ಕಲಬುರಗಿ: ಕೊರೊನಾ ಸೋಂಕಿನ ಪ್ರಮಾಣ ತಗ್ಗುತ್ತಿರುವುದರಿಂದ ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲೂ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಮೇ 14ರಿಂದ ಬೆಳಗ್ಗೆ 6 ಗಂಟೆಯಿಂದ ಮೇ 21ರ ಬೆಳಗ್ಗೆ 6 ಗಂಟೆವರೆಗೆ ಕಂಟೋನ್ಮೆಂಟ್ ಝೋನ್ ಹೊರತು ಪಡಿಸಿ ಜಿಲ್ಲಾದ್ಯಂತ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.
ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಬೆಳಗ್ಗೆ 6ರಿಂದ 10ಗಂಟೆಯವರೆಗೆ ನೀಡಿದ್ದ ಅವಕಾಶವನ್ನು ಈಗ ಬೆಳಗ್ಗೆ 6ರಿಂದ 2 ಗಂಟೆ ವರೆಗೆ ವಿಸ್ತರಿಸಲಾಗಿದೆ. ಹೋಟೆಲ್ ಪಾರ್ಸೆಲ್‌ಗೂ ಅವಕಾಶ ನೀಡಲಾಗಿದೆ. ಆದರೆ, ಪ್ರತಿ ದಿನ ರಾತ್ರಿ 7ರಿಂದ ಬೆಳಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ಜತೆಗೆ ಶುಕ್ರವಾರ, ಶನಿವಾರ, ರವಿವಾರ ವಾರಾಂತ್ಯ ಲಾಕ್‌ಡೌನ್ ಇರಲಿದೆ ಎಂದು ಡಿಸಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾ° ತಿಳಿಸಿದ್ದಾರೆ.
ಅಗತ್ಯ ವಸ್ತುಗಳಾದ ಹಾಲು, ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಆಂಬ್ಯುಲೆನ್ಸ್, ಅಗ್ನಿ ಶಾಮಕ ಮತ್ತು ತುರ್ತು ವೈದ್ಯಕೀಯ ಸೇವೆಗಳು, ವಿದ್ಯುತ್, ಪೆಟ್ರೋಲ್ ಪಂಪ್, ನೀರು, ನೈರ್ಮಲ್ಯ ಸೇವೆಗಳಿಗೆ ನಿತ್ಯ ರಾತ್ರಿ 7 ಗಂಟೆ ವರೆಗೆ ಅನುಮತಿಸಲಾಗಿದೆ ಎಂದು ತಿಳಿಸಿ ದ್ದಾರೆ. ಆಹಾರ, ದಿನಸಿ, ಕಿರಾಣಿ ಅಂಗಡಿಗಳು, ಹಣ್ಣುಗಳು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವು ಗಳೊಂದಿಗೆ ವ್ಯವಹರಿಸುವ ಅಂಗಡಿಗಳಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಬೀದಿ ಬದಿ ಮಾರಾಟಗಾರರಿಗೂ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಮದ್ಯ ಅಂಗಡಿಗಳು ಮತ್ತು ಮಳಿಗೆಗಳಲ್ಲಿ ಪಾರ್ಸೆಲ್ ಕೇವಲ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಎಲ್ಲ ಉತ್ಪಾದನಾ ಘಟಕಗಳು, ಕೈಗಾರಿಕೆಗಳು ಶೇ.50Ãಷ್ಟು ಸಿಬ್ಬಂದಿ ಯೊಂದಿಗೆ ಕಾರ್ಯನಿರ್ವಹಿಸಲು ಅನು ಮತಿಸಲಾಗಿದೆ. ಆದರೆ ಗಾಮೆಂìಟ್ ತಯಾರಿಕೆಯಲ್ಲಿ ತೊಡಗಿರುವ ಘಟಕಗಳು, ಸಂಸ್ಥೆಗಳು, ಕೈಗಾರಿಕೆಗಳು ಶೇ.30ರಷ್ಟು ಸಿಬ್ಬಂದಿಗೆ ಮಾತ್ರ ಅನುಮತಿ ಇದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳೊಂದಿಗೆ ವ್ಯವಹರಿಸುವ ಅಂಗಡಿಗಳು, ಸಂಸ್ಥೆಗಳು, ವಿಶೇಷವಾಗಿ ಸಿಮೆಂಟ್ ಮತ್ತು ಸ್ಟೀಲ್ ಸೇರಿದಂತೆ ಎಲ್ಲ ನಿರ್ಮಾಣ ಚಟುವಟಿಕೆಗಳು, ದುರಸ್ತಿ ಕಾರ್ಯಗಳಿಗೆ ಅನುಮತಿಸಲಾಗಿದೆ.
ಅದೇ ರೀತಿ ಕೃಷಿ ಮತ್ತು ಸಂಬಂಧಿತ ಕಚೇರಿಗಳು, ಪಿಡಬ್ಲೂÂಡಿ, ವಸತಿ, ಪ್ರಾದೇಶಿಕ ಸಾರಿಗೆ, ಸಹಕಾರ, ನಬಾರ್ಡ್ ಮತ್ತು ಕೇಂದ್ರ ಸರ್ಕಾರದ ಕಂದಾಯ ಇಲಾಖೆಯ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಆಪ್ಟಿಕಲ್ ಅಂಗಡಿಗಳಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವುದು ಮತ್ತು ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಜನಸಂದಣಿ ಆಗದಂತೆ, ಕೊರೊನಾ ನಡುವಳಿಕೆಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.