Advertisement

ಪ್ರವಾಸೋದ್ಯಮದ ಮೇಲೆ ಕೊರೊನಾ ಕರಿಛಾಯೆ

11:58 PM Mar 09, 2020 | Sriram |

ಉಡುಪಿ: ಜಾಗತಿಕವಾಗಿ ತಲ್ಲಣ ಸೃಷ್ಟಿಸುತ್ತಿರುವ ಕೊರೊನಾ ಸೋಂಕು ಪ್ರವಾಸೋದ್ಯಮಕ್ಕೆ ಪ್ರಬಲ ಹೊಡೆತ ನೀಡುತ್ತಿದೆ. ಕರಾವಳಿಯಿಂದ ಉತ್ತರ ಭಾರತದ ತೀರ್ಥ ಕ್ಷೇತ್ರಗಳು, ಪ್ರವಾಸಿ ತಾಣಗಳಿಗೆ ಹೋಗುವವರು ಮತ್ತು ಅತ್ತಲಿಂದ ಇತ್ತ ಬರುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಮೆಕ್ಕಾ, ಮದೀನಾ ಯಾತ್ರೆಯನ್ನು ನಿಲ್ಲಿಸಿದ ಪರಿಣಾಮ ಉಡುಪಿ, ದ.ಕ., ಕಾಸರಗೋಡು ಜಿಲ್ಲೆಗಳಿಂದ ಸಾವಿರಾರು ಜನರ ಪ್ರವಾಸ ರದ್ದಾಗಿದೆ. ಕೊಚ್ಚಿಯ ಒಬ್ಬರು ಪ್ರವಾಸಿ ಏಜೆಂಟರು ಉಮ್ರಾ ಯಾತ್ರೆಗೆಂದು ಆರು ವಿಮಾನಗಳ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಿದ್ದರು. ಈಗ ಪ್ರವಾಸವೇ ರದ್ದಾದ ಕಾರಣ ಅವರು ಕೈಸುಟ್ಟುಕೊಂಡಿದ್ದಾರೆ.

Advertisement

ಸಿಂಗಾಪುರದಲ್ಲಿ ವೇತನರಹಿತ ರಜೆ
ಸಿಂಗಾಪುರದಲ್ಲಿ ಮೂರು ತಿಂಗಳು ವೇತನರಹಿತ ರಜೆ ಘೋಷಿಸಿರುವುದರಿಂದ ಅಲ್ಲಿಯವರು ಭಾರತ ಮೊದಲಾದ ರಾಷ್ಟ್ರಗಳಿಗೆ ಪ್ರವಾಸಕ್ಕಾಗಿ ಬರುವುದೂ ತಡೆಯಾಗಿದೆ. ಎಮಿರೇಟ್ಸ್‌ ಏರ್‌ಲೈನ್‌ ಸಿಬಂದಿಗೆ ರಜೆ ಸಾರಿದ್ದು, ಅಲ್ಲಿನವರು ಇಲ್ಲಿಗೆ ಬರುವಂತಿಲ್ಲ. ಕಣ್ಣೂರು ವಿಮಾನ ನಿಲ್ದಾಣದಿಂದ ಮಧ್ಯಪ್ರಾಚ್ಯ ದೇಶಗಳಿಗೆ ಹೋಗುವ ಇಂಡಿಗೋ, ಏರ್‌ ಇಂಡಿಯ ಎಕ್ಸ್‌ಪ್ರೆಸ್‌, ಗೋಏರ್‌ ವಿಮಾನಗಳು, ಕೊಚ್ಚಿಯಿಂದ ಸೌದಿ, ಒಮನ್‌, ಕತಾರ್‌ಗೆ ಹೋಗುವ ವಿಮಾನಗಳು ಪ್ರವಾಸಿಗರಿಲ್ಲದೆ ಸೊರಗುತ್ತಿವೆ. ದೇಶದೊಳಗೂ ಜನರು ಹೋಗಲು ಹಿಂಜರಿಯುತ್ತಿದ್ದಾರೆ ಎನ್ನುತ್ತಾರೆ ಪ್ರವಾಸಿ ಸಂಘಟಕ ನಾಗರಾಜ ಹೆಬ್ಟಾರ್‌.

“ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದು ಕೊರೊನಾ ಕಾರಣದಿಂದಲ್ಲ. ಈಗ ಪಿಯುಸಿ ಪರೀಕ್ಷಾ ಕಾಲವಾದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆ. ಪ್ರತಿ ವರ್ಷವೂ ಈ ಸೀಸನ್‌ನಲ್ಲಿ ಇದೇ ರೀತಿ ಆಗುತ್ತದೆ. ತುಲನೆ ಮಾಡಿದರೆ ತುಸು ಉತ್ತಮವೇ ಇದೆ’ ಎಂದು ಶ್ರೀಕೃಷ್ಣ ಮಠ, ಅದಮಾರು ಮಠದ ಅಧಿಕಾರಿ ಗೋವಿಂದರಾಜ್‌ ಹೇಳುತ್ತಾರೆ.

ಅಮರನಾಥ ಯಾತ್ರೆಯ ಮೇಲೂ ಕೊರೊನಾ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಅಲ್ಲಿಗೆ ತೆರಳುವವರ ವೈದ್ಯಕೀಯ ತಪಾಸಣೆಯಾಗಬೇಕೆಂಬ ನಿಯಮವಿದ್ದು, ಇನ್ನಷ್ಟು ಬಿಗಿಯಾಗುವ ಸಂಭವವಿದೆ. ಪರಿಸ್ಥಿತಿ ವಿಕೋಪಕ್ಕೆ ಹೋದರೆ ಇದನ್ನೂ ರದ್ದುಪಡಿಸಲೂಬಹುದು. ಅನಂತರ ಬರುವ ಮಾನಸಯಾತ್ರೆಗೆ ಚೀನದ ಮೂಲಕವೇ ಹೋಗಬೇಕಾಗಿರುವುದರಿಂದ ಇದು ರದ್ದಾಗುವುದು ಖಚಿತವೆನಿಸಿದೆ.

ಚೀನದ ಉತ್ಪನ್ನಗಳು ವಿಶೇಷವಾಗಿ, ಇಲೆಕ್ಟ್ರಾನಿಕ್‌ ವಸ್ತುಗಳು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದು, ಇವುಗಳು ಖಾಲಿ ಯಾದ ಮೇಲೆ ಈ ಸಾಮಗ್ರಿಗಳು ದೊರೆಯು ವುದಿಲ್ಲ. ಇದು ಕ್ರಮೇಣ ಮೊಬೈಲ್‌ ಶಾಪ್‌ನಂತಹ ಸಣ್ಣ ಸಣ್ಣ ವ್ಯಾಪಾರಗಳ ಮೇಲೂ ಪರಿಣಾಮ ಬೀರಲಿದೆ.

Advertisement

ದೃಶ್ಯಮಾಧ್ಯಮ ವರದಿಗೆ ಹೆದರಿ ಪ್ರವಾಸ ರದ್ದು
ಮಲೇಶ್ಯಾ, ಥಾçಲಂಡ್‌, ಫಿಲಿಪ್ಪೀನ್ಸ್‌, ಹಾಂಕಾಂಗ್‌, ಜಪಾನ್‌, ದಕ್ಷಿಣ ಕೊರಿಯಾ ದೇಶಗಳಲ್ಲಿ ಕೊರೊನಾ ಇರುವುದರಿಂದ ಅಲ್ಲಿಗೆ ಹೋಗಿ ಬಂದರೆ 15 ದಿನಗಳ ಕಾಲ ಗೃಹಬಂಧನದ ರೀತಿಯಲ್ಲಿದ್ದು ಪರಿವೀಕ್ಷಣೆ ಮಾಡಬೇಕಾಗುತ್ತದೆ. ಚೀನಕ್ಕೆ ಹೋಗಲು ನಿರ್ಬಂಧವಿದೆ. ಈ ಹಿಂದೆ ಸಿಂಗಾಪುರ, ಮಲೇಶಿಯಾ, ಜಪಾನ್‌, ಯೂರೋಪ್‌ ರಾಷ್ಟ್ರಗಳಿಗೆ ಪ್ರವಾಸಕ್ಕಾಗಿ ಟಿಕೆಟ್‌ ಕಾಯ್ದಿರಿಸಿದ ಪ್ರವಾಸಿಗರು ವಿಶೇಷವಾಗಿ ದೃಶ್ಯಮಾದ್ಯಮಗಳ ವರದಿಗೆ ಹೆದರಿ ಪ್ರವಾಸವನ್ನು ರದ್ದುಗೊಳಿಸುತ್ತಿದ್ದಾರೆ.

ಪ್ರವಾಸಿಗರ ಮೇಲೆ
ಸರಕಾರದ ನಿಗಾ
ಕೇಂದ್ರ ಸರಕಾರ ಕೊರೊನಾ ಸೋಂಕಿನ ಕುರಿತು ವಿಶೇಷ ನಿಗಾ ವಹಿಸಿದೆ. ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಮೀನುಗಾರಿಕೆ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ದೊಡ್ಡಣಗುಡ್ಡೆಯ ನಿವಾಸಿ ಕೃಷ್ಣರಾಜ ಪುರಾಣಿಕರು ಬಂದ ತತ್‌ಕ್ಷಣವೇ ಆರೋಗ್ಯ ಇಲಾಖೆಯಿಂದ ವಿಚಾರಿಸಲಾಯಿತು. ಮೊದಲು ಅಂಗನವಾಡಿ ಕಾರ್ಯಕರ್ತೆ ದೂರವಾಣಿ ಮೂಲಕ ಮಾತನಾಡಿ ಹೋದ ಕಾರಣ ಕೇಳಿದರು. ಬಳಿಕ ಇಬ್ಬರು ಆಶಾ ಕಾರ್ಯಕರ್ತೆಯರು ಬಂದು ನಮೂನೆ ಪತ್ರವೊಂದನ್ನು ಕೊಟ್ಟು ಅದರಲ್ಲಿ ವಿವಿಧ ಮಾಹಿತಿ ಪಡೆದುಕೊಂಡರು. ನಾವು ಬರುವಾಗಲೂ ವಿಮಾನ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ಮಾಡಲಾಯಿತು. ಪೊಲೀಸ್‌ ಠಾಣೆ ಮೂಲಕ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ಬಂತು. ಮಗ ಆಸ್ಟ್ರೇಲಿಯಾದಲ್ಲಿದ್ದ ಕಾರಣ ಅಲ್ಲಿಗೆ ಹೋಗಿದ್ದೆ ಎಂದು ವಿವರಣೆ ನೀಡಿದೆ ಎಂದು ಪುರಾಣಿಕ್‌ ತಿಳಿಸಿದ್ದಾರೆ. ಹೀಗೆ ವಿದೇಶಗಳಿಂದ ಬರುವ ಪ್ರತಿಯೊಬ್ಬರ ಮೇಲೂ ಸರಕಾರದ ವ್ಯವಸ್ಥೆ ನಿಗಾ ವಹಿಸುತ್ತಿದೆ.

ಮೆಕ್ಕಾ, ಮದೀನಾಕ್ಕೂ
ಪ್ರವಾಸಿಗರ ಸಂಖ್ಯೆ ಕುಂಠಿತ
ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಿಂದ ಪ್ರತಿ ವರ್ಷ ಮೆಕ್ಕಾ, ಮದೀನಾ ಯಾತ್ರೆಗೆ ಸುಮಾರು 40 ಸಾವಿರ ಜನರು ಈ ಸೀಸನ್‌ನಲ್ಲಿ ಹೋಗುತ್ತಿದ್ದರು. ಈ ಬಾರಿ ಪ್ರವಾಸ ನಿಷೇಧಿಸಿದ ಪರಿಣಾಮ ಇಷ್ಟು ಜನರಿಗೆ ಹೋಗಲು ಸಾಧ್ಯವಾಗಿಲ್ಲ.
– ಕೆ.ಪಿ. ಇಬ್ರಾಹಿಂ, ಅಧ್ಯಕ್ಷರು, ಜಿಲ್ಲಾ ವಕ್ಫ್ ಮಂಡಳಿ ಸಲಹಾ ಸಮಿತಿ, ಉಡುಪಿ.

ಸಂಖ್ಯೆ ಇಳಿಮುಖ
ಪ್ರವಾಸಿಗರ ನಿಖರ ಲೆಕ್ಕ ಸಿಗುವುದಿಲ್ಲ. ಒಂದೂರಿನಿಂದ ಇನ್ನೊಂದೂರಿಗೆ ಹೋಗಿ ಬರುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕೊರೊನಾ ಭಯ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಬಹುದು.
-ಚಂದ್ರಶೇಖರ ನಾಯ್ಕ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಉಡುಪಿ ಜಿಲ್ಲೆ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next