Advertisement

ಮುದಗಲ್ಲ ಕಲ್ಲುಗಣಿಗೂ ಕೊರೊನಾ ಕರಿನೆರಳು!

11:36 PM Feb 28, 2020 | Lakshmi GovindaRaj |

ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ ಇತರ ದೇಶಗಳಿಗೆ ಗ್ರಾನೈಟ್‌ ಕಲ್ಲಿನ ರಫ್ತಿನಲ್ಲಿ ಕುಸಿತ ಕಂಡಿದ್ದು, ಕೆಲ ಕಲ್ಲು ಗಣಿಗಾರಿಕೆಗಳು ಸ್ಥಗಿತಗೊಂಡಿವೆ.

Advertisement

ಮುದಗಲ್ಲ ಭಾಗದಲ್ಲಿ ದೊರೆಯುವ ಶ್ವೇತ ಶಿಲೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ. ಮುದಗಲ್ಲ ಪಟ್ಟಣದಿಂದ ಕೇವಲ 2 ಕಿ.ಮೀ.ಅಂತರದಲ್ಲಿ ಸುಮಾರು 15ಕ್ಕೂ ಹೆಚ್ಚು ಗ್ರಾನೈಟ್‌ ಕ್ವಾರಿಗಳಿವೆ. ಸರ್ಕಾರಿ ಸ್ವಾಮ್ಯದ ಎಂಎಂಎಲ್‌ ಸೇರಿ ರಾಜ್ಯದ ವಿವಿಧ ಭಾಗದ ಶಾಸಕರ ಮಾಲೀಕತ್ವದಲ್ಲಿನ ಕಲ್ಲು ಗಣಿಗಾರಿಕೆಗಳು ಇಲ್ಲಿವೆ. ಅಮರ, ಗೋಲ್ಡನ್‌, ನೋಬಲ್‌, ಅಲ್ಲಮಪ್ರಭು, ಕಟ್ಟಿಮಾ ಗ್ರಾನೈಟ್‌ ಕಂಪನಿಗಳು ಶ್ವೇತ ಮತ್ತು ಬೂದು (ಗ್ರೇ) ಗ್ರಾನೈಟ್‌ ಶಿಲೆ ಹೊರತೆಗೆದು ಹೊರ ರಾಷ್ಟ್ರಗಳಿಗೆ ರಫ್ತು ಮಾಡಿ, ಕೋಟ್ಯಂತರ ರೂ.ಆದಾಯ ಗಳಿಸುತ್ತಿವೆ.

ಯಾವುದಕ್ಕೆ ಬೇಡಿಕೆ?: ಮುದಗಲ್ಲ ಭಾಗದಲ್ಲಿ ದೊರೆಯುವ ಎಂಡಿ-5 (ಮುದಗಲ್‌ ಗ್ರೇ), ಬೆಕ್ಕಿನ ಕಣ್ಣು (ಕ್ಯಾಟ್‌ ಸೆ) ಮತ್ತು ಹಿಮಾಲಯ ಮೂನ್‌ ಎಂಬ ಹೆಸರಿನ ಗ್ರಾನೈಟ್‌ಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಪ್ರತಿ ತಿಂಗಳು ತೈವಾನ್‌, ಚೀನಾ, ಜಪಾನ್‌ನಿಂದ ಖರೀದಿದಾರರು ಇಲ್ಲಿಗೆ ಆಗಮಿಸಿ ಸಾವಿರಾರು ಘನ ಮೀಟರ್‌ನಷ್ಟು ಗ್ರಾನೈಟ್‌ ಖರೀದಿಸುತ್ತಾರೆ. ಆದರೆ, ಚೀನಾದಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್‌ನಿಂದಾಗಿ ವಿದೇಶಿ ಖರೀದಿದಾರರು ಬಾರದೆ, ಕೋಟ್ಯಂತರ ರೂ. ಮೌಲ್ಯದ ಶಿಲೆಗಳು ಹಾಗೆಯೇ ಉಳಿದುಕೊಂಡಿವೆ. ಹೀಗಾಗಿ, ಕ್ವಾರಿ ಮಾಲಿಕರು ಕಾರ್ಮಿಕರಿಗೆ ರಜೆ ನೀಡಿ, ಕ್ವಾರಿ ಬಂದ್‌ ಮಾಡಿದ್ದಾರೆ.

ದುಸ್ಥಿತಿ?: ಕಳೆದ 6-7 ವರ್ಷಗಳ ಹಿಂದೆ ಮುದಗಲ್ಲ ಭಾಗದ ಗ್ರಾನೈಟ್‌ ಒಂದು ಘನ ಮೀಟರ್‌ಗೆ 1,000ದಿಂದ 1,100 ಡಾಲರ್‌ಗೆ ಮಾರಾಟವಾಗುತ್ತಿತ್ತು. ನಂತರ, ಮಾರುಕಟ್ಟೆಯಲ್ಲಿನ ಸ್ಪರ್ಧೆಯಿಂದಾಗಿ 800 ಡಾಲರ್‌ಗೆ ಕುಸಿತ ಕಂಡಿತ್ತು. ಆದರೆ, ಇತ್ತೀಚೆಗೆ ಗ್ರಾನೈಟ್‌ ವಿದೇಶಕ್ಕೆ ರಫ್ತಾಗುತ್ತಿಲ್ಲ. ಹೀಗಾಗಿ, ಸಾವಿರ ರೂ.ಗೂ ಮಾರಾಟವಾಗದೆ ನಷ್ಟ ಅನುಭವಿಸುವಂ ತಾ ಗಿದೆ ಎಂಬುದು ಗ್ರಾನೈಟ್‌ ಮಾಲಿಕರ ಅಳಲು. ಇನ್ನೊಂದೆಡೆ, ಗ್ರಾನೈಟ್‌ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೇರೆಡೆ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಒಟ್ಟಾರೆ ಚೀನಾದ ಕೊರೊನಾ ವೈರಸ್‌ನ ಕರಿನೆರಳು ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಬಿದ್ದಿದೆ.

ಒಂದು ಕಾಲದಲ್ಲಿ ಮುದಗಲ್ಲ ಗ್ರಾನೈಟ್‌ಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿತ್ತು. ಪ್ರತಿ ತಿಂಗಳು ನೂರಾರು ಘನ ಮೀಟರ್‌ನಷ್ಟು ಗ್ರಾನೈಟ್‌ ಕಲ್ಲನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ನಿಂದಾಗಿ ನಮ್ಮ ಕ್ವಾರಿಗಳನ್ನು ಬಂದ್‌ ಮಾಡುವಂತಾಗಿದೆ.
-ಹಸನಸಾಬ್‌ ತಕ್ಕೇದ್‌, ಹಳೆಪೇಟೆ ಗಣಿ ಮಾಲೀಕ, ಮುದಗಲ್ಲ

Advertisement

ಕಲ್ಲು ಕ್ವಾರಿಯಲ್ಲಿ ಅಳಿದುಳಿದ ಕಲ್ಲುಗಳನ್ನು ಒಡೆದು ದಿಡ್ಡು, ಸೈಜಗಲ್ಲುಗಳನ್ನಾಗಿ ಪರಿ ವರ್ತಿಸಿ, ಕಟ್ಟಡಕ್ಕೆ ಬಳಸಲು ಮಾರಾಟ ಮಾಡುವ ಮೂಲಕ ಇಲ್ಲಿನ ಕ್ವಾರಿಗಳಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರು ಜೀವನ ಸಾಗಿಸುತ್ತಿದ್ದರು. ಆದರೆ, ತಿಂಗಳಿಂದ ಕಲ್ಲು ಗಣಿಗಳು ಸ್ಥಗಿತಗೊಂಡಿದ್ದರಿಂದ ಕಲ್ಲುಗಳು ಸಿಗದೆ ಖಾಲಿ ಕೂಡುವಂತಾಗಿದೆ.
-ಖಾದರಸಾಬ್‌, ಹಳೆಪೇಟೆ ಕಲ್ಲು ಸೀಳುವ ಕಾರ್ಮಿಕ

* ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next