Advertisement
ಬೆಂಗಳೂರು: ಕೊರೊನಾ ಭೀತಿಯಿಂದ ಸರ್ಕಾರ ಒಂದು ವಾರ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಶನಿವಾರ ರಾಜ್ಯ ರಾಜಧಾನಿ ವಾರಾಂತ್ಯದ ಜೋಶ್ ಕಳೆದುಕೊಂಡಿತ್ತು. ರಾಜ್ಯ ಸರ್ಕಾರ ಒಂದು ವಾರ ನಗರದ ಎಲ್ಲ ಮಾಲ್‌ಗಳು, ಚಿತ್ರಮಂದಿರಗಳು, ನೈಟ್‌ಕ್ಲಬ್, ಪಬ್, ಪಾರ್ಕ್, ಈಜುಕೊಳ, ಬೇಸಿಗೆ ಶಿಬಿರ ಸೇರಿದಂತೆ ಜನ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಬಂದ್ ಘೋಷಿಸಿರುವ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಮಾಲ್‌ಗಳು, ಚಿತ್ರಮಂದಿರಗಳು,ಪಾರ್ಕ್ ಗಳು ಬಣಗುಡುತ್ತಿದ್ದವು.
Related Articles
Advertisement
ನಗರದಲ್ಲಿ ಕಾಲರಾ ಹರಡುವ ಆತಂಕವೂ ಇರುವುದರಿಂದ ಪಾಲಿಕೆ ರಸ್ತೆ ಬದಿ ಆಹಾರ ಮಾರಾಟ ನಿಷೇಧಿಸಿದೆ. ಅಲ್ಲದೆ, ಬಂದ್ ಹಿನ್ನೆಲೆಯಲ್ಲಿ ಶನಿವಾರ ನಗರದ ಹಲವು ಸಣ್ಣ ಹೋಟೆಲ್‌ಗಳು ಮುಚ್ಚಲ್ಪಟ್ಟಿದ್ದವು. ಇದು ದಿನಗೂಲಿ ಕಾರ್ಮಿಕರ ಮೇಲೆ ನೇರ ಪರಿಣಾಮ ಬೀರಿದ್ದು, ಈ ವರ್ಗದ ಜನ ಊಟ ಮಾಡುವುದಕ್ಕೆ ಅತ್ತ ಪ್ರತಿಷ್ಠಿತ ಹೋಟೆಲ್‌ಗಳತ್ತಲೂ ಹೋಗಲಾ ಗದೆ, ಇತ್ತ ಸಣ್ಣ ಹೋಟೆಲ್‌ಗಳು ಬಾಗಿಲು ತೆರೆ ಯದೇ ಪರದಾಡುವ ಸ್ಥಿತಿ ಶೋಚನೀಯವಾಗಿತ್ತು.
ದುರಸ್ತಿಯತ್ತ ಮಾಲೀಕರು: ಬಂದ್ ಅನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾಲ್, ಚಿತ್ರಮಂದಿರಗಳಲ್ಲಿನ ದುರಸ್ತಿ ಕೆಲಸ ಪೂರ್ಣಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಲ್ ಹಾಗೂ ಮಂದಿರಗಳ ಸಿಬ್ಬಂದಿ ತಿಳಿಸಿದರು. ಆದರೆ, ಇದಕ್ಕೆ ಪೊಲೀಸ್ ಸಿಬ್ಬಂದಿ ಅವಕಾಶ ನೀಡಲಿಲ್ಲ. ಮಲ್ಲೇಶ್ವರದ ಮಾಲ್‌ವೊಂದರ ಒಳಗಿದ್ದ ಕೆಲವು ಸಿಬ್ಬಂದಿಗಳನ್ನು ಪೊಲೀಸರು ಹೊರಕ್ಕೆ ಕರೆದುಕೊಂಡು ಬಂದರು. ಅಲ್ಲದೆ, ಮಾಲ್‌ನ ಒಳಗೆ ಯಾರನ್ನು ಬಿಡದಂತೆ ಸೂಚನೆ ನೀಡುತ್ತಿದ್ದ ದೃಶ್ಯಗಳು ನಗರದ ಹಲವು ಭಾಗದಲ್ಲಿ ಕಂಡುಬಂತು.
ಟ್ರಾಫಿಕ್ ಕಿರಿಕಿರಿಗೆ ಬ್ರೇಕ್: ವಾರಾಂತ್ಯದಲ್ಲಿ ಸದಾ ಸಂಚಾರ ದಟ್ಟಣೆಯಿಂದ ಕೂಡಿರುತ್ತಿದ್ದ ಮೆಜೆಸ್ಟಿಕ್, ಕೃಷ್ಣರಾಜೇಂದ್ರ ಮಾರುಕಟ್ಟೆ, ಜಯನಗರ, ಶಿವಾಜಿನಗರ, ಬ್ರಿಗೇಡ್ ರಸ್ತೆ, ಎಂ.ಜಿ ರಸ್ತೆ ಹಾಗೂ ರೇಸ್‌ಕೋರ್ಸ್ ಸೇರಿದಂತೆ ನಗರದ ಹಲವು ರಸ್ತೆಗಳು ಶನಿವಾರ ಬಣಗುಡುತ್ತಿದ್ದವು. ಹೀಗಾಗಿ, ಉಳಿದ ದಿನ 20ರಿಂದ 25 ನಿಮಿಷಕ್ಕೆ ತಲುಪಬಹುದಾದ ಸ್ಥಳಗಳನ್ನು 10ರಿಂದ 15ನಿಮಿಷದಲ್ಲಿ ತಲುಪುವಷ್ಟು ಸುಗಮ ಸಂಚಾರದ ವಾತಾವರಣ ನಿರ್ಮಾಣವಾಗಿತ್ತು.
ಗ್ಲಾಸ್‌ಬೇಡ… ಕಪ್‌ಕೊಡಿ: ಕೊರೊನಾ ಭೀತಿ ಸಾರ್ವಜನಿಕರನ್ನು ಎಷ್ಟರ ಮಟ್ಟಿಗೆ ಕಾಡುತ್ತಿದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ. ಸಾರ್ವಜನಿಕರು ನಿತ್ಯ ಕುಡಿಯುವ ಕಾಫಿ, ಟೀ, ನಿಂಬೆಹಣ್ಣು ಹಾಗೂ ಕಬ್ಬಿನಜ್ಯೂಸ್‌ನ ಗ್ಲಾಸ್‌ಗಳಿಗೆ ಬದಲಾಗಿ ಪೇಪರ್ ಕಪ್‌ನಲ್ಲೇ ಟೀ, ಜ್ಯೂಸ್ ನೀಡುವಂತೆ ಒತ್ತಾಯ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಬಟ್ಟೆ, ಕೈಗವಸುಗಳೇ ಮಾಸ್ಕ್ಗಳಾಗಿವೆ: ನಗರದಲ್ಲಿ ಜನ ಮಾಸ್ಕ್ ಹಾಕಿಕೊಂಡೇ ಹೊರ ಬರುವುದು ಕಡ್ಡಾಯ ಎನ್ನುವಂತಹ ವಾತಾವರಣ ನಗರದಲ್ಲಿ ನಿರ್ಮಾಣವಾಗಿದ್ದು, ಬಹುತೇಕರು ಮಾಸ್ಕ್ ಮೊರೆ ಹೋಗಿದ್ದಾರೆ. ಇನ್ನು ಕೆಲವರು ಸುರಕ್ಷತೆ ದೃಷ್ಟಿಯಿಂದ ಕೈಗವಸು ಮತ್ತು ಬಟ್ಟೆಗಳನ್ನೇ ಮಾಸ್ಕ್ ರೀತಿ ಮುಖಕ್ಕೆ ಮುಚ್ಚಿಕೊಂಡು ರಕ್ಷಣೆ ಪಡೆದುಕೊಳ್ಳುತ್ತಿರುವ ದೃಶ್ಯಗಳು ನಗರದಲ್ಲಿ ಕಾಣಸಿಗುತ್ತಿತ್ತು.
ಕೋರ್ಟ್ ಕಲಾಪ: ಇಂದು ನಿರ್ಧಾರ: “ಕೊರೊನಾ ವೈರಸ್’ ಭೀತಿ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳನ್ನು ನಡೆಸಬೇಕೋ- ಬೇಡವೋ ಎಂಬ ಬಗ್ಗೆ ಭಾನುವಾರ ನಡೆಯುಲಿರುವ ಹಿರಿಯ ನ್ಯಾಯಮೂರ್ತಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಕುರಿತು ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಅವರ ಮನವಿಗೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿ ಕೋರ್ಟ್ ಕಲಾಪಗಳ ಬಗ್ಗೆ ಹಿರಿಯ ನ್ಯಾಯಮೂರ್ತಿಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರಸೆ ನೀಡಿದ್ದಾರೆ ಎನ್ನಲಾಗಿದೆ.
ವಸ್ತುಸ್ಥಿತಿಯನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಡ ಲಾಗಿದೆ.ಅವರೂ ಸಹ ಸರ್ಕಾರದಿಂದ ಸಲಹೆ ಕೇಳಿ ಪತ್ರ ಬರೆದಿದ್ದಾರೆ. ಎಲ್ಲಾ ಅಂಶಗಳನ್ನು ಪರಿಗಣಿಸಿ ಭಾನುವಾರ ಹಿರಿಯ ನ್ಯಾಯಮೂರ್ತಿಗಳ ಸಭೆ ಕರೆಯಲಾಗಿದ್ದು, ಅದರಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಎ.ಪಿ. ರಂಗನಾಥ್ “ಉದಯವಾಣಿ’ಗೆ ತಿಳಿಸಿದ್ದಾರೆ.
ನಾಟಕ ಪ್ರದರ್ಶನಕ್ಕೆ ತಡೆ: ನೆರವಿಗೆ ಮನವಿಬೆಂಗಳೂರು: ಕೊರೊನಾ ವೈರಸ್ ತಡೆಯುವ ಉದ್ದೇಶದಿಂದ ಸರ್ಕಾರ ಒಂದುವಾರ ರಂಗಭೂಮಿ ಪ್ರದರ್ಶನಕ್ಕೂ ತಡೆ ನೀಡಿರುವ ಹಿನ್ನೆಲೆಯಲ್ಲಿ ರಂಗಭೂಮಿ ಪ್ರೇಕ್ಷಕರು ಸಹಕಾರ ನೀಡಬೇಕು ಎಂದು “ವಿಮೂವ್’ ರಂಗತಂಡದ ಸಂಸ್ಥಾಪಕ ಅಭಿಷೇಕ್ ಅಯ್ಯಂಗಾರ್ ಅವರು ಮನವಿ ಮಾಡಿದ್ದಾರೆ. ಈ ವಾರ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿರುವ ರಂಗಭೂಮಿ ಪ್ರೇಕ್ಷಕರು ಈ ಟಿಕೆಟ್ ದರವನ್ನು ಮರಳಿ ಕೇಳದೆ, ದೇಣಿಗೆ ರೂಪದಲ್ಲಿ ನೀಡುವ ಮೂಲಕ ಸಹಕಾರ ನೀಡಬೇಕು ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಶೌಚಾಲಯಗಳಲ್ಲಿ ಸ್ವಚ್ಛತೆ ಮರಿಚೀಕೆ: ನಗರದ ಸಾರ್ವಜನಿಕ ಶೌಚಾಲಯಗಳು ಸೇರಿದಂತೆ, ಪೆಟ್ರೋಲ್‌ಬಂಕ್ ಹಾಗೂ ಜನ ಹೆಚ್ಚು ಸೇರುವ ಪ್ರದೇಶಗಳ ಶೌಚಾಲಯಗಳಲ್ಲಿ ಯಾವುದೇ ಬ್ರ್ಯಾಂಡ್ ಸಾಬೂನು ಅಥವಾ ದ್ರಾವಣವನ್ನು ಕಡ್ಡಾಯವಾಗಿ ಇಡಬೇಕು ಎಂದು ಬಿಬಿಎಂಪಿ ಆಯುಕ್ತರಾದ ಬಿ.ಎಚ್.ಅನಿಲ್‌ಕುಮಾರ್ ಆದೇಶ ಮಾಡಿದ್ದಾರೆ. ಆದರೆ, ನಗರದ ಬಹುತೇಕ ಶೌಚಾಲಯಗಳು ದುರ್ನಾತ ಬೀರುತ್ತಿದ್ದು, ಸಾಬೂನು, ಲಿಕ್ವಿಡ್‌ನಂತಹ ಯಾವುದೇ ಸ್ಯಾನಿಟೈಸರ್ ಕಾಣಿಸಲಿಲ್ಲ. ಮದುವೆಗೆ ಬೆರಳೆಣಿಕೆ ಜನ: ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಶುಭರಾಮ್ ಕಲ್ಯಾಣ ಮಂಟಪದಲ್ಲಿ ಶನಿವಾರ ಸತ್ಯನಾರಾಯಣ್ ಕುಟುಂಬದ ಮದುವೆ ಸಮಾರಂಭ ನಡೆಯಿತು. ಮದುವೆಗೆ ಅಂದಾಜು 500ರಿಂದ 600ಜನ ಬರಬಹುದು ಎಂಬ ನಿರೀಕ್ಷೆಯಲ್ಲಿ ವಧು-ವರನ ಕುಟುಂಬಸ್ಥರು ಊಟ, ತಿಂಡಿಯ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮದುವೆ ಕೇವಲ 70-80 ಮಂದಿ ಮಾತ್ರ ಆಗಮಿಸಿದರು. ಇದಕ್ಕೆ ವಧು-ವರನ ಕುಟುಂಬಸ್ಥರು ಕಣ್ಣೀರು ಸುರಿಸಿದ ಘಟನೆಗೆ ಕಾರಣವಾಯಿತು. ಮದುವೆಗೆ 2018ರಲ್ಲಿ ಕಲ್ಯಾಣ ಮಂಟಪ ಬುಕ್ ಮಾಡಲಾಗಿತ್ತು. ಆದರೆ, ವರನ ತಂದೆ ಮೃತಪಟ್ಟಿದರಿಂದ ಮದುವೆ ಮುಂದೂಡಲಾಗಿತ್ತು. ಶನಿವಾರ ಮದುವೆಗೆ ನಿರ್ಧರಿಸಲಾಗಿತ್ತು. ಎರಡು ವರ್ಷದಿಂದ ಕಾದು ನಡೆಸಿದ ಮದುವೆಗೆ ಬೆರಳೆಣಿಕೆಯ ಮಂದಿ ಬಂದದಕ್ಕೆ ಮದುವೆಯ ಕಳೆಯೇ ಇಲ್ಲದಂತಾಗಿತ್ತು.