Advertisement
ಹೌದು, ಕೊರೊನಾವೈರಸ್ ಎಂಬ ಮಹಾಮಾರಿ ಯೊಂದು ಚೀನವನ್ನು ಹಿಂದೆಂದೂ ಕಂಡರಿಯದಂತಹ “ನರಕದ ಕೂಪ’ಕ್ಕೆ ತಳ್ಳಿದೆ. 800ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿರುವ ಈ ಸೋಂಕಿ ನಿಂದಾಗಿ, ರಾಜಧಾನಿಯಿಂದ ಹಿಡಿದು ಕುಗ್ರಾಮಗಳವರೆಗೆ ಇಡೀ ಚೀನಗೆ ಚೀನವೇ ಅಕ್ಷರಶಃ ಸ್ತಬ್ಧವಾಗಿದೆ. ಜನರಿಂದ ಗಿಜಿಗುಡುತ್ತಿದ್ದ ರಸ್ತೆಗಳು, ಮಾಲ್‌ಗಳು, ಪಾರ್ಕ್‌ಗಳು, ಸಿನಿಮಾ ಮಂದಿರಗಳಲ್ಲಿ ಶ್ಮಶಾನ ಮೌನ ಆವರಿಸಿದೆ. ಜನರು ಕಳೆದೊಂದು ತಿಂಗಳಿಂದ ಗೃಹಬಂಧನದಲ್ಲಿದ್ದಾರೆ. ಮನೆಗಳಿಂದ ಹೊರಗೆ ಕಾಲಿಡಲೂ ಆಗದ ಸ್ಥಿತಿ. ಅಕ್ಕಪಕ್ಕದ ಮನೆಯವರೊಂದಿಗೆ ಹರಟಲೂ ಆಗದಷ್ಟು ಭಯ, ಶಾಲೆಗಳು, ಕಚೇರಿಗಳು ಕಾರ್ಯನಿರ್ವಹಿಸುತ್ತಿಲ್ಲ, ಕಣ್ಣ ಮುಂದೆ ಅನಿಶ್ಚಿತತೆಯ ದೊಡ್ಡ ಗೋಡೆ ಎದ್ದಿದೆ. ಇದಕ್ಕೆಲ್ಲ ಕಾರಣ ಆ ಮಾರಣಾಂತಿಕ ವೈರಸ್. ದಿನ ಬೆಳಗಾಗುತ್ತಿದ್ದಂತೆ, ಎಲ್ಲರೂ ಮೊದಲು ನೋಡುವುದೇ ತಮ್ಮ ಮೊಬೈಲ್ ಫೋನ್‌ಗಳನ್ನು. ಸಾವಿನ ಸಂಖ್ಯೆ ಎಷ್ಟಾಗಿದೆ, ಸೋಂಕಿತರ ಸಂಖ್ಯೆ ತಗ್ಗಿದೆಯೇ ಎಂಬ ಮಾಹಿತಿಗಾಗಿ ಕಾಯುತ್ತಿರುತ್ತೇವೆ ಎನ್ನುತ್ತಾರೆ ಚೀನ ನಾಗರಿಕರು.
ವೈರಸ್ ವಕ್ಕರಿಸಿದಾಗಿನಿಂದಲೂ ನಿರಂತರವಾಗಿ ಹಗಲುರಾತ್ರಿ ದುಡಿಯುತ್ತಿರುವವರೆಂದರೆ ವೈದ್ಯಕೀಯ ಸಿಬಂದಿ. ಎಲ್ಲ ಆಸ್ಪತ್ರೆಗಳೂ ಫುಲ್ ರಷ್. ವೈದ್ಯರು, ದಾದಿಯರು, ಇತರೆ ಸಿಬಂದಿಗೆ ದಿನದ 24 ಗಂಟೆಯೂ ಕೆಲಸವೋ ಕೆಲಸ. ಅದರ ಜತೆಗೆ ತಾವೂ ಮುಖಕ್ಕೆ ಮಾಸ್ಕ್ ಧರಿಸಿಯೇ ಇರಬೇಕು. ಹೀಗೆ ದಿನವಿಡೀ ಮಾಸ್ಕ್ ಧರಿಸಿದ್ದರ ಪರಿಣಾಮವೆಂಬಂತೆ, ಅವರ ಮುಖಗಳಿಡೀ ಗಾಯದ ಗುರುತುಗಳು ಮೂಡಿವೆ. ಅವುಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.