ಶ್ರೀರಂಗಪಟ್ಟಣ: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟಿದ್ದು, ಶ್ರೀರಂಗಪಟ್ಟಣ ತಾಲೂಕು ಪ್ರವಾಸಿ ತಾಣಗಳಿಂದ ಕೂಡಿರುವ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.
ಆಸ್ಪತ್ರೆಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ವಿದೇಶಿ ಪ್ರವಾಸಿಗರಿಂದ ಇದುವರೆಗೂ ಕೊರೊನಾ ವೈರಸ್ ಬಗ್ಗೆ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಕೆಆರ್‌ಎಸ್ ಬೃಂದಾವನ, ರಂಗನತಿಟ್ಟು ಪಕ್ಷಿಧಾಮ, ಟಿಪ್ಪು ಬೇಸಿಗೆ ಅರಮನೆ (ದರಿಯಾದೌಲತ್ ಭಾಗ್) ಗುಂಬಸ್ ಸೇರಿದಂತೆ ಇತರ ಪ್ರವಾಸಿ ತಾಣ ಗಳಲ್ಲಿ ವಿದೇಶಿ ಪ್ರವಾಸಿಗರ ತಪಾಸಣೆಗೆ ತಾಲೂಕು ಆಸ್ಪತ್ರೆ ಸಿಬ್ಬಂದಿ ನೇಮಕ ಮಾಡಿದೆ. ಪ್ರವಾಸಿಗರೂ ಮುಂಜಾಗ್ರತೆಯಿಂದ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಮಾಸ್ಕ್ ಧರಿಸಿಯೇ ಬರುತ್ತಿದ್ದಾರೆ.
ಮುನ್ನೆಚ್ಚರಿಕೆ: ವಿದೇಶೀ ಯರನ್ನು ಆಯಾ ವಿಮಾನ ನಿಲ್ದಾಣಗಳಲ್ಲಿಯೇ ಮುನ್ನೆಚ್ಚರಿಕೆ ವಹಿಸಿ ತಪಾಸಣೆ ಮಾಡಲಾಗುತ್ತಿದೆ. ಆದರೂ ಪ್ರವಾಸಿ ತಾಣಗಳಲ್ಲಿ ಆರೋಗ್ಯ ಇಲಾಖೆ ಪ್ರವಾಸಿಗರ ಮೇಲೆ ನಿಗಾ ವಹಿಸಿದೆ. ಆಯಾ ಪ್ರವಾಸಿ ಸ್ಥಳಗಳಲ್ಲಿ ಆಶಾ ಕಾರ್ಯಕರ್ತರು, ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಸಂಚಾರ ವಾಹನಗಳಲ್ಲಿ ಕೆಮ್ಮು, ನೆಗಡಿ, ಶೀತ ಹಾಗೂ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳ ಅಥವಾ ಪ್ರವಾಸಿಗರ ಮೇಲೆ ತೀವ್ರನಿಗಾ ವಹಿಸಲಾಗಿದೆ.
ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವ ಮೂಲಕ ಮತ್ತು ಕೈಗಳನ್ನು ಆಗಿಂದಾಗ್ಗೆ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎಂದು ಪ್ರವಾಸಿಗರಲ್ಲಿ ಸೋಂಕು ಕುರಿತು ಜಾಗೃತಿ ಮೂಡಿಸಲು ಕರಪತ್ರಗಳು, ಭಿತ್ತಿ ಪತ್ರಗಳಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಎನ್.ಕೆ.ವೆಂಕಟೇಶ್ ತಿಳಿಸಿದ್ದಾರೆ.
ಸೋಂಕು ಕುರಿತು ವಿಶೇಷ ತರಬೇತಿ: ಶ್ರೀರಂಗಪಟ್ಟಣ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ಕೊರೊನಾ ಸೋಂಕು ಕುರಿತು ವಿಶೇಷ ತರಬೇತಿ ನೀಡಲಾಗಿದೆ. ಪ್ರತಿ ದಿನ ತಾಲೂಕಾದ್ಯಂತ ಮನೆಮನೆಗೆ ಭೇಟಿ ನೀಡಿ ಸೋಂಕು ಕುರಿತು ಜಾಗೃತಿ ಮೂಡಿಸಲು ಕರಪತ್ರಗಳು, ಭಿತ್ತಿ ಪತ್ರ ಗಳ ಮೂಲಕ ಸೋಂಕು ಕುರಿತು ಅರಿವು ಮೂಡಿಸಲಾಗುತ್ತಿದೆ. ಆಸ್ಪತ್ರೆ ಗಳಲ್ಲಿ ಔಷಧ ಮತ್ತು ಮಾಸ್ಕ್ಗಳನ್ನು ಅಗತ್ಯ ಪ್ರಮಾ ಣದಲ್ಲಿ ದಾಸ್ತಾನು ಇಡ ಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮಾರುತಿ ತಿಳಿಸಿದ್ದಾರೆ.
ಹಾಡುವ ಮೂಲಕ ಜಾಗೃತಿ : ಪ್ರವಾಸಿ ತಾಣಗಳ ಬಳಿ ಇರುವ ಶಾಲೆ, ಕಾಲೇಜು, ಅಂಗನವಾಡಿಗಳಲ್ಲಿ ಗುಂಪು ಸಭೆಗಳ ಮೂಲಕ ಕೊರೊನಾ ಸೋಂಕಿನ ಜಾಗೃತಿ ಮೂಡಿಸುವ ಹಾಡುಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೆಆರ್‌ಎಸ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕ ಸಲೀಂ ರಚಿಸಿ ಹಾಡಿರುವ ಕರೋನಾ ಕುರಿತ ಜಾಗೃತಿ ಗೀತೆ ರಚಿಸಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.