ಬೀದರ್: ಜಗತ್ತಿನಲ್ಲೆಡೆ ತಲ್ಲಣ ಮೂಡಿಸುತ್ತಿರುವ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ರಾಜ್ಯದ ಏಕೈಕ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಹ ಶನಿವಾರದಿಂದ ಮಾ. 28ರವರೆಗೆ ರಜೆ ಘೋಷಣೆ ಮಾಡಿದೆ.
ಕೋರಾನಾ ಸೋಂಕು ಭೀತಿ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ 7 ಮಹಾವಿದ್ಯಾಲಯ ಮತ್ತು 2 ಪಾಲಿಟೆಕ್ನಿಕ್‌ಗಳ ತರಗತಿಗಳನ್ನು ರದ್ದುಗೊಳಸಿ ರಜೆ ಘೋಷಣೆ ಮಾಡಿದೆ.
ಬೀದರ ಹೊರವಲಯದಲ್ಲಿ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದ್ದು, ಇದರ ವ್ಯಾಪ್ತಿಯ ಬೀದರ, ಬೆಂಗಳೂರು, ಶಿವಮೊಗ್ಗ, ಹಾಸನ ಮತ್ತು ಗದಗನ ಪಶು ಮಹಾವಿದ್ಯಾಲಯಗಳು, ಕಲ್ಬುರ್ಗಿಯ ಹೈನು ವಿಜ್ಞಾನ ಮಹಾವಿದ್ಯಾಲಯ ಮತ್ತು ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯ ಹಾಗೂ ಎರಡು ಪಾಲಿಟೆಕ್ನಿಕ್ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಉದಯವಾಣಿ ಜತೆಗೆ ಮಾತನಾಡಿದ ಕುಲಪತಿ ಡಾ. ಎಚ್.ಡಿ ನಾರಾಯಣಸ್ವಾಮಿ, ಕೊರೊನಾ ಸೋಂಕು ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಪಶು ವಿವಿಯ ಎಲ್ಲ ಮಹಾವಿದ್ಯಾಲಯ ಮತ್ತು ಪಾಲಿಟೆಕ್ನಿಕ್‌ಗಳಿಗೆ ರಜೆ ನೀಡಲು ಆದೇಶಿಸಲಾಗಿದೆ. ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಊರುಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆಯನ್ನು ಸಹ ಮುಂದೂಡಲಾಗಿದೆ. ಸರ್ಕಾರದ ನಿರ್ದೇಶನ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.