೂ ರಜೆ ಇದ್ದುದು ಕೂಡ ಇದಕ್ಕೆ ಕಾರಣವಿರಬಹುದು. ಮತ್ತೆ ಕೆಲವರು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಪೇಟೆ ಕಡೆಗೆ ಬರಲು ಹಿಂದೇಟು ಹಾಕಿರಬಹುದು ಎನ್ನಲಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ತುಂಬಿರುತ್ತಿದ್ದ ಕೆಲವು ಖಾಸಗಿ ಹಾಗೂ ಸರಕಾರಿ ಬಸ್‌ಗಳಲ್ಲಿಯೂ ಸೀಟುಗಳು ಖಾಲಿಯಾಗಿ ಕಂಡು ಬಂದವು. ರಜೆ ಇದ್ದದ್ದು ಕೂಡ ಇದಕ್ಕೆ ಕಾರಣ ಎನ್ನಬಹುದು. ಗ್ರಾಮೀಣ ಸಹಜ ಸ್ಥಿತಿ
ಕುಂದಾಪುರ ಪೇಟೆ, ವಾರದ ಸಂತೆಗೆ ಕೊರೊನಾ ಭೀತಿ ಸ್ವಲ್ಪ ಮಟ್ಟಿಗೆ ತಟ್ಟಿದ್ದರೂ, ಗ್ರಾಮೀಣ ಭಾಗಗಳಾದ ಗಂಗೊಳ್ಳಿ, ಹೆಮ್ಮಾಡಿ, ಹಾಲಾಡಿ, ಸಿದ್ದಾಪುರ, ಗೋಳಿಯಂಗಡಿ, ಶಂಕರ ನಾರಾಯಣ, ಕೋಟೇಶ್ವರ, ಬೈಂದೂರು, ತಲ್ಲೂರು, ವಂಡ್ಸೆ ಸೇರಿದಂತೆ ಎಲ್ಲೆಡೆ ಜನಜೀವನ ಸಹಜಸ್ಥಿತಿಯಲ್ಲಿತ್ತು. ವ್ಯಾಪಾರ – ವಹಿವಾಟು ಕೂಡ ಎಂದಿನಂತೆ ಕಂಡು ಬಂತು. ಎರಡನೇ ಶನಿವಾರ ಆಗಿದ್ದರಿಂದ ಪೇಟೆಗಳಲ್ಲಿ ಜನರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಇತ್ತು. ಕೊಲ್ಲೂರು ಕ್ಷೇತ್ರದಲ್ಲಿ ಮಾ.14ರಿಂದ 1 ವಾರ ದೇಗುಲ ಭೇಟಿಯನ್ನು ಮುಂದೂಡುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಒಬ್ಬರ ತಪಾಸಣೆ
ಕುಂದಾಪುರದಲ್ಲಿ ಈವರೆಗೆ ಯಾವುದೇ ಕೊರೊನಾ ಶಂಕಿತ ಪ್ರಕರಣ ಕಂಡು ಬಂದಿಲ್ಲ. ವಿದೇಶದಿಂದ ಬಂದ ಒಬ್ಬರ ಬಗ್ಗೆ ನಿಗಾ ವಹಿಸಲಾಗಿದೆ. ಆದರೆ ಅವರು ಆರೋಗ್ಯವಾಗಿದ್ದಾರೆ. ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ತಂಡ ದಿನದ 24 ಗಂಟೆ ಸನ್ನದ್ಧವಾಗಿರಲಿದೆ. ಅದಕ್ಕೆ ಅಗತ್ಯವಿರುವ ಔಷಧ, ಮುಂಜಾಗ್ರತೆ ಕ್ರಮಗಳಾದ ಮಾಸ್ಕ್, ಮತ್ತಿತರ ಎಲ್ಲ ರೀತಿಯ ಪರಿಕರಗಳು ಕೂಡ ಇವೆ ಎಂದು ಕುಂದಾಪುರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ ಮಾಹಿತಿ ನೀಡಿದ್ದಾರೆ. ಸ್ವಚ್ಛತೆಗೆ ಒತ್ತು
ಸಂತೆ ನಡೆಸದಂತೆ ನಮಗೆ ಅಧಿಕೃತ ಸುತ್ತೋಲೆ ಬಂದಿರಲಿಲ್ಲ. ಇದಲ್ಲದೆ ಬೇರೆ ಬೇರೆ ಊರುಗಳಿಂದ ಶುಕ್ರವಾರವೇ ವ್ಯಾಪಾರಿಗಳು ಇಲ್ಲಿಗೆ ಬಂದಿದ್ದರಿಂದ ಸಂತೆ ನಡೆಸುವುದು ಅನಿವಾರ್ಯವಾಗಿತ್ತು. ಆದರೂ ವ್ಯಾಪಾರಸ್ಥರಲ್ಲಿ ಸ್ವಚ್ಛತೆಗೆ ಒತ್ತು ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಕುಡಿಯುವ ನೀರಿನ ಪೂರೈಕೆಗೂ ಕ್ರಮಕೈಗೊಳ್ಳಲಾಗಿತ್ತು. ಮುಂದಿನ ವಾರ ಸಂತೆ ನಡೆಸಬೇಕೇ ? ಅಥವಾ ಬೇಡವೇ ಎನ್ನುವ ಕುರಿತು ಜಿಲ್ಲಾಡಳಿತದ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುವುದು.
– ಶರತ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಎಪಿಎಂಸಿ ಕುಂದಾಪುರ ಮೀನೇ ಇಲ್ಲ
ಮೀನು ಮಾರುಕಟ್ಟೆಗೆ ಕೊರೊನಾ ಭೀತಿ ತಟ್ಟಿಲ್ಲ. ಆದರೆ ಕೆಲ ತಿಂಗಳಿನಿಂದ ಮೀನು ಇಲ್ಲದಿರುವುದರಿಂದ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುವಂತಾಗಿದೆ. ಇವತ್ತು ವ್ಯಾಪಾರ ಪರವಾಗಿಲ್ಲ. ಸ್ವಲ್ಪ ಹೆಚ್ಚೇ ಜನರು ಮೀನು ಖರೀದಿಗೆ ಬಂದಿದ್ದಾರೆ.
– ಲಲಿತಾ ಹಾಗೂ ಕಾವೇರಿ, ಮೀನು ವ್ಯಾಪಾರಸ್ಥರು