ಹುನಗುಂದ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹು ಎಲ್ಲೆಡೆ ಚಾಚುತ್ತಿರುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 14 ದಿನಗಳವರೆಗೆ ಕೊರೊನಾ ಕರ್ಫ್ಯೂ ಮುಂದುವರಿಸಿದ್ದು, ಬುಧವಾರದಿಂದ ಮೇ 12ರವರೆಗೆ ಹುನಗುಂದ ತಾಲೂಕಿನ ಜನಜೀವನ ಸ್ತಬ್ಧಗೊಳ್ಳಲಿದೆ. ಅನಾವಶ್ಯಕವಾಗಿ ಜನರ ಹೊರಗಡೆ ಓಡಾಟ ಸಂಪೂರ್ಣ ನಿರ್ಬಂಧಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟು ಕಾಯುತ್ತಿದೆ.
ಅಗತ್ಯ ವಸ್ತುಗಳ ಖರೀದಿಗೆ ಕಾಲ ಮಿತಿ ನಿಗದಿ: 14 ದಿನಗಳ ಕೊರೊನಾ ಕರ್ಫ್ಯೂ ಅವಧಿಯಲ್ಲಿ ಬೆಳಗ್ಗೆ 6ಗಂಟೆಯಿಂದ 10 ಗಂಟೆಯವರೆಗೆ ಜನರಿಗೆ ಅವಶ್ಯವಿರುವ ಹಾಲು, ಹಣ್ಣು, ತರಕಾರಿ, ದಿನಸಿ ವಸ್ತುಗಳು, ಮಾಂಸ, ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ.
ಪ್ರತಿ ದಿನ ಆ ಅವಧಿಯಲ್ಲಿಯೇ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಮನೆ ಸೇರಬೇಕು. ನಂತರ ಔಷ ಧಿ, ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದಂತೆ ಎಲ್ಲ ಅಂಗಡಿ-ಮುಂಗಟ್ಟು ಸಂಪೂರ್ಣ ಬಂದ್ ಆಗಲಿವೆ. ಸಾರಿಗೆ ಸಂಚಾರ ಬಂದ್: ರೋಗ ನಿಯಂತ್ರಣಕ್ಕೆ ಜನರ ಅನಗತ್ಯ ಓಡಾಟವನ್ನು ನಿರ್ಬಂಧಿಸಲು ಸಾರಿಗೆ ಸಂಚಾರ ಬಂದ್ ಆಗಲಿದೆ.
ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಮಂಗಳವಾರ ರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದ್ದು, ಖಾಸಗಿ ವಾಹನಗಳ ಓಡಾಟಕ್ಕೂ ಬ್ರೇಕ್ ಹಾಕಲಾಗಿದೆ. ತುರ್ತು ಸಂದರ್ಭದಲ್ಲಿ ಮಾತ್ರ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಅಗತ್ಯ ಸೇವೆಗಳು ಲಭ್ಯ: ಆರೋಗ್ಯ ಸೇವೆ, ಮೆಡಿಕಲ್ ದಿನದ 24 ಗಂಟೆಯವರಗೆ ಸೇವೆ ಲಭ್ಯವಿದೆ. ಇನ್ನು ಕೃಷಿ, ಕೈಗಾರಿಕೆ, ಕಟ್ಟಡ ವಲಯಗಳಿಗೆ ವಿನಾಯಿತಿ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಆಟೋ, ಟ್ಯಾಕ್ಸಿ ಸೇರಿದಂತೆ ಕೆಲ ವಾಹನಗಳಿಗೆ ಅವಕಾಶ ನೀಡಲಾಗಿದೆ. ದೇವಸ್ಥಾನ ಮತ್ತು ಶಾಲಾ-ಕಾಲೇಜು ಬಂದ್: ದೇವಸ್ಥಾನ, ಮಠ, ಮಂದಿರ, ಮಸೀದಿ ತೆರೆಯುವಂತಿಲ್ಲ. ಶಾಲಾ-ಕಾಲೇಜು ಬಂದ್ ಮಾಡಲಾಗಿದೆ. ಇನ್ನು ಅಗತ್ಯ ಸರ್ಕಾರಿ ಕಚೇರಿ ಹೊರತುಪಡಿಸಿ ಉಳಿದೆಲ್ಲ ಸರ್ಕಾರಿ ಕಚೇರಿಗಳ ಬಾಗಿಲು ಮುಚ್ಚಲಾಗುವುದು.