Advertisement

ಕೊರೊನಾ ಎಫೆಕ್ಟ್: ಕನ್ನಡ ಚಿತ್ರರಂಗಕ್ಕೆ ವಾರಕ್ಕೆ ಅಂದಾಜು 70 ಕೋಟಿ ನಷ್ಟ

10:06 AM Mar 18, 2020 | Lakshmi GovindaRaj |

ಮಹಾಮಾರಿ ಕೊರೊನಾ ಹೊಡೆತಕ್ಕೆ ಜಗತ್ತಿನ ಅನೇಕ ದೇಶಗಳು ತತ್ತರಿಸಿ ಹೋಗುತ್ತಿವೆ. ಇನ್ನು ಭಾರತದ ಮೇಲೂ ಕೊರೊನಾ ಕರಿಛಾಯೆ ದಟ್ಟವಾಗಿದ್ದು, ಕರ್ನಾಟಕದಲ್ಲೇ ಕೊರೊನಾ ಮೊದಲ ಬಲಿ ಪಡೆದುಕೊಂಡಿದೆ. ಹೀಗಾಗಿ ಆರಂಭದಲ್ಲಿಯೇ ಎಚ್ಚೆತ್ತುಕೊಂಡಿರುವ ಸರ್ಕಾರ, ಸದ್ಯ ಶಾಲಾ-ಕಾಲೇಜು, ಶಾಪಿಂಗ್‌ ಮಾಲ್‌ಗ‌ಳು, ಮಾರ್ಕೇಟ್‌ಗಳಿಂದ ಹಿಡಿದು ಸಿನಿಮಾ ಥಿಯೇಟರ್‌ವರೆಗೆ ಬಹುತೇಕ ಸಾರ್ವಜನಿಕ, ಜನಸಂದಣಿ ಇರುವ ಸ್ಥಳಗಳನ್ನು ಮುಚ್ಚುವಂತೆ ಆದೇಶಿಸಿದೆ.

Advertisement

ಇನ್ನು ಇದರ ಪರಿಣಾಮ ಇತರ ರಂಗಗಳಂತೆ ಚಿತ್ರರಂಗಕ್ಕೂ ಬಲವಾಗಿಯೇ ತಟ್ಟಿದೆ. ಕಳೆದ ಶನಿವಾರದಿಂದ ರಾಜ್ಯದಾದ್ಯಂತ ಚಿತ್ರಮಂದಿರಗಳು ಬಂದ್‌ ಆಗಿದ್ದು, ಸೋಮವಾರದಿಂದ ಬಹುತೇಕ ಚಿತ್ರಗಳ ಚಿತ್ರೀಕರಣ ಕೂಡ ಬಂದ್‌ ಆಗಿದೆ. ಈಗಾಗಲೇ ಆಲ್‌ ಇಂಡಿಯಾ ಫಿಲಂ ಫೆಡರೇಶನ್‌ (ಎ.ಐ.ಎಫ್.ಎಫ್) ಮಾರ್ಚ್‌ 31ರವರೆಗೆ ಚಿತ್ರೀಕರಣ ನಡೆಸದಂತೆ ತೀರ್ಮಾನ ಕೈಗೊಂಡಿರುವುದರಿಂದ, ಈ ತಿಂಗಳ ಕೊನೆಗೆಯವರೆಗೆ ಬಹುತೇಕ ಚಿತ್ರಗಳ ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿದೆ.

ಇನ್ನು ಚಿತ್ರಗಳ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಾದ ಡಬ್ಬಿಂಗ್‌, ರಿ-ರೆಕಾರ್ಡಿಂಗ್‌, ಎಡಿಟಿಂಗ್‌, ಸಿ.ಜಿ, ಕಲರಿಂಗ್‌, ಡಿ.ಐ ಮತ್ತಿತರ ಕೆಲಸಗಳಿಗೂ ಕೂಡ ಅಗತ್ಯ ಕಲಾವಿದರು, ತಂತ್ರಜ್ಞರು ಬರುತ್ತಿಲ್ಲ. ಹೀಗಾಗಿ ಬಹುತೇಕ ಸ್ಟುಡಿಯೋಗಳಲ್ಲಿ ನಡೆಯುತ್ತಿದ್ದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಕೂಡ ನಿಲ್ಲುವ ಹಂತಕ್ಕೆ ಬಂದಿವೆ. ಆರಂಭದ ಮೂರು-ನಾಲ್ಕು ದಿನಗಳಲ್ಲಿಯೇ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ಚಿತ್ರೋದ್ಯಮವನ್ನೇ ನಂಬಿಕೊಂಡಿರುವ ಸಾವಿರಾರು ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಇದೇ ಪರಿಸ್ಥಿತಿ ಇನ್ನೂ ಕೆಲವು ದಿನಗಳ ಮುಂದುವರೆದರೆ ಕಥೆ ಏನು ಎಂಬ ಚಿಂತೆ ಎಲ್ಲರನ್ನೂ ಕಾಣುತ್ತಿದೆ. ಕೊರೊನಾ ಭೀತಿಯಿಂದಾಗಿ ರಾಜ್ಯದಲ್ಲಿರುವ ಎಲ್ಲಾ ಚಿತ್ರಮಂದಿರಗಳು ಹಾಗು ಮಲ್ಟಿಪ್ಲೆಕ್ಸ್‌ ಪರದೆಗಳನ್ನು ಒಂದು ವಾರ ಬಂದ್‌ ಮಾಡಿದ ಹಿನ್ನೆಲೆಯಲ್ಲಿ ಚಿತ್ರರಂಗ ಅಂದಾಜು 70 ಕೋಟಿ ರುಪಾಯಿ ನಷ್ಟ ಅನುಭವಿಸುತ್ತಿದೆ. ಹೌದು, ಇದು ಅಂದಾಜು ಲೆಕ್ಕ. ಕೊರೊನಾ ತಂದ ಆಪತ್ತು ಇದು. ರಾಜ್ಯದಲ್ಲಿ ಸುಮಾರು 575 ಸಿಂಗಲ್‌ ಥಿಯೇಟರ್‌ಗಳಿವೆ. 240 ಪ್ಲಸ್‌ ಮಲ್ಟಿಪ್ಲೆಕ್ಸ್‌ ಪರದೆಗಳಿವೆ.

ಇವೆಲ್ಲದರಿಂದ ದಿನವೊಂದಕ್ಕೆ ಕಡಿಮೆ ಅಂದರೂ ಅಂದಾಜು 10-12 ಕೋಟಿ ರುಪಾಯಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ, ಇದೀಗ ಒಂದು ವಾರದವರೆಗೆ ಬಂದ್‌ ಮಾಡಿರುವ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಸುಮಾರು 70 ಕೋಟಿ ರುಪಾಯಿ ಹೊಡೆತ ಬಿದ್ದಿದೆ. ಇನ್ನು, ಬೆರಳೆಣಿಕೆ ಸ್ಥಳಗಳಲ್ಲಿ ಮಾತ್ರ ಚಿತ್ರೀಕರಣ ನಡೆಯುತ್ತಿದೆ ಎಂಬುದು ಬಿಟ್ಟರೆ, ಬೇರೆಲ್ಲೂ ಚಿತ್ರೀಕರಣ ನಡೆಯುತ್ತಿಲ್ಲ. ಆದರೂ, ಚಿತ್ರರಂಗ ಈ ಹೊಡೆತದಿಂದ ಚೇತರಿಸಿಕೊಳ್ಳುವುದಕ್ಕೆ ಬಹಳ ಸಮಯವೇ ಬೇಕಿದೆ.

Advertisement

ರಾಜ್ಯದಲ್ಲಿ ಚಿತ್ರಮಂದಿರಗಳು ಹಾಗು ಮಲ್ಟಿಪ್ಲೆಕ್ಸ್‌ಗಳನ್ನು ಬಂದ್‌ ಮಾಡಿದ್ದರಿಂದ ಚಿತ್ರರಂಗಕ್ಕೆ ಅಂದಾಜು 70 ಕೋಟಿ ರುಪಾಯಿ ನಷ್ಟ ಆಗಲಿದೆ. ಇದರಲ್ಲಿ ಚಿತ್ರಮಂದಿರಗಳ ಮಾಲೀಕರು, ಪ್ರದರ್ಶಕರು, ವಿತರಕರು ಹಾಗು ನಿರ್ಮಾಪಕರಿಗೂ ನಷ್ಟ ಆಗಲಿದೆ. ಒಂದು ವರ್ಷಕ್ಕೆ ಚಿತ್ರರಂಗದಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸುಮಾರು 450 ಕೋಟಿ ರುಪಾಯಿ ಹೋಗುತ್ತಿತ್ತು. ಈಗ ಒಂದು ವಾರಕ್ಕೆ 70 ಕೋಟಿ ರುಪಾಯಿ ನಷ್ಟ ಅಂತಾದರೆ, ಅದರಲ್ಲಿ ಶೇ.20 ರಷ್ಟು ಕೂಡ ಸರ್ಕಾರಕ್ಕೆ ನಷ್ಟ ಎನ್ನಬಹುದು. ಇನ್ನು, ಚಿತ್ರಮಂದಿರಗಳ ಸಿಬ್ಬಂದಿ, ಕಾರ್ಮಿಕರ ವೇತನವನ್ನೂ ಸಹ ನಿಲ್ಲಿಸುವಂತಿಲ್ಲ. ಬಂದ್‌ ಮಾಡಿದೆ ಎಂಬ ಕಾರಣಕ್ಕೆ ಅವರಿಗೆ ಕೊಡುವ ವೇತನ, ಪಿಎಫ್ ಇತರೆ ಸೌಲಭ್ಯಗಳನ್ನು ಕಡಿತಗೊಳಿಸಲು ಆಗಲ್ಲ. ಹಾಗೆಯೇ, ಮಿನಿಮಮ್‌ ಪವರ್‌ ಬಿಲ್‌ ಹಾಗು ವಾಟರ್‌ ಸಪ್ಲೆ„ ಚಾರ್ಚ್‌ ಕೂಡ ಕಟ್ಟಲೇಬೇಕು. ಈ ಬಂದ್‌ನಿಂದ ಸಾಕಷ್ಟು ಸಮಸ್ಯೆಯಂತೂ ಆಗಿದೆ. ಆದರೆ, ಅನಿವಾರ್ಯ ಕೊರೊನಾ ವಿರುದ್ಧ ಎಲ್ಲರೂ ಹೋರಾಡಬೇಕಿದೆ. ಇದು ಜನರ ಹಾಗು ಪ್ರೇಕ್ಷಕರ ಹಿತದೃಷ್ಟಿಯಿಂದ ಮಾಡಲೇಬೇಕಾದ ಕೆಲಸ.
-ಕೆ.ವಿ.ಚಂದ್ರಶೇಖರ್‌, ವೀರೇಶ್‌ ಚಿತ್ರಮಂದಿರ ಮಾಲೀಕರು.

ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ, ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಭೀತಿ ಜಗತ್ತಿನ ಎಲ್ಲ ರಂಗಗಳನ್ನು ಬಾಧಿಸುತ್ತಿರುವುದರಿಂದ, ಇದಕ್ಕೆಲ್ಲ ಪರಿಸ್ಥಿಯೇ ಕಾರಣವಾಗಿದ್ದು ಯಾರನ್ನೂ ದೂಷಿಸುವಂತಿಲ್ಲ. ಸದ್ಯ ನಾವು ಮುನ್ನೆಚ್ಚರಿಕೆ ಕ್ರಮವಾಗಿ “ಫ್ಯಾಂಟಮ್‌’ ಶೂಟಿಂಗ್‌ ನಿಲ್ಲಿಸಿದ್ದೇವೆ. ಈಗಾಗಲೇ ಹೈದರಾಬಾದ್‌ನಲ್ಲಿ “ಫ್ಯಾಂಟಮ್‌’ ಶೂಟಿಂಗ್‌ಗಾಗಿ ದುಬಾರಿ ವೆಚ್ಚದಲ್ಲಿ ಸೆಟ್‌ ಕೂಡ ಹಾಕಿದ್ದೆವು. ಈಗ ಕೊರೊನಾ ಕಾರಣದಿಂದ ಅಲ್ಲಿನ ಶೂಟಿಂಗ್‌ ಕೂಡ ಮುಂದೂಡಿದ್ದೇವೆ. ಮಾ. 31ರ ನಂತರ ಮುಂದಿನ ಬಗ್ಗೆ ಯೋಚಿಸಬೇಕು. ಒಮ್ಮೆ ಕಲಾವಿದರು, ಟೆಕ್ನಿಷಿಯನ್ಸ್‌ ಡೇಟ್‌ ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್‌ ಮಾಡೋದೆ ಕಷ್ಟ. ಅಂಥದ್ರಲ್ಲಿ ಈಗ ಮತ್ತೆ ಮೊದಲಿನಿಂದ ಎಲ್ಲವನ್ನೂ ಸೆಟ್‌-ಅಪ್‌ ಮಾಡಿಕೊಂಡು ಶೂಟಿಂಗ್‌ ಮಾಡಬೇಕು. ಆದರೆ ನಮಗೆ ಶೂಟಿಂಗ್‌ ಮುಂದೂಡದೆ ಬೇರೆ ಮಾರ್ಗವಿಲ್ಲ. ಮುಂದೆ ಏನಾಗುತ್ತದೆಯೋ ನೋಡಬೇಕು. ಇನ್ನು ಕಳೆದ ಮೂರು ದಿನಗಳಿಂದ ಥಿಯೇಟರ್‌, ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಹೀಗೆ ಚಿತ್ರರಂಗದ ಎಲ್ಲ ಚಟುವಟಿಕೆಗಳು ಬಂದ್‌ ಆಗುತ್ತಿರುವುದರಿಂದ, ಈಗಲೇ ಚಿತ್ರರಂಗದ ನಷ್ಟದ ಅಂದಾಜು ನಿಖರವಾಗಿ ಹೇಳಲಾಗದು.
-ಜಾಕ್‌ ಮಂಜು, ನಿರ್ಮಾಪಕ ಮತ್ತು ವಿತರಕ

Advertisement

Udayavani is now on Telegram. Click here to join our channel and stay updated with the latest news.

Next