Advertisement

ಕೊರೊನಾ ಭಯ ಬೇಡ

04:25 PM Mar 08, 2020 | Naveen |

ಮಾನ್ವಿ: ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಭಯ ಬೇಡ. ಮುಂಜಾಗ್ರತಾ ಕ್ರಮ ಕೈಗೊಳ್ಳುವುದರಿಂದ ರೋಗದಿಂದ ದೂರ ಇರಬಹುದು ಎಂದು ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ತಹಶೀಲ್ದಾರ್‌ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊರೊನಾ ರೋಗದ ಬಗ್ಗೆ ವದಂತಿ ಹಬ್ಬಿಸಲಾಗುತ್ತಿದ್ದು, ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದರು.

ಪ್ರಾಣಿಯ ಮೂಲಕ ಮಾನವನಿಗೆ ಹರಡಿರುವ ಕೊರೊನಾ ವೈರಸ್‌, ಮಾನವನ ದೇಹ ಸೇರಿದ ಮೇಲೆ ಕೇವಲ ಒಂದು ಗಂಟೆಗಳ ಕಾಲ ಮಾತ್ರ ಜೀವಂತವಾಗಿರುತ್ತವೆ. ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ವೈರಸ್‌ನಿಂದ ಶ್ವಾಸಕೋಶ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ರೋಗಿ ಸೀನಿದಾಗ, ಕೆಮ್ಮಿದಾಗ, ಹಸ್ತ ಲಾಘವ ಮಾಡುವುದರ ಮೂಲಕ ಮತ್ತೂಬ್ಬರಿಗೆ ಹರಡುತ್ತದೆ. ಕೈ ಮತ್ತು ಕಾಲುಗಳನ್ನು ಸ್ವತ್ಛವಾಗಿ ಇಟ್ಟುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಆಗಾಗ ತೊಳೆಯುತ್ತಾ ಇರಬೇಕು. ನೀರು ಹೆಚ್ಚು ಕುಡಿಯಬೇಕು. ಹಣ್ಣು, ತರಕಾರಿ ಹೆಚ್ಚಾಗಿ ತಿನ್ನಬೇಕು. ಚೆನ್ನಾಗಿ ಕುದಿಸಿದ ಮಾಂಸವನ್ನು ಮಾತ್ರ ತಿನ್ನಬೇಕು. ಜನಸಂದಣಿ ಇರುವ ಜಾಗಗಳಿಗೆ ಹೋಗಬಾರದು. ಕೆಮ್ಮು, ನಗಡಿ ಬಂದಲ್ಲಿ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದ ಅವರು, ರಾಯಚೂರು ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಪ್ರಕರಣ ಕಂಡುಬಂದಿಲ್ಲ. ಆದರೂ ಜಿಲ್ಲಾ ಆಸ್ಪತ್ರೆ ಹಾಗೂ ನವೋದಯ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ತಹಶೀಲ್ದಾರ್‌ ಅಮರೇಶ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸುಭದ್ರಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next