130 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಇಷ್ಟರ ತನಕ ಕೊರೊನಾ ಸೋಂಕಿತರ ಸಂಖ್ಯೆ ನೂರು ದಾಟಿದೆಯಷ್ಟೆ. ಹಾಗೆಂದು ಇದು ಕೊರೊನಾವನ್ನು ನಿರ್ಲಕ್ಷಿಸುವುದಕ್ಕೆ ಸಮರ್ಥನೆ ಆಗಬಾರದು. ಯಾವ ಕಾರಣಕ್ಕೂ ಅಸಡ್ಡೆ ಮಾಡಬಾರದು ಎಂಬುದಕ್ಕೆ ಇಟಲಿಯೇ ನಮಗೆ ಪಾಠವಾಗಬೇಕು.
ಕೊರೊನಾ ವೈರಸ್ ಹಾವಳಿ ನಿರೀಕ್ಷಿಸಿರುವುದಕ್ಕಿಂತಲೂ ಹೆಚ್ಚು ತೀವ್ರವಾಗಿದೆ. ಬಡ ಇರಾನ್‌ನಿಂದ ಹಿಡಿದು ಬಲಾಡ್ಯ ಅಮೆರಿಕ ತನಕ ಹೆಚ್ಚಿನೆಲ್ಲ ದೇಶಗಳು ಕೊರೊನಾದ ಹೊಡೆತಕ್ಕೆ ತತ್ತರಿಸಿವೆ. ಜಾಗತಿಕ ಆರ್ಥಿಕತೆ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಸಾರ್ಕ್ ದೇಶಗಳು ಕೊರೊನಾ ಎದುರಿಸುವ ಕಾರ್ಯತಂತ್ರ ರೂಪಿಸಲು ಸಮಾಲೋಚನೆ ನಡೆಸಿರುವುದು ಒಂದು ಸ್ವಾಗತನೀಯ ನಡೆ. ಭಾರತವೇ ಸಾರ್ಕ್ ಮುಖ್ಯಸ್ಥರ ವೀಡಿಯೊ ಕಾನ್ಫರೆನ್ಸಿಂಗ್ ಸಮಾಲೋಚನೆಯ ಮುಂದಾಳತ್ವ ವಹಿಸಿರುವುದು ನಮ್ಮ ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿ. ಅದೇ ರೀತಿ ಅಮೆರಿಕದ ಕಠಿಣ ನಿರ್ಬಂಧ ಇರುವ ಹೊರತಾಗಿಯೂ ಇರಾನ್‌ಗೆ ಹಲವು ರೀತಿಯ ಸಹಾಯವನ್ನು ಭಾರತ ಮಾಡಿದೆ. ಕೆಲ ಸಮಯದ ಹಿಂದೆ ಇರಾನ್ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ವಿರೋಧಿ ನಿಲುವು ವ್ಯಕ್ತಪಡಿಸಿತ್ತು. ಆದರೆ ಕೊರೊನಾ ನಿಯಂತ್ರಣಕ್ಕಾಗಿ ನಮ್ಮ ಸರಕಾರ ಆ ದೇಶಕ್ಕೆ ಅಗತ್ಯ ನೆರವನ್ನು ನೀಡುವ ಮೂಲಕ ಸಂಕಷ್ಟದ ಸಮಯದಲ್ಲಿ ಬೇಧಭಾವ ಸಲ್ಲದು ಎಂಬ ಸಂದೇಶವನ್ನು ರವಾನಿಸಿದೆ.
ಇಟಲಿ, ಇರಾನ್, ಅಮೆರಿಕ, ಸ್ಪೈನ್ ಸೇರಿ ಕೆಲವು ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕೊರೊನಾ ಹಾವಳಿ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದೆ ಎನ್ನಬಹುದು. 130 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಇಷ್ಟರ ತನಕ ಕೊರೊನಾ ಸೋಂಕಿತರ ಸಂಖ್ಯೆ ನೂರು ದಾಟಿದೆಯಷ್ಟೆ. ಇಬ್ಬರು ಬಲಿಯಾಗಿದ್ದರೆ. ಹಾಗೆಂದು ಇದು ಕೊರೊನಾವನ್ನು ನಿರ್ಲಕ್ಷಿಸುವುದಕ್ಕೆ ಸಮರ್ಥನೆಯಾಗಬಾರದು. ಯಾವ ಕಾರಣಕ್ಕೂ ಕೊರೊನಾವನ್ನು ಅಸಡ್ಡೆ ಮಾಡಬಾರದು ಎಂಬುದಕ್ಕೆ ಇಟಲಿಯೇ ನಮಗೆ ಪಾಠವಾಗಬೇಕು. ಅಲ್ಲಿನ ಆಡಳಿತ ಇದೊಂದು ಮಾಮೂಲು ವೈರಸ್ ಜ್ವರ, ವಯಸ್ಸಾದವರನ್ನು ಮಾತ್ರ ಪೀಡಿಸುತ್ತದೆ, ಮಾಧ್ಯಮಗಳಲ್ಲಿ ಬರುವುದೆಲ್ಲ ಅತಿರಂಜಿತ ವರದಿಗಳು ಎಂದು ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ಬರೀ ಎರಡು ವಾರದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕ ಕೂಡ ಆರಂಭದಲ್ಲಿ ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಅತ್ಯುತ್ತಮವಾದ ಸಾರ್ವಜನಿಕ ಸ್ವಾಸ್ಥ್ಯ ವ್ಯವಸ್ಥೆ ಇರುವ ಹೊರತಾಗಿಯೂ ಐವತ್ತಕ್ಕೂ ಮೇಲ್ಪಟ್ಟು ಜನರು ಸಾವಿಗೀಡಾಗುವುದನ್ನು ತಡೆಯಲು ಅಮೆರಿಕದಿಂದ ಸಾಧ್ಯವಾಗಲಿಲ್ಲ.
ನಮ್ಮ ದೇಶದಲ್ಲಿರುವ ನೂರಕ್ಕೂ ಅಧಿಕ ಕೊರೊನಾ ಸೋಂಕಿತರು ಕೊರೊನಾ ಹಾವಳಿ ಇರುವ ದೇಶದಿಂದ ಬಂದವರು ಹಾಗೂ ಹೀಗೆ ಬಂದವರ ಸಂಪರ್ಕದಲ್ಲಿದ್ದವರು. ಆದರೆ ಹೀಗೆ ಕೊರೊನಾ ಹಾವಳಿ ಇರುವ ದೇಶದಿಂದ ಬಂದವರಲ್ಲಿ ಕೆಲವರು ವೈರಸ್ ತಪಾಸಣೆಗೆ ತೋರಿಸುತ್ತಿರುವ ವಿರೋಧ ಮಾತ್ರ ಅಕ್ಷಮ್ಯ. ಹಾಗೇ ನೋಡಿದರೆ ಎರಡನೇ ಕೊರೊನಾ ಸಾವನ್ನು ಮುನ್ನೆಚ್ಚರಿಕೆ ವಹಿಸಿದರೆ ತಡೆಯಬಹುದಿತ್ತು. ಫೆ.23ರಂದು ಭಾರತಕ್ಕೆ ಬಂದ ಈ ವ್ಯಕ್ತಿ ಇದಕ್ಕೂ ಮೊದಲು ಜಪಾನ್, ಸ್ವಿಜರ್‌ಲ್ಯಾಂಡ್ ಮತ್ತು ಇಟಲಿ ದೇಶಕ್ಕೆ ಪ್ರಯಾಣಿಸಿದ್ದರು. ಆದರೆ ಎರಡು ವಾರ ಕಡ್ಡಾಯವಾಗಿ ಪ್ರತ್ಯೇಕ ವಾಸವಾಗಿರಬೇಕೆಂಬ ಸೂಚನೆಯನ್ನು ಉಲ್ಲಂ ಸಿ ಸಾರ್ವಜನಿಕ ಸಾರಿಗೆಯಲ್ಲಿ ಕಚೇರಿಗೆ ಹೋಗಿದ್ದಾರೆ. ಈ ಮೂಲಕ 813 ಮಂದಿಯ ಸಂಪರ್ಕಕ್ಕೆ ಬಂದಿದ್ದಾರೆ. ಈ ಪೈಕಿ 707 ಮಂದಿ ಅವರ ಸಹೋದ್ಯೋಗಿಗಳೇ. ಇವರು ತಮ್ಮದಲ್ಲದ ತಪ್ಪಿಗೆ ವೈದ್ಯಕೀಯ ತಪಾಸಣೆಗೆ ಗುರಿಯಾಗಬೇಕಾಗಿದೆ. ಇಂಥ ಇನ್ನೂ ಹಲವು ಪ್ರಕರಣಗಳಿವೆ.ವಿದೇಶ ಪ್ರಯಾಣದ ಮಾಹಿತಿಯನ್ನು ರಹಸ್ಯವಾಗಿಟ್ಟಿರುವುದು, ಆಸ್ಪತ್ರೆಗೆ ದಾಖಲಾದವರು ತಪ್ಪಿಸಿಕೊಂಡು ಹೋಗಿರುವುದು, ರೋಗಿಗಳ ಜತೆಗಿರುವವರು ಮುನ್ನೆಚ್ಚರಿಕೆ ವಹಿಸಿದಿರುವಂಥ ಹಲವು ಪ್ರಕರಣಗಳು ವರದಿಯಾಗಿವೆ. ವೈರಸ್ ಕ್ಷಿಪ್ರವಾಗಿ ಹರಡಲು ಇಂಥ ಅಸಡ್ಡೆಯೂ ಕಾರಣವಾಗಿದ್ದು, ಇದು ಅಕ್ಷಮ್ಯ. ಕೊರೊನಾ ವ್ಯಾಪಿಸುವುದನ್ನು ತಡೆಯಲು ಸರಕಾರ ಕೈಗೊಂಡಿರುವ ಕ್ರಮಗಳಿಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಈ ವಿಚಾರದಲ್ಲಿ ಉದ್ದಟತನದ ವರ್ತನೆ ತೋರಿಸಿದರೆ ಕೊನೆಗೆ ನಾವೇ ಪಶ್ಚಾತ್ತಾಪ ಪಡಬೇಕಾಗಬಹುದು.
ಲಾಕ್‌ಡೌನ್, ಶಟ್‌ಡೌನ್‌ಗಳೆಲ್ಲ ಕೊರೊನಾ ಹರಡುವುದನ್ನು ತಡೆಯಲು ಕೈಗೊಂಡಿರುವ ತಾತ್ಕಾಲಿಕ ಕ್ರಮಗಳು. ದೀರ್ಘ ಕಾಲ ಈ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದು ಅಸಾಧ್ಯ. ನಮ್ಮ ಸಾರ್ವಜನಿಕ ಆರೋಗ್ಯ ಸೇವೆಯನ್ನು ಇನ್ನಷ್ಟು ಸಶಕ್ತಗೊಳಿಸುವುದು, ವೈರಾಣು ಪತ್ತೆ ಮತ್ತು ಸಂಶೋಧನಾ ಕೇಂದ್ರಗಳನ್ನು ಸುಸಜ್ಜಿತ ಸ್ಥಿತಿಯಲ್ಲಿಟ್ಟುಕೊಳ್ಳುವುದು, ಸಾಕಷ್ಟು ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗಳನ್ನು ನೇಮಿಸಿಕೊಳ್ಳುವುದು, ಔಷಧ, ಲಸಿಕೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂಥ ಕ್ರಮಗಳು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಉಪಯೋಗಕ್ಕೆ ಬರುವ ಶಾಶ್ವತವಾದ ಕ್ರಮಗಳು.