Advertisement
ಕೊರೋನಾ… ಕೊರೋನಾ… ಕೊರೋನಾ… ಕಳೆದ ಎರಡು ತಿಂಗಳಿನಿಂದ ಜಗತ್ತಿನ ಎಲ್ಲೆಡೆ ಅತಿ ಹೆಚ್ಚು ಪ್ರಚಲಿತದಲ್ಲಿರುವ ಹೆಸರಿದು. ಅದೆಷ್ಟೋ ಮಂದಿ ಈ ಮಹಾಮಾರಿಗೆ ಈಗಾಗಲೇ ಬಲಿಯಾಗಿದ್ದರೆ, ಲೆಕ್ಕವಿಲ್ಲದಷ್ಟು ಮಂದಿ ತಮ್ಮ ಬದುಕನ್ನೇ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಸ್ಟಾಕ್ ಮಾರ್ಕೇಟ್‌ನಿಂದ ಹಿಡಿದು ಹಳ್ಳಿಯ ಸಂತೆ ಮಾರ್ಕೇಟ್‌ವರೆಗೆ ಬಹುತೇಕ ಎಲ್ಲ ಉದ್ಯಮಗಳೂ ಕೊರೋನಾ ಎಫೆಕ್ಟ್ಗೆ ತತ್ತರಿಸಿದೆ ಅನ್ನೋದು ಆರ್ಥಿಕ ತಜ್ಞರು, ಉದ್ಯಮಿಗಳ ಮಾತು. ಇನ್ನು ಚಿತ್ರರಂಗ ಕೂಡ ಕೊರೋನಾ ಹೊಡೆತದಿಂದ ಹೊರಗಿಲ್ಲ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕನ್ನಡ ಚಿತ್ರರಂಗದ ಮೇಲೆ ಕೂಡ ಕೊರೋನಾ ಒಂದಷ್ಟು ಪರಿಣಾಮವನ್ನು ಉಂಟು ಮಾಡುತ್ತಿದೆ.
Related Articles
Advertisement
ಕಲೆಕ್ಷನ್‌ನಲ್ಲಿ ಇಳಿಕೆಸಾಮಾನ್ಯವಾಗಿ ಮಾರ್ಚ್ ತಿಂಗಳು ಬಂತೆಂದರೆ, ಬಜೆಟ್, ಮಕ್ಕಳ ಪರೀಕ್ಷೆ, ಬೇಸಿಗೆ ಆರಂಭ ಹೀಗೆ ಹಲವು ಕಾರಣಗಳಿಂದ ಬಿಡುಗಡೆಗೆ ಸಿದ್ಧವಿದ್ದರೂ, ಅನೇಕ ನಿರ್ಮಾಪಕರು, ವಿತರಕರು ತಮ್ಮ ಚಿತ್ರಗಳನ್ನು ತೆರೆಗೆ ತರಲು ಹಿಂದೇಟು ಹಾಕುತ್ತಿರುತ್ತಾರೆ. ಈ ಬಾರಿ ಆ ಎಲ್ಲ ಕಾರಣಗಳಿಗೆ ಸೇರಿಕೊಂಡಿರುವ ಮತ್ತೂಂದು ಬಲವಾದ ಕಾರಣ ಕೊರೋನಾ ವೈರಸ್! ಸದ್ಯ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೋನಾ ವೈರಸ್ ಭೀತಿ ಜೋರಾಗಿರುವುದರಿಂದ, ಇಂಥ ಸಮಯದಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಿದರೆ ಯಾರು ಥಿಯೇಟರ್‌ಗೆ ಬರುತ್ತಾರೆ? ಅನ್ನೋದು ಗಾಂಧಿನಗರದ ಅನೇಕ ನಿರ್ಮಾಪಕರು ಮತ್ತು ವಿತರಕರ ಪ್ರಶ್ನೆ. ಅದರಲ್ಲೂ ಮಾರ್ಚ್ ಮೊದಲ ವಾರದಿಂದ ಕನ್ನಡ, ತಮಿಳು, ತೆಲುಗು, ಹಿಂದಿ ಹೀಗೆ ರಾಜ್ಯಾದ್ಯಂತ ಬಿಡುಗಡೆಯಾಗಿರುವ ಮತ್ತು ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಬಹುತೇಕ ಎಲ್ಲ ಚಿತ್ರಗಳ ಗಳಿಕೆಯಲ್ಲೂ ಶೇಕಡಾ 30ರಿಂದ 40ರಷ್ಟು ಇಳಿಕೆಯಾಗಿದೆ. ಈ ಇಳಿಕೆ ನೇರವಾಗಿ ಕೊರೋನಾದಿಂದಲೇ ಆಗಿದೆ ಎಂದು ಹೇಳಲಾಗದಿದ್ದರೂ, ಇಳಿಕೆಯಲ್ಲಿ ಕೊರೋನಾದ ಪಾಲೂ ಇದ್ದೇ ಇದೆ ಎನ್ನುತ್ತಾರೆ ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರದ ಮಾಲೀಕರೊಬ್ಬರು. ಸದ್ಯದ ಮಟ್ಟಿಗೆ ಹೇಳುವುದಾದರೆ, ಇನ್ನೂ ಅನಿರ್ಧಿಷ್ಟವಧಿವರೆಗೆ ಇದೇ ಲಕ್ಷಣ ಮುಂದುವರೆಯಬಹುದು ಅನ್ನೋದು ಚಿತ್ರರಂಗದ ಹಲವು ಪರಿಣಿತರ ಮಾತು. ಚಿಂತೆಯಲ್ಲಿ ಚಿತ್ರರಂಗ
ಇನ್ನು ಕಳೆದ ಜನವರಿಯಿಂದ ಮಾರ್ಚ್ ಮೊದಲ ವಾರದವರೆಗೆ ಸೆನ್ಸಾರ್ ಆಗಿರುವ ಆದರೆ ಇನ್ನೂ ಬಿಡುಗಡೆಯಾಗದ ಚಿತ್ರಗಳ ಸಂಖ್ಯೆ ಸುಮಾರು 45ಕ್ಕೂ ಹೆಚ್ಚಿದೆ. ಇದರ ಜೊತೆ ಕಳೆದ ವರ್ಷ ಸೆನ್ಸಾರ್ ಆಗಿರುವ ಇನ್ನೂ ಬಿಡುಗಡೆಯ ಭಾಗ್ಯ ಕಾಣದ ಚಿತ್ರಗಳ ಸಂಖ್ಯೆಯನ್ನೂ ಸೇರಿಸಿದರೆ ಒಟ್ಟು ಸುಮಾರು 130ರ ಗಡಿ ದಾಟುತ್ತದೆ. ಮತ್ತೂಂದೆಡೆ, ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಗೆ ಸಿದ್ಧವಿರುವಾಗ ಥಿಯೇಟರ್‌ಗಳು ಸಿಗೋದೆ ಕಷ್ಟ. ಹಾಗಾಗಿ ಆಗಿದ್ದು ಆಗಲಿ, ಥಿಯೇಟರ್ ಸಿಕ್ಕಾಗ ಚಿತ್ರವನ್ನು ಬಿಡುಗಡೆ ಮಾಡಿ ಕೈ ತೊಳೆದುಕೊಳ್ಳುವುದು ಒಳ್ಳೆಯದು ಅನ್ನೋದು ಇನ್ನೂ ಕೆಲವು ನಿರ್ಮಾಪಕರು, ವಿತರಕರ ಯೋಚನೆ. ಇವುಗಳ ನಡುವೆ ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕೆ? ಬೇಡವೇ? ಎಂಬ ಚಿಂತೆಯಲ್ಲೇ ಹಲವು ನಿರ್ದೇಶಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇನ್‌ಡೋರ್ ಶೂಟಿಂಗ್‌ಗೆ ಬೇಡಿಕೆ
ಇದು ಬಿಡುಗಡೆಗೆ ಸಂಬಂಧಿಸಿದ ಕಥೆಯಾದರೆ, ಇನ್ನು ಶೂಟಿಂಗ್ ಹಂತದಲ್ಲಿರುವ ಚಿತ್ರಗಳದ್ದು ಬೇರೆಯದೇ ಕಥೆ. ಈಗಾಗಲೇ ರಾಜ್ಯದೊಳಗೆ, ದೇಶದ ವಿವಿಧೆಡೆ ಬಹುತೇಕ ಭಾಗ ಚಿತ್ರೀಕರಣಗೊಳಿಸಿ, ವಿದೇಶದಲ್ಲಿ ಚಿತ್ರದ ಪ್ರಮುಖ ದೃಶ್ಯಗಳು, ಹಾಡುಗಳನ್ನು ಚಿತ್ರೀಕರಿಸಬೇಕೆಂದು ಪ್ಲಾನ್ ಹಾಕಿಕೊಂಡ ಚಿತ್ರಗಳು ಈಗ ವಿದೇಶಕ್ಕೆ ಹಾರಬೇಕೋ, ಇನ್ನೂ ಸ್ವಲ್ಪ ಸಮಯ ಕಾಯಬೇಕೋ ಅಥವಾ ದೇಶದೊಳಕ್ಕೇ ಅದಕ್ಕೆ ತಕ್ಕಂಥ ಲೊಕೇಶನ್‌ಗಳನ್ನು ಹುಡುಕಿ ಚಿತ್ರೀಕರಣ ಕಂಪ್ಲೀಟ್ ಮಾಡಬೇಕೋ ಎನ್ನುವ ಗೊಂದಲದಲ್ಲಿದೆ. ಈಗಾಗಲೇ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ’, ದರ್ಶನ್ ಅಭಿನಯದ “ರಾಬರ್ಟ್’ ಮೊದಲಾದ ಸ್ಟಾರ್ ಚಿತ್ರಗಳು ಮೊದಲು ತಾವು ಅಂದುಕೊಂಡಂತೆ ವಿದೇಶದಲ್ಲಿ ಕೆಲ ದೃಶ್ಯಗಳನ್ನು ಚಿತ್ರೀಕರಿಸಲು ಪ್ಲಾನ್ ಹಾಕಿಕೊಂಡಿದ್ದವು. ಆದರೆ ಕೊರೋನಾ ಫೋಭಿಯಾ ಈಗ ಅನೇಕ ಚಿತ್ರತಂಡಗಳಿಗೆ ವಿದೇಶಕ್ಕೆ ಹಾರಬೇಕೋ, ಬೇಡವೋ ಎಂಬ ಯೋಚನೆಯಲ್ಲಿ ಮುಗುಳುವಂತೆ ಮಾಡಿದೆ. ವಿದೇಶಕ್ಕೆ ಹಾರಾಲು ಸಿದ್ಧತೆ ಮಾಡಿಕೊಂಡಿದ್ದ ಕೆಲವು ಚಿತ್ರತಂಡಗಳು ಚಿತ್ರೀಕರಣ ಪ್ಲಾನ್‌ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುತ್ತಿದ್ದು, ಸೆಟ್‌ಗಳು, ಸ್ಟುಡಿಯೋ, ಗ್ರೀನ್ ಮ್ಯಾಟ್ ಹೀಗೆ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಸ್ಥಳೀಯವಾಗಿ ಲಭ್ಯವಿರುವ ಲೊಕೇಶನ್‌ಗಳಲ್ಲೇ ಚಿತ್ರೀಕರಣ ಮುಗಿಸುವ ಯೋಚನೆಯಲ್ಲಿವೆ. ಥಿಯೇಟರ್‌ಗಳಿಗೆ ಜನ ಬರುತ್ತಿಲ್ಲ ಅಂದ್ರೆ ಅದಕ್ಕೆ ಕೊರೋನಾ ಒಂದೇ ಕಾರಣ ಎಂದು ಹೇಳಲಾಗದು. ಬೇರೆ ಕಾರಣಗಳೂ ಇರಬಹುದು. ಇನ್ನು ವಿದೇಶದಲ್ಲಿ ಶೂಟಿಂಗ್ ಮಾಡುವ ಪ್ಲಾನ್‌ನ ಕೆಲವರು ಕೈ ಬಿಟ್ಟಿದ್ದಾರೆ ಅನ್ನೋದನ್ನ ಹೊರತುಪಡಿಸಿದರೆ, ನಮ್ಮ ಗಮನಕ್ಕೆ ಬಂದಂತೆ ನಮ್ಮಲ್ಲಿ ಎಲ್ಲ ಸಿನಿಮಾಗಳ ಶೂಟಿಂಗ್ ಸರಾಗವಾಗಿ ನಡೆಯುತ್ತಿದೆ. ಒಟ್ಟಿನಲ್ಲಿ ಸಣ್ಣ ಮಟ್ಟಿಗೆ ಕೊರೋನಾ ಭಯವಂತೂ ಇರುವುದು ನಿಜ.
ಜೈರಾಜ್, ಕರ್ನಾಟಕ ಚಲನಚಿತ್ರ , ವಾಣಿಜ್ಯ ಮಂಡಳಿ ಅಧ್ಯಕ್ಷ. ಇತ್ತೀಚೆಗಷ್ಟೆ ಹೈದರಾಬಾದ್‌ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿದ್ದೇನೆ. ಅಲ್ಲಿ ಸೆಟ್‌ನಲ್ಲಿ ಎಲ್ಲರೂ ಮಾಸ್ಕ್ ಹಾಕಿಕೊಂಡು, ಮುನ್ನೆಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದರು. ಇದರ ನಡುವೆ ನಾನು ನನ್ನ ಫ್ರೆಂಡ್ಸ್ ಆ್ಯಂಡ್ ಫ್ಯಾಮಿಲಿ ಜೊತೆಗೆ ಲಂಡನ್ ಮತ್ತು ಭೂತಾನ್‌ಗೆ ಹೋಗುವ ಪ್ಲಾನ್ ಮಾಡಿಕೊಂಡಿದ್ದೆ. ವೀಸಾ ಕೂಡ ಸಿಕ್ಕಿದೆ. ಆದ್ರೆ ಕೊರೋನಾ ಭಯದಿಂದ ಈಗ ಟ್ರಿಪ್ ಪೋಸ್ಟ್ ಪೋನ್ ಮಾಡಿಕೊಂಡಿದ್ದೇನೆ. ಏನೇ ಆದ್ರೂ ನಮ್ಮ ಜಾಗೃತಿಯಲ್ಲಿ ನಾವಿರುವುದು ಒಳ್ಳೆಯದು.
ಹರಿಪ್ರಿಯಾ, ನಟಿ ಜಿ.ಎಸ್.ಕಾರ್ತಿಕ ಸುಧನ್