Advertisement

ಕೊರೊನಾ ಎಫೆಕ್ಟ್: ಅಘೋಷಿತ ಬಂದ್‌

11:19 AM Mar 15, 2020 | Naveen |

ಹರಿಹರ: ಕೊರೊನಾ ವೈರಾಣು ಭೀತಿಯ ಜತೆಗೆ ಬಿಸಿಲಿ ಧಗೆ ಅಲ್ಲದೆ ರಜಾ ದಿನವಾದ ಕಾರಣ ಕಾರಣ ನಗರದಲ್ಲಿ ಎರಡನೇ ಶನಿವಾರ ಅಘೋಷಿತ ಬಂದ್‌ ವಾತಾವರಣ ಕಂಡು ಬಂತು.

Advertisement

ರಾಜ್ಯದಲ್ಲಿ 7 ದಿನಗಳ ಕಾಲ ಶಾಲಾ ಕಾಲೇಜುಗಳು, ಸಿನಿಮಾ ಮಂದಿರ, ಮಾಲ್‌ಗ‌ಳನ್ನು ತೆರೆಯಲು ನಿರ್ಬಂಧ ವಿಧಿಸಿರುವ ಪರಿಣಾಮ ಮೊದಲ ದಿನ ಹರಿಹರ ನಗರ ಜನರಿಲ್ಲದೆ ಭಣಗುಡುತ್ತಿತ್ತು.

ಸದಾ ಜನನಿಬಿಡತೆಯಿಂದ ಕೂಡಿರುತ್ತಿದ್ದ ಗಾಂಧಿ ವೃತ್ತ, ಶಿವಮೊಗ್ಗ ವೃತ್ತ, ಮುಖ್ಯ ರಸ್ತೆ, ಶಿವಮೊಗ್ಗ ರಸ್ತೆ, ಹಳೆ ಪಿ.ಬಿ.ರಸ್ತೆಗಳು ಎಂದಿನಂತೆ ಜನ-ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ಅಂಗಡಿ ಮುಗ್ಗಟ್ಟುಗಳಲ್ಲಿ ಎಂದಿನಂತೆ ಗ್ರಾಹಕರು ಕಂಡುಬರಲಿಲ್ಲ. ಶಾಪಿಂಗ್‌ ಕಾಂಪ್ಲೆಕ್ಸ್‌, ಮೋರ್‌, ಜಿ7ನಂತಹ ಮಾಲ್‌ಗ‌ಳಲ್ಲೂ ವ್ಯಾಪಾರ ಕ್ಷೀಣಿಸಿತ್ತು. ಹೋಟೆಲ್‌ಗ‌ಳು ಬಾಗಿಲು ತೆರೆದಿದ್ದರೂ ಎಂದಿನಂತೆ ವ್ಯಾಪಾರವಿರಲಿಲ್ಲ. ತಯಾರಿಸಿಟ್ಟ ಆಹಾರ ಪದಾರ್ಥವೂ ವೇಸ್ಟ್‌ ಆಗುವ ಆತಂಕದಲ್ಲಿ ಮಾಲೀಕರಿದ್ದರು. ಮಾಂಸಾಹಾರಿ ಹೋಟೆಲ್‌ ಗಳಲ್ಲಂತೂ ಜನರ ಸುಳಿವೇ ಇರಲಿಲ್ಲ. ರಸ್ತೆ ಬದಿ ಹೋಟೆಲ್‌ಗ‌ಳಲ್ಲೂ ಗಿರಾಕಿಗಳಿರಲಿಲ್ಲ, ಪರಿಣಾಮ ಬಹುತೇಕ ಗೂಡಾಂಗಡಿಗಳನ್ನು ಮಧ್ಯಾಹ್ನದ ಹೊತ್ತಿಗೆ ಬಂದ್‌ ಮಾಡಿಕೊಂಡು ತೆರಳಲಾಯಿತು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಎಂದಿನಂತೆ ಬಸ್‌ ಸಂಚಾರ ಇತ್ತಾದರೂ ಪ್ರಯಾಣಿಕರಿಲ್ಲದ್ದರಿಂದ ಬಹುತೇಕ ಬಸ್ಸುಗಳು ಖಾಲಿಯಾಗಿ ಮುಂದೆ ಸಾಗಿದವು.

Advertisement

ನಗರದ ಜಯಶ್ರೀ ಹಾಗೂ ಶ್ರೀಕಾಂತ್‌ ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದುಗೊಳಿಸಲಾಗಿತ್ತು. ಕಾಲೇಜಿಗೆ ರಜೆ ಇರುವುದರಿಂದ ಸಿನಿಮಾವಾದರೂ ನೋಡೋಣವೆಂದು ಬರುತ್ತಿದ್ದ ಕೆಲ ಯುವಕರು ಮಂದಿರದ ಎದುರಿದ್ದ ಕೊರೊನಾ ವೈರಸ್‌ ಪ್ರಭಾವದಿಂದ ಈ ದಿನ ಪ್ರದರ್ಶನ ಇರುವುದಿಲ್ಲ ಎಂಬ ಫಲಕ ನೋಡಿ ವಾಪಾಸ್‌ ಆಗುತ್ತಿದ್ದ ದೃಶ್ಯ ಕಂಡು ಬಂತು.

ತಾಲೂಕಿನಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು ಬಂದ್‌ ಆಗಿದ್ದವು. ನರ್ಸರಿ, ಅಂಗನವಾಡಿ ಶಾಲೆಗಳನ್ನೂ ರಜೆ ಮಾಡಲಾಗಿತ್ತು. ಗ್ರಾಮೀಣ ಸಾರಿಗೆ ಬಸ್ಸುಗಳೂ ಖಾಲಿಯಾಗಿ ಸಂಚರಿಸಿದವು. ಜನಸಂದಣಿ ಇರುವ ಸಿಟಿ ಸಹವಾಸವೇ ಬೇಡವೆಂದು ಜನರು ಗ್ರಾಮದಲ್ಲೆ ಉಳಿಯಲು ನೋಡಿದಂತೆ ಕಂಡು ಬಂತು. ಆದರೆ ಸಂಜೆ ವೇಳೆಗೆ ನಗರದ ಬೀದಿಗಳಲ್ಲಿ ಜನಸಂಚಾರ ಹೆಚ್ಚಾಯಿತು. ಅಲ್ಲಲ್ಲಿ ಮಾರುಕಟ್ಟೆ ಪ್ರದೇಶಗಳು ಗಿಜಿಗಿಡಲಾರಂಭಿಸಿದವು. ನಗರ ಪ್ರದೇಶದ ಬಹುತೇಕರು ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕಿದ್ದು ಕೊರೊನಾ ಭೀತಿಗೋ, ಬಿಸಿಲ ಧಗೆಯಿಂದಲೋ ತಿಳಿಯದಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next