ಕಲಬುರಗಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಒಂದು ವಾರದ ಕಾಲ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವಾರದವರೆಗೆ ರಜೆ ಘೋಷಿಸಲಾಗಿದೆ. ಪರೀಕ್ಷೆಗಳು ಇದ್ದರೆ ಯಥಾ ಪ್ರಕಾರ ನಡೆಯಲಿವೆ ಎಂದು ಸ್ಪಷ್ಟ ಪಡಿಸಿದರು.
ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದನ್ನು ತಾತ್ಕಾಲಿಕವಾಗಿ ಕೈಬಿಡುವಂತೆ ಧಾರ್ಮಿಕ ಮುಖಂಡರಿಗೆ ಮನವಿ ಮಾಡಲಾಗಿದೆ. ನಗರದ ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತದೆ ಎಂದರು.
ವಿಶೇಷ ಮನವಿ: ವಿದೇಶದಿಂದ ವಾಪಸ್ ಆದವರಿಗೆ ಜಿಲ್ಲಾಧಿಕಾರಿ ವಿಶೇಷ ಮನವಿ ಮಾಡಿದ್ದಾರೆ. ಇತ್ತೀಚೆಗೆ ಯಾವುದೇ ಹೊರ ದೇಶಕ್ಕೆ ಹೋಗಿ ಮರಳಿ ಕಲಬುರಗಿಗೆ ವಾಪಸಾಗಿರುವವರು ಯಾರಾದರೂ ಇದ್ದರೆ ಸ್ವಯಂ ಪ್ರೇರಿತರಾಗಿ ಬಂದು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೋರಿದರು.
ನಿರ್ಬಂಧಿತ ವಲಯ: ಇನ್ನು ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧ ವ್ಯಕ್ತಿಯು ವಾಸವಾಗಿದ್ದ ನಗರದ ವಾರ್ಡ್ ಅನ್ನು ನಿರ್ಬಂಧಿತ ವಲಯವನ್ನಾಗಿ ಘೋಷಿಸಲಾಗಿದೆ. ಆ ಬಡಾವಣೆಯಿಂದ ಹೊರಹೋಗುವ, ಒಳಬರುವ ಜನರ ಮೇಲೆ ಪೊಲೀಸರು ನಿಗಾ ವಹಿಸುವರು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಓ ಡಾ.ರಾಜಾ, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಎಸ್ಪಿ ಯಡಾ ಮಾರ್ಟಿನ್, ನಗರ ಪೋಲಿಸ್ ಆಯುಕ್ತ ನಾಗರಾಜ, ಡಿಎಸ್ಪಿ ಕಿಶೋರ್ ಬಾಬು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.