Advertisement

ಕೊರೊನಾ ಭೀತಿ: ಅರ್ಧಕ್ಕರ್ಧ ಚಿಕನ್‌ ದರ ಕುಸಿತ

09:04 PM Feb 24, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್‌ ಬಗ್ಗೆ ಹಬ್ಬುತ್ತಿರುವ ಭಯ, ಆತಂಕ, ವದಂತಿಗಳಿಗೆ ಜಿಲ್ಲೆಯ ಚಿಕನ್‌ ಮಾರುಕಟ್ಟೆ ತತ್ತರಗೊಳ್ಳುತ್ತಿದ್ದು, ಕಳೆದ ವಾರದಿಂದ ಜಿಲ್ಲೆಯಲ್ಲಿ ಚಿಕನ್‌ ಮಾರಾಟದಲ್ಲಿ ಭಾರೀ ಕುಸಿತಗೊಂಡು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

Advertisement

ಕೊರೊನಾ ವೈರಸ್‌ ಕೋಳಿಗಳ ಮೂಲಕವೂ ಹಬ್ಬುತ್ತಿದೆಯೆಂಬ ವದಂತಿಯಿಂದಾಗಿ ಜಿಲ್ಲೆಯ ಚಿಕನ್‌ ಮಾರಾಟದಲ್ಲಿ ವ್ಯತ್ಯಯ ಕಂಡು ಬಂದಿದ್ದು, 2-3 ವಾರಗಳಿಂದ ಬೆಲೆ ಸಹ ಕುಸಿತವಾಗಿದ್ದು, 180-190 ರೂ. ಇದ್ದ ಕೆ.ಜಿ.ಚಿಕನ್‌ ಬೆಲೆ ಈಗ ಅರ್ಧಕ್ಕೆ ಅರ್ಧ ಕುಸಿತವಾಗಿ ಬರೀ 100, 110 ರೂ.ಗೆ ಮಾತ್ರ ಮಾರಾಟಗೊಳ್ಳುತ್ತಿದೆ.

ಖರೀದಿಗೆ ಹಿಂದೇಟು: ಚೀನಾ ದೇಶದಲ್ಲಿ ಕೊರೊನಾ ವೈರಸ್‌ ಕಳೆದೆರೆಡು ತಿಂಗಳಿಂದ ಭೀಕರ ನರಕ ಸದೃಶವನ್ನು ಸೃಷ್ಟಿಸಿ ಅಪಾರ ಸಾವುನೋವು ಸಂಭವಿಸುವಂತೆ ಮಾಡಿದ್ದು, ಅದರ ಹೊಡೆತ ದೇಶದ ವಿವಿಧ ರಂಗಗಳಲ್ಲಿ ಕಾಣಿಸಿಕೊಂಡಿದೆ. ಕೊರೊನಾ ವೈರಸ್‌ ಫಾರಂ ಕೋಳಿಗಳ ಮೂಲಕ ಹರಡುತ್ತದೆ ಎಂದ ವದಂತಿ ಕೇಳಿ ಬರುತ್ತಿರುವುದರಿಂದ ಚಿಕನ್‌ ಪ್ರಿಯರನ್ನು ಚಿಂತೆಗೀಡು ಮಾಡಿದೆ.

ವಾರಕ್ಕೊಮ್ಮೆ ಚಿಕನ್‌ ಖರೀದಿ ಮಾಡುತ್ತಿದ್ದ ಗ್ರಾಹಕರು ಇಂದು ಖರೀದಿಗೆ ಹಿಂದೆ ಮುಂದೆ ನೋಡುವಂತಾಗಿದೆ. ಚಿಕನ್‌ ಅಗ್ಗವಾದರೂ ಖರೀದಿಗೆ ವೈರಸ್‌ ಭೀತಿಯಿಂದ ಯಾರು ಮುಂದಾಗುತ್ತಿಲ್ಲ. ಮಂಗಳವಾರ, ಭಾನುವಾರ ಗಿಜಿಗುಡುತ್ತಿದ್ದ ಚಿಕನ್‌ ಮಾರುಕಟ್ಟೆ ಅಂಗಡಿ, ಮಳಿಗೆಗಳು ಈಗ ಗ್ರಾಹಕರ ಬರುವಿಕೆಗೆ ಎದುರು ನೋಡುವಂತಾಗಿದೆ. ಇನ್ನೂ ಜಿಲ್ಲೆಯ ಚಿಕನ್‌ ವ್ಯಾಪಾರಸ್ಥರಿಗೂ ತೀವ್ರ ಆರ್ಥಿಕ ಹೊಡೆತ ಬಿದ್ದಂತಾಗಿದೆ.

ದಿನಕ್ಕೆ 120, 200 ಕೆ.ಜಿ. ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಈಗ ದಿನಕ್ಕೆ 50 ಕೆ.ಜಿ.ಮಾರಾಟ ಆಗುವುದು ಕಷ್ಟವಾಗಿದೆ ಎನ್ನುತ್ತಾರೆ ಮಾರಾಟಗಾರರು. ಕೊರೊನಾ ವೈರಸ್‌ ಕೋಳಿಗಳಿಂದ ಬರಲ್ಲ ಎಂದು ಎಷ್ಟೇ ಮನವರಿಕೆ ಮಾಡಿದರೂ ಗ್ರಾಹಕರು ಚಿಕನ್‌ ಖರೀದಿಗೆ ಮುಂದಾಗುತ್ತಿಲ್ಲ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನೂ ಹೋಟೆಲ್‌, ರೆಸ್ಟೋರೆಂಟ್‌, ಡಾಬಾಗಳಲ್ಲಿ ಕೂಡ ಚಿಕನ್‌ ಖಾದ್ಯಗಳ ಮಾರಾಟದಲ್ಲಿ ಕುಸಿತ ಕಂಡಿದೆಯೆಂಬ ಮಾತು ಕೇಳಿ ಬರುತ್ತಿದೆ.

Advertisement

ನಾಟಿ ಕೋಳಿಗೆ ಹೆಚ್ಚಿದ ಬೇಡಿಕೆ: ಕೊರೊನಾ ವೈರಸ್‌ ಭೀತಿಯಿಂದ ಮಾರುಕಟ್ಟೆಯಲ್ಲಿ ಫಾರಂ ಕೋಳಿ ಚಿಕನ್‌ ದರ ಪಾತಾಳಕ್ಕೆ ಕುಸಿದು ಫಾರಂ ಕೋಳಿಗಳನ್ನು ಖರೀದಿಗೆ ಹೆಚ್ಚಿನ ಪ್ರಮಾಣದಲ್ಲಿ ಯಾರು ಮುಂದಾಗದ ಕಾರಣ ಜಿಲ್ಲೆಯ ಮಾರುಕಟ್ಟೆಯಲ್ಲಿ ನಾಟಿ ಕೋಳಿಗಳಿಗೆ ಸಾಕಷ್ಟು ಬೇಡಿಕೆ ಹೆಚ್ಚಿದೆ.

ಚಿಕನ್‌ ಪ್ರಿಯರು ಫಾರಂ ಕೋಳಿಗಳನ್ನು ಬಿಟ್ಟು ನಾಟಿ ಕೋಳಿ ಖರೀದಿಗೆ ಮುಂದಾಗಿದ್ದಾರೆ. ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ ಪಟ್ಟಣಗಳಲ್ಲಿ ನಿತ್ಯ ನಾಟಿ ಕೋಳಿಗಳ ಮಾರಾಟ ಜೋರಾಗಿದೆ. ಕೆ.ಜಿ. ನಾಟಿ ಕೋಳಿ ಮಾರುಕಟ್ಟೆಯಲ್ಲಿ 200 ರಿಂದ 250 ರೂ.ವರೆಗೂ ಇದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಾಟಿ ಕೋಳಿಗಳನ್ನು ಸಾಕಿರುವ ರೈತರಿಗೆ ಕೊರೊನಾ ವೈರಸ್‌ ಒಂದು ರೀತಿ ಶುಕ್ರದೆಸೆ ಕಲ್ಪಿಸಿದ್ದು, ಕೈ ತುಂಬ ಕಾಸು ಮಾಡಿಕೊಳ್ಳುತ್ತಿದ್ದಾರೆ.

ಚೀನಾದಲ್ಲಿ ಕೊರೊನಾ ವೈರಸ್‌ ಭೀತಿಯಿಂದ ಯಾರು ಫಾರಂ ಕೋಳಿ ಚಿಕನ್‌ ಹೆಚ್ಚಾಗಿ ಖರೀದಿ ಮಾಡುತ್ತಿಲ್ಲ. ಗ್ರಾಹಕರು ಕೈ ತಪ್ಪ ಬಾರದೆಂದು ಹಳ್ಳಿಗಳಿಗೆ ಹೋಗಿ ನಾಟಿ ಕೋಳಿಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಎಂದಿನಂತೆ ವ್ಯಾಪಾರ ಇದೆ. ಆದರೆ ಫಾರಂ ಕೋಳಿ ಚಿಕನ್‌ ಮಾರಾಟದಲ್ಲಿ ಭಾರೀ ಕುಸಿತವಾಗಿದೆ.
-ಗಗನ್‌, ಚಿಕನ್‌ ವ್ಯಾಪಾರಿ, ಎಂಜಿ ರಸ್ತೆ

ಮನುಷ್ಯನಿಗೆ ಆರೋಗ್ಯ ಮುಖ್ಯ. ಫಾರಂ ಕೋಳಿಗಳಲ್ಲಿ ಕೊರೊನಾ ವೈರಸ್‌ ಹರಡುತ್ತದೆಯೆಂಬ ವದಂತಿ ಇದೆ. ಆದ್ದರಿಂದ ನಾವು ನಾಟಿ ಕೋಳಿಗಳನ್ನು ಖರೀದಿ ಮಾಡುತ್ತಿದ್ದೇವೆ. ಚಿಕನ್‌ ಬೆಲೆ ಕುಸಿತವಾದರೂ ಆರೋಗ್ಯದ ದೃಷ್ಟಿಯಿಂದ ಖರೀದಿಗೆ ಮನಸ್ಸು ಬರುತ್ತಿಲ್ಲ. ಬೆಲೆ ಹೆಚ್ಚಾದರೂ ಪರವಾಗಿಲ್ಲ. ನಾಟಿ ಕೋಳಿ ಖರೀದಿ ಮಾಡುತ್ತೇವೆ.
-ರಾಜಣ್ಣ, ಮಂಚೇನಹಳ್ಳಿ ನಿವಾಸಿ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next