ವರದಿ : ಭೈರೋಬಾ ಕಾಂಬಳೆ
ಬೆಳಗಾವಿ: ಕಳೆದ ವರ್ಷ ಲಾಕ್‌ಡೌನ್‌ದಿಂದಾಗಿ ತರಕಾರಿ ಬೆಲೆ ಕುಗ್ಗಿ ಸಂಕಷ್ಟಕ್ಕೀಡಾಗಿದ್ದ ರೈತರ ಬದುಕನ್ನು ಈ ವರ್ಷವೂ ಕೊರೊನಾ ಕರ್ಫ್ಯೂ ಕಸಿದುಕೊಂಡಿದೆ. ಇಂಥ ದಯನೀಯ ಸ್ಥಿತಿಯಲ್ಲಿರುವ ರೈತರ ಬದುಕಿಗೆ ಕರ್ಫ್ಯೂ ಕೊಳ್ಳೆ ಇಟ್ಟಿದೆ.
ಹೆಚ್ಚುತ್ತಿರುವ ಕೊರೊನಾ ಸೋಂಕಿತರಿಂದಾಗಿ ಇಡೀ ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಸರ್ಕಾರ ಕಳೆದ ಒಂದು ವಾರದಿಂದ ವಿ ಧಿಸಿರುವ ಕೊರೊನಾ ಕರ್ಫ್ಯೂದಿಂದಾಗಿ ರೈತರು ಕಂಗಾಲಾಗಿದ್ದಾರೆ. ದಿಢೀರ್ ವಿಧಿ ಸಿರುವ ನಿರ್ಬಂಧದಿಂದಾಗಿ ತೋಟಗಾರಿಕೆ ಬೆಳೆಗಳಾದ ಹೂ, ಹಣ್ಣು, ತರಕಾರಿ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಸತತ ನಷ್ಟ ಅನುಭವಿಸುತ್ತಿರುವ ರೈತರನ್ನು ಈ ವರ್ಷವೂ ಕಂಗಾಲಾಗಿಸಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದ್ದರಿಂದ ಮಾರಾಟಕ್ಕೆ ಹಾಗೂ ಖರೀದಿಗೆ ಸಮಯವೇ ಇಲ್ಲದಿರುವುದು ರೈತರು, ವರ್ತಕರನ್ನು ಚಿಂತೆಗೀಡು ಮಾಡಿದೆ.
ಬೆಳಗ್ಗೆ ಕೇವಲ ನಾಲ್ಕು ಗಂಟೆ ಅವ ಧಿಗೆ ಮಾತ್ರ ಮಾರಾಟ ಹಾಗೂ ಖರೀದಿಗೆ ಅವಕಾಶ ನೀಡಿದ್ದರಿಂದ ಬಹಳ ತೊಂದರೆ ಆಗುತ್ತಿದೆ. ಕೇವಲ ಚಿಲ್ಲರೆ ವ್ಯಾಪಾರಸ್ಥರು ಮಾತ್ರ ಖರೀದಿಗೆ ಬರುತ್ತಿರುವುದರಿಂದ ಹೋಲ್‌ಸೇಲ್ ವ್ಯಾಪಾರಸ್ಥರಿಗೆ ಸಮಯವೇ ಸಿಗುತ್ತಿಲ್ಲ. ಹೀಗಾಗಿ ಬಂದ ಕೃಷಿ ಉತ್ಪನ್ನವೆಲ್ಲ ಮಾರಾಟವಾಗದೇ ಉಳಿಯುತ್ತಿರುವುದು ಮಾರುಕಟ್ಟೆಯಲ್ಲಿ ದೊಡ್ಡ ಸಮಸ್ಯೆ ಆಗಿದೆ. ಗೋವಾ, ಮಹಾರಾಷ್ಟ್ರ, ಹೆ„ದ್ರಾಬಾದ್, ಗದಗ, ಶಿವಮೊಗ್ಗ, ಕೊಪ್ಪಳ, ದಾವಣಗೆರೆ ಸೇರಿದಂತೆ ವಿವಿಧ ಕಡೆಗೆ ಬೆಳಗಾವಿ ಮಾರುಕಟ್ಟೆಯಿಂದ ತರಕಾರಿ ಹೋಗುತ್ತದೆ. ಸದ್ಯ ಗೋವಾ, ಮಹಾರಾಷ್ಟ್ರ ಸಂಪೂರ್ಣ ಬಂದ್ ಆಗಿದ್ದರಿಂದ ತರಕಾರಿ ಮಾರಾಟ ಮಾಡುವುದಾದರೆ ಎಲ್ಲಿಗೆ ಎಂಬ ಚಿಂತೆ ವರ್ತಕರನ್ನು ಕಾಡಿದರೆ, ಬೆಳೆದ ಕೃಷಿ ಉತ್ಪನ್ನಗಳನ್ನು ಖರೀದಿಸುವವರೇ ಇಲ್ಲದಿದ್ದರೆ ಮಾರಾಟ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಹೀಗಾಗಿ ಪ್ರತಿ ನಿತ್ಯ ಟನ್‌ಗಟ್ಟಲೇ ತರಕಾರಿ ಮಾರಾಟವಾಗದೇ ಕೊಳೆಯುತ್ತಿದೆ.
ರೈತರು ಹಳ್ಳಿಯಿಂದ ಮಾರುಕಟ್ಟೆಗೆ ಟೆಂಪೋ, ಟ್ರ್ಯಾಕ್ಟರ್, ಟಾಟಾ ಏಸ್ ವಾಹನ ತುಂಬಿಕೊಂಡು ತರಕಾರಿ ತರುತ್ತಿದ್ದಾರೆ. ಆದರೆ ದಲ್ಲಾಳಿಗಳು ಖರೀದಿಸಲು ಅಷ್ಟೊಂದು ಉತ್ಸಾಹ ತೋರುತ್ತಿಲ್ಲ. ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ರೈತರು ದಿಕ್ಕು ತೋಚದಂತಾಗಿದ್ದಾರೆ. ಕೋತಂಬರಿ, ಹಸಿ ಮೆಣಸಿನಕಾಯಿ, ಭೇಂಡಿ, ನವಲಕೋಲು, ಫ್ಲಾವರ್, ಗಜ್ಜರಿ, ಹೀರೇಕಾಯಿ, ಹಾಗಲಕಾಯಿ, ಬದನೆಕಾಯಿ, ಆಲೂಗಡ್ಡೆ, ಬಿನ್ಸ್, ಟೊಮೆಟೋ, ಮೂಲಂಗಿ ಸೇರಿದಂತೆ ಹೀಗೆ ಅನೇಕ ತರಕಾರಿ ದರ ಕುಸಿತಗೊಂಡಿದೆ.