Advertisement

ಕೊರೊನಾ; ಜನರಿಗೆ ಮಾಸ್ಕ್ ಧರಿಸುವ ಸಮೂಹ ಸನ್ನಿ

09:31 PM Mar 10, 2020 | Lakshmi GovindaRaj |

ಮೈಸೂರು: ಕೊರೊನಾ ವೈರಸ್‌ ಸೋಂಕು ದಿನೇ ದಿನೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಭಯ ಭೀತರಾಗಿರುವ ಜನತೆ ಸಮೂಹ ಸನ್ನಿಗೊಳಗಾದವರಂತೆ ಮುಖಗವಸು (ಮಾಸ್ಕ್) ಧರಿಸಿ ಓಡಾಡುತ್ತಿದ್ದು, ಸೋಂಕು ತಗುಲದಿದ್ದವರೂ ಮಾಸ್ಕ್ ಖರೀದಿ, ಕೈತೊಳೆಯಲು ಹ್ಯಾಂಡ್‌ ಸ್ಯಾನಿಟೈಸರ್‌ ಖರೀದಿಗೆ ಮುಂದಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಮಾಸ್ಕ್ಗಳು ಮತ್ತು ಹ್ಯಾಂಡ್‌ ಸ್ಯಾನಿಟೈಸರ್‌ನ ಅಭಾವ ಸೃಷ್ಟಿಯಾಗಿದೆ.

Advertisement

ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಕೊರೊನಾ ವೈರಸ್‌ ಸೋಂಕಿತ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಎಲ್ಲರೂ ಮಾಸ್ಕ್ ಹಾಕಿಕೊಂಡು ಓಡಾಡುವಂತಹ ಪರಿಸ್ಥಿತಿ ಎಲ್ಲಿಯೂ ಇರುವುದಿಲ್ಲ. ರೋಗದ ಲಕ್ಷಣಗಳು ಕಂಡು ಬಂದರೆ ಮಾತ್ರ ಮಾಸ್ಕ್ ಹಾಕಿಕೊಂಡು ಓಡಾಡಬೇಕಾಗುತ್ತದೆ. ಅವಶ್ಯಕತೆಯಿರುವಷ್ಟು ಮಾಸ್ಕ್ಗಳು ಜಿಲ್ಲೆಯಲ್ಲಿ ಲಭ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಆರ್‌.ವೆಂಕಟೇಶ್‌ ಹೇಳುತ್ತಾರೆ.

ಸ್ವಚ್ಛತೆ: ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಲು ಆಗಾಗ್ಗೆ ಸಾಬೂನು ಹಾಗೂ ನೀರಿನಿಂದ ಕೈತೊಳೆಯುವುದನ್ನು ಅಭ್ಯಾಸ ಮಾಡಿ ಅಥವಾ ಆಲ್ಕೋಹಾಲ್‌ ಆಧಾರಿತ ಹ್ಯಾಂಡ್‌ರಬ್‌ಗಳನ್ನು ಬಳಸಿ. ನಿಮ್ಮ ಕೈಗಳು ಸ್ವಚ್ಛಗೊಂಡಂತೆ ಕಂಡರೂ ಸಹಾ ಆಗಿಂದಾಗ್ಗೆ ಸಾಬೂನು ಮತ್ತು ನೀರಿನಿಂದ ಕೈತೊಳೆಯುವುದು. ನಿಮಗೆ ರೋಗ ಲಕ್ಷಣಗಳಾದ ಜ್ವರ, ಉಸಿರಾಟದ ತೊಂದರೆ, ನೆಗಡಿ ಅಥವಾ ಕೆಮ್ಮು ಕಂಡು ಬಂದಲ್ಲಿ ಮೂಗು ಮತ್ತು ಬಾಯಿಯನ್ನು ಕರವಸ್ತ್ರ ಅಥವಾ ಮಾಸ್ಕ್ನಿಂದ ಮುಚ್ಚಿಕೊಂಡು ತಕ್ಷಣ ವೈದ್ಯರನ್ನು ಭೇಟಿ ಮಾಡಿ ಎಂದು ಸಲಹೆ ನೀಡಿದ್ದಾರೆ.

ಬ್ರಾಂಡ್‌ ಮಾಸ್ಕ್: ಕೊರೊನಾ ವೈರಸ್‌ ಸೋಂಕು ಹರಡುವಿಕೆ ತಡೆಗೆ ಎನ್‌-95 ಬ್ರಾಂಡ್‌ನ‌ ಮಾಸ್ಕ್ ಧರಿಸಬೇಕಾಗುತ್ತದೆ. ಆದರೆ, ಈ ಬ್ರಾಂಡ್‌ನ‌ ಮಾಸ್ಕ್ಗಳು ಸರಬರಾಜಾಗುತ್ತಿಲ್ಲ. ಬಳಸಿ ಬಿಸಾಡುವ (ಡಿನ್ಪೋಸಬಲ್‌) ಮಾಸ್ಕ್ಗಳು ಕೆಲ ಔಷಧ ಅಂಗಡಿಗಳಲ್ಲಿ ಲಭ್ಯವಿದ್ದವಾದರೂ ಜನರು ಅನಗತ್ಯವಾಗಿ ಮಾಸ್ಕ್ ಖರೀದಿಸಿದ್ದರಿಂದ ದಾಸ್ತಾನು ಖಾಲಿಯಾಗಿದ್ದು, ದೇಶಾದ್ಯಂತ ಮಾಸ್ಕ್ಗಳಿಗೆ ಭಾರೀ ಬೇಡಿಕೆ ಉಂಟಾಗಿರುವುದರಿಂದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಸ್ಥಳೀಯ ಡಿಸ್ಟ್ರಿಬ್ಯೂಟರ್‌ಗಳಿಗೆ ರೀ ಯೂಸೆಬಲ್‌, ಡಿನ್ಪೋಸಬಲ್‌ ಮಾಸ್ಕ್ಗಳು ಸರಬರಾಜಾಗುತ್ತಿಲ್ಲ.

ಇದರಿಂದಾಗಿ ಮೊದಲು ಮೆಡಿಕಲ್‌ ಸ್ಟೋರ್‌ಗಳಲ್ಲಿ 2 ರಿಂದ ರೂ.ಗೆ ಸಿಗುತ್ತಿದ್ದ ಡಿನ್ಪೋಸಬಲ್‌ ಮಾಸ್ಕ್ನ್ನು 20 ರಿಂದ 25 ರೂ.ಗೆ ಮಾರಲಾಗುತ್ತಿದೆ. ಹೆಚ್ಚಿನ ಹಣ ನೀಡಿದರೂ ತಕ್ಷಣಕ್ಕೆ ಮಾಸ್ಕ್ ದೊರೆಯುವುದಿಲ್ಲ. ಆರ್ಡರ್‌ ಕೊಟ್ಟು ಅವರು ಕೊಟ್ಟಾಗ ಪಡೆದುಕೊಳ್ಳಬೇಕಾದ ಸ್ಥಿತಿ ಇದೆ. ಇನ್ನೂ ಕೆಲವರು ಜನರ ಸಮೂಹಸನ್ನಿಯನ್ನೇ ಹಣ ಮಾಡಲು ಬಳಸಿಕೊಳ್ಳುತ್ತಿದ್ದು, ಸಾಧಾರಣ ಮಾಸ್ಕ್ಗೇ ಎನ್‌-95 ಎಂದು ಪ್ರಿಂಟ್‌ ಹಾಕಿ ಮಾರುತ್ತಿದ್ದಾರೆ. ಜನರಿಗೆ ಗುಣಮಟ್ಟದ ಮಾಸ್ಕ್ ಯಾವುದು, ಸಾಧಾರಣ ಮಾಸ್ಕ್ ಯಾವುದು ತಿಳಿದಿಲ್ಲ. ವೈರಸ್‌ ಸೋಂಕು ತಗುಲದಿದ್ದರೆ ಸಾಕು ಎಂದು ಅಗತ್ಯವಿಲ್ಲದಿದ್ದರೂ ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ ಎನ್ನುತ್ತಾರೆ ಕೆಲ ಸರ್ಜಿಕಲ್ಸ್‌ ಡಿಸ್ಟ್ರಿಬ್ಯೂಟರ್‌ಗಳು.

Advertisement

ಹ್ಯಾಂಡ್‌ ಸ್ಯಾನಿಟೈಸರ್‌ನಲ್ಲಿ ಆಲ್ಕೋಹಾಲಿಕ್‌ ಮತ್ತು ನಾನ್‌ ಆಲ್ಕೋಹಾಲಿಕ್‌ ಹ್ಯಾಂಡ್‌ರಬ್‌ ಗೆ ಭಾರೀ ಬೇಡಿಕೆ ಇದೆ. 50 ಎಂಎಲ್‌ನ ನಾನ್‌ ಆಲ್ಕೋಹಾಲಿಕ್‌ ಹ್ಯಾಂಡ್‌ರಬ್‌ ಲಭ್ಯವಿದೆ. ಆದರೆ, 500 ಎಂಎಲ್‌ನ ಹ್ಯಾಂಡ್‌ ಸ್ಯಾನಿಟೈಸರ್‌ ಸರಬರಾಜಿಲ್ಲ. ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗುತ್ತಿದ್ದಂತೆ ಕಳೆದ ಒಂದು ತಿಂಗಳಿಂದ ಮೈಸೂರಿಗೆ ಮಾಸ್ಕ್ ಸರಬರಾಜಾಗುತ್ತಿಲ್ಲ. ಡಿಸ್ಟ್ರಿಬ್ಯೂಟರ್‌ಗಳ ಬಳಿ ದಾಸ್ತಾನು ಇಲ್ಲದ್ದರಿಂದ ಅಭಾವ ಸೃಷ್ಟಿಯಾದಂತೆ ಅನಿಸಿದೆ ಎನ್ನುತ್ತಾರೆ ಸಿಬಿಆರ್‌ ಸರ್ಜಿಕಲ್ಸ್‌ನ ಮಾಲೀಕ ರವಿಗೌಡ.

ಆರೋಗ್ಯ ಚೆನ್ನಾಗಿದ್ದರೆ ಮಾಸ್ಕ್ ಅಗತ್ಯವಿಲ್ಲ: ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಮೂಗು ಮತ್ತು ಬಾಯಿಯನ್ನು ಕರವಸ್ತ್ರ ಅಥವಾ ಟಿಶ್ಯುದಿಂದ ಮುಚ್ಚಿಕೊಳ್ಳಿ. ಈ ರೋಗದ ಲಕ್ಷಣ ಮತ್ತು ಚಿಹ್ನೆಗಳಿದ್ದರೆ 24*7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ, ಬಳಸಿದ ಟಿಶ್ಯು, ಕರವಸ್ತ್ರವನ್ನು ತಕ್ಷಣವೇ ಮುಚ್ಚಿದ ತೊಟ್ಟಿಯಲ್ಲಿ ಎಸೆಯಿರಿ, ದೊಡ್ಡ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಿ, ಕೆಮ್ಮು ಮತ್ತು ಜ್ವರ ಕಂಡು ಬಂದರೆ ಬೇರೆಯವರೊಡನೆ ನಿಕಟ ಸಂಪರ್ಕ ಹೊಂದುವುದು,

ಕಣ್ಣುಗಳು, ಮೂಗು ಮತ್ತು ಬಾಯಿಯನ್ನು ಆಗಿಂದಾಗ್ಗೆ ಸ್ಪರ್ಶಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಮಾಡಬೇಡಿ, ನೀವು ಆರೋಗ್ಯವಾಗಿದ್ದಿರಾ ಎಂದು ನಿಮಗೆ ತಿಳಿದಿದ್ದರೆ ನೀವು ಮಾಸ್ಕ್ ಧರಿಸುವ ಅಗತ್ಯವಿಲ್ಲ. ನಿಮಗೆ ಆರೋಗ್ಯ ಸರಿಯಿಲ್ಲ ಎಂದೆನಿಸಿದರೆ ಮಾಸ್ಕ್ ಧರಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾಗೃತಿ ಮೂಡಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಆರ್‌.ವೆಂಕಟೇಶ್‌ ತಿಳಿಸಿದ್ದಾರೆ.

ರೋಗದ ಲಕ್ಷಣ ಕಂಡರೆ ರಜೆ ನೀಡಿ – ಡಿಡಿಪಿಐ: ಯಾವುದೇ ವಿದ್ಯಾರ್ಥಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಶಾಲೆಗೆ ಬರಬೇಕು ಎಂದು ಸೂಚಿಸಿಲ್ಲ. ಆದರೆ, ಆರೋಗ್ಯ ಇಲಾಖೆ ನೀಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳ‌ ಮೂಲಕ ತಿಳಿಸಲಾಗಿದೆ. ಯಾವುದೇ ವಿದ್ಯಾರ್ಥಿಗೆ ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡುಬಂದರೆ ರಜೆ ಕೊಟ್ಟು ಮನೆಗೆ ಕಳುಹಿಸುವಂತೆ ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ(ಡಿಡಿಪಿಐ) ಡಾ.ಪಾಂಡುರಂಗ ತಿಳಿಸಿದ್ದಾರೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next