Advertisement

ವಿದೇಶಿ ಪ್ರವಾಸಿಗರಿಂದ ಕೊರೊನಾ ಭೀತಿ

03:51 PM Feb 05, 2020 | Suhan S |

ಗಂಗಾವತಿ: ಚೀನಾ ದೇಶದಲ್ಲಿ ಮರಣ ಮೃದಂಗ ಆಟವಾಡುತ್ತಿರುವ ಕೊರೊನಾ ವೈರಸ್‌ ಬಗ್ಗೆ ತಾಲೂಕಿನ ಪ್ರವಾಸಿ ತಾಣಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಚೀನಾ ಸೇರಿದಂತೆ ವಿವಿಧ ದೇಶಗಳ ಪ್ರವಾಸಿಗರು ಸಮೀಪದ ಹಂಪಿ, ವಿರುಪಾಪುರಗಡ್ಡಿ ಭೇಟಿ ನೀಡುವುದರಿಂದ ಸಹಜವಾಗಿಯೇ ಸ್ಥಳೀಯರಲ್ಲಿ ಕೊರೊನಾ ಭೀತಿ ಆವರಿಸಿದೆ.

Advertisement

ತಾಲೂಕಿನ ವಿರೂಪಾಪುರಗಡ್ಡಿ, ಕಿಷ್ಕಿಂದಾ ಪ್ರದೇಶಕ್ಕೆ ಚೀನಾ ದೇಶ ಸೇರಿದಂತೆ ವಿದೇಶಗಳಿಂದ ಪ್ರತಿ ದಿನ ನೂರಾರು ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇವರಲ್ಲಿ ಯಾರಿಗೆ ಕೊರೊನಾ ಸೋಂಕು ಇದೆ ಎಂದು ತಿಳಿಯುತ್ತಿಲ್ಲ. ಸ್ಥಳೀಯ ರೆಸಾರ್ಟ್‌ಗಳಲ್ಲಿ ವಿದೇಶಿ ಪ್ರವಾಸಿಗರು ವಾರಗಟ್ಟಲೇ ವಾಸ ಮಾಡುವುದರಿಂದ ವಿದೇಶಿಗರಿಂದ ಕೆರೊನಾ ಜ್ವರ ಹರಡುವ ಭೀತಿಯಲ್ಲಿ ಸ್ಥಳೀಯರಲ್ಲಿದ್ದು, ರೋಗದ ಕುರಿತು ಜನಜಾಗೃತಿ ಮೂಡಿಸಬೇಕಿದೆ. ಪ್ರತಿ ವರ್ಷ ನವೆಂಬರ್‌-ಏಪ್ರೀಲ್‌ ತಿಂಗಳ ವರೆಗೆ ಚೀನಾ, ಜಪಾನ್‌ ಇಂಡೋನೇಷಿಯಾ, ಯುರೋಪ್‌, ಬ್ರಿಟನ್‌, ಇಸ್ರೇಲ್‌ ಸೇರಿ ವಿಶ್ವದ ವಿವಿಧ ದೇಶಗಳಿಂದ ಹಂಪಿ- ವಿರೂಪಾಪುರಗಡ್ಡಿ, ಕಿಷ್ಕಿಂದಾ ಪ್ರದೇಶ ವೀಕ್ಷಣೆಗೆ ಸಾವಿರಾರು ವಿದೇಶಿಗರು ಆಗಮಿಸುತ್ತಾರೆ.

ಈ ಭಾರಿ ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೊನಾ ನೆಗಡಿ ಜ್ವರ ಹರಡಿದ್ದು, ಅಲ್ಲಿಂದ ಆಗಮಿಸಿರುವ ಪ್ರವಾಸಿಗರಿಂದ ಸ್ಥಳೀಯರಿಗೆ ಈ ಜ್ವರ ಹರಡುವ ಆತಂಕ ಇರುವುದರಿಂದ ಕೂಡಲೇ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಹಂಪಿ-ವಿರೂಪಾಪುರಗಡ್ಡಿ, ಕಿಷ್ಕಿಂದಾ ಅಂಜನಾದ್ರಿ, ಆನೆಗೊಂದಿ, ಹನುಮನಹಳ್ಳಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಕೊರೊನಾ ರೋಗದ ಕುರಿತು ಜಾಗೃತಿ

ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಿದೆ. ಹಂಪಿ-ವಿರೂಪಾಪುರಗಡ್ಡಿ, ಸಾಣಾಪುರ, ಜಂಗ್ಲಿ, ರಂಗಾಪುರ,ಆನೆಗೊಂದಿ ರೆಸಾರ್ಟ್ ಗಳಲ್ಲಿ ಉಳಿದುಕೊಂಡಿರುವ ವಿದೇಶಿಗರ ಆರೋಗ್ಯ ತಪಾಸಣೆ ಮತ್ತು ರೆಸಾರ್ಟ್‌ ಹೊಟೇಲ್‌ಗ‌ಳ ಮಾಲೀಕರು ಕಾರ್ಮಿಕರಿಗೆ ರೋಗದ ಕುರಿತು ಮಾಹಿತಿ ನೀಡುವುದು ಅವಶ್ಯವಿದೆ. ದೇಶ ವಿದೇಶಗಳಲ್ಲಿ ಕೊರೊನಾ ನೆಗಡಿ ಜ್ವರಕ್ಕೆ ನೂರಾರು ಜನ ಬಲಿಯಾಗಿದ್ದರೂ ಇದುವರೆಗೂ ಸರಕಾರ ಅಥವಾ ಜಿಲ್ಲಾ ಆರೋಗ್ಯ ಇಲಾಖೆ ಯಾವುದೇ ಮುಂಜಾಗರೂಕತೆ ತೆಗೆದುಕೊಂಡಿಲ್ಲ. ಸತತ ಹಲವು ದಿನಗಳಿಂದ ನೆಗಡಿ ಜ್ವರದಿಂದ ಬಳಲುತ್ತಿರುವವ ರಕ್ತದ  ಮಾದರಿ ಪರೀಕ್ಷೆಯನ್ನು ತೆಗೆದುಕೊಂಡಿಲ್ಲ. ಕೂಡಲೇ ತಾಲೂಕು ಮತ್ತು ಜಿಲ್ಲಾಡಳಿತ ಜಾಗೃತೆ ತೆಗೆದುಕೊಳ್ಳದಿದ್ದರೆ ಇಲ್ಲಿಯೂ ಕೊರೊನಾ ಜ್ವರ ಹರಡುವ ಸಂಭವ ಇರುವ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಹಂಪಿ ವಿರೂಪಾಪುರಗಡ್ಡಿ ಪ್ರದೇಶಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿರುವುದರಿಂದ ಸಹಜವಾಗಿ ಕೊರೊನಾ ರೋಗ ಹರಡುವ ಭಯಸ್ಥಳೀಯರಲ್ಲಿದೆ. ಕೊರೊನಾ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಇದುವರೆಗೂ ಆನೆಗೊಂದಿ-ಸಾಣಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೊನಾ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ. ವಿದೇಶಿ ಪ್ರವಾಸಿಗರು ಉಳಿದುಕೊಳ್ಳುವ ರೆಸಾರ್ಟ್‌ ಮತ್ತು ಹೊಟೇಲ್‌ಗ‌ಳಲ್ಲಿ ಕೊರೊನಾ ಲಕ್ಷಣಗಳ್ಳುಳ್ಳ ಪ್ರವಾಸಿಗರ ಕುರಿತು ಮಾಹಿತಿ ಸಂಗ್ರಹ ಮಾಡಲಾಗುವುದು. – ಡಾ| ಲಿಂಗರಾಜು, ಜಿಲ್ಲಾ ಆರೋಗ್ಯ ಅಧಿಕಾರಿ.

Advertisement

 

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next