Advertisement

ಕೊರೊನಾ: ವಿಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚೆ

11:29 PM Jan 31, 2020 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಆತಂಕ ಮೂಡಿಸಿರುವ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಅಧಿಕಾರಿಗಳು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಜತೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕೊರೊನಾ ವೈರಸ್‌ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿ ಕೆಲವು ನಿರ್ಣಯ ಕೈಗೊಳ್ಳಲಾಯಿತು.

Advertisement

ಬೆಂಗಳೂರಿನ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಈಗಾಗಲೇ 15 ಹಾಸಿಗೆಗಳು ಹಾಗೂ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಸುಸಜ್ಜಿತ ವಾರ್ಡ್‌ ತೆರೆಯಲಾಗಿದೆ. ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ 5 ಹಾಸಿಗೆಯುಳ್ಳ ವಿಶೇಷ ವಾರ್ಡ್‌ ತೆರೆಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಏನೇನು ನಿರ್ಣಯ?
-ವಿಮಾನ ನಿಲ್ದಾಣಗಳಲ್ಲಿ ಚೀನಾದಿಂದ ಬರುವ ಪ್ರಯಾಣಿಕರ ತಪಾಸಣೆಯನ್ನು ಇನ್ನೂ ಉತ್ತಮಗೊಳಿ ಸುವುದು ಹಾಗೂ ಮಂಗಳೂರು, ಕಾರವಾರ ಬಂದರುಗಳಲ್ಲೂ ಪ್ರಯಾಣಿಕರ ತಪಾಸಣೆ ಕೈಗೊಳ್ಳುವುದು.

-ಚೀನಾದ ವುಹಾನ್‌ ನಗರದಿಂದ ಜ.15ರಿಂದ ಬಂದಂಥ ಎಲ್ಲ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಕ್ರಮ ಕೈಗೊಳ್ಳುವುದು. ಸಂಶಯಾಸ್ಪದ ಪ್ರಕರಣಗಳಲ್ಲಿ ಪರೀಕ್ಷೆಗೆ ಒಳಪಡಿಸಿ ನಿಯಮಾನುಸಾರ 28 ದಿನಗಳವರೆಗೂ ನಿಗಾ ವಹಿಸುವುದು.

-ಮನೆ ಹಾಗೂ ಸಮುದಾಯದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸುವುದು.

Advertisement

ತೀವ್ರ ನಿಗಾದಲ್ಲಿ 21 ಮಂದಿ: ಜ.30ರ ವರದಿಯಂತೆ ರಾಜ್ಯದಲ್ಲಿ 21 ಪ್ರಯಾಣಿಕರು ತೀವ್ರ ನಿಗಾದಲ್ಲಿದ್ದು ಸಂಶಯಾಸ್ಪದ 10 ಮಂದಿಗೆ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 11 ಮಂದಿಗೆ ಮನೆಯಲ್ಲೇ ಪ್ರತ್ಯೇಕಿಸಿ ನಿಗಾ ವಹಿಸಲಾಗಿದೆ.

13 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಅದರಲ್ಲಿ 4 ಮಾದರಿಗಳು ನೋವಲ್‌ ಕರೋನಾ ವೈರಸ್‌ ನೆಗೆಟಿವ್‌ ವರದಿ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜ.31 ರಂದು ಹುವಾನ್‌ನಿಂದ ಬಂದಿರುವ 20 ಮಂದಿ ಪ್ರಯಾಣಿಕರ ಸ್ಯಾಂಪಲ್ಸ್‌ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next