Advertisement

ಕೊರೊನಾ ಆತಂಕ: ನಗರದ ರಸ್ತೆಗಳು ಖಾಲಿ-ಖಾಲಿ, ವ್ಯಾಪಾರ-ವಹಿವಾಟಿಗೆ ಭಾರೀ ಪೆಟ್ಟು

09:56 PM Mar 18, 2020 | mahesh |

ಮಹಾನಗರ: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ನಾಲ್ಕು ದಿನಗಳಿಂದ ನಗರದಲ್ಲಿ ಜನಸಂಖ್ಯೆ, ವಾಹನ ದಟ್ಟಣೆ ವಿರಳವಾಗಿದೆ. ಇದರಿಂದಾಗಿ ನಗರದ ವ್ಯಾಪಾರ-ವಹಿವಾಟಿಗೆ ದೊಡ್ಡ ಮಟ್ಟದ‌ಲ್ಲಿ ಪೆಟ್ಟು ಬಿದ್ದಿದೆ.

Advertisement

ನಗರದಲ್ಲಿರುವ ಮಾಲ್‌ಗ‌ಳು ನಾಲ್ಕು ದಿನಗಳಿಂದ ಬಂದ್‌ ಆಗಿದ್ದು, ಅಲ್ಲಿನ ಎಲ್ಲ ರೀತಿಯ ವ್ಯಾಪಾರ-ವ್ಯವಹಾರಗಳು ಮೊಟಕುಗೊಂಡಿವೆ. ಇನ್ನು, ಜಿಲ್ಲಾಡಳಿತದ ಆದೇಶದ ಅನ್ವಯ ಬೀದಿ ಬದಿ ವ್ಯಾಪಾರವೂ ಸ್ಥಗಿತಗೊಂಡಿದೆ. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಸಾರಲಾಗಿದ್ದು, ನಗರದ ರಸ್ತೆಗಳು ಖಾಲಿ ಖಾಲಿಯಾಗಿವೆ.

ಕೊರೊನಾ ಆತಂಕದ ಹಿನ್ನೆಲೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಜಾತ್ರೆ/ಉತ್ಸವಗಳಲ್ಲಿ ಕೇವಲ ಸಿಬಂದಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಉತ್ಸವಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಅದೇ ರೀತಿ ದೇವಸ್ಥಾನ, ಚರ್ಚ್‌, ಮಸೀದಿ ಒಳಗೊಂಡಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ. ಇದೇ ಕಾರಣಕ್ಕೆ ನಗರದಲ್ಲಿರುವ ಧಾರ್ಮಿಕ ಕ್ಷೇತ್ರಗಳಲ್ಲಿ ಬುಧವಾರ ಭಕ್ತರ ಸಂಖ್ಯೆ ಕೂಡ ಕಡಿಮೆ ಇತ್ತು. ಧಾರ್ಮಿಕ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಬೀಚ್‌ಗಳಿಗೆ ಈಗಾಗಲೇ ಪ್ರವೇಶ ನಿರ್ಬಂಧ ಮಾಡಲಾಗಿದೆ.

ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಈ ಬಗ್ಗೆ ದ.ಕ. ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಕರ್ನಕಟ್ಟೆ ಬಾಲಯೇಸು ಚರ್ಚ್‌ನಲ್ಲಿ ಪ್ರತೀ ಗುರುವಾರ ನಡೆಯುವ ನೊವೆನಾ ಪ್ರಾರ್ಥನ ವಿಧಿಗಳು, ಬಲಿಪೂಜೆಯನ್ನು ರದ್ದುಗೊಳಿಸಲಾಗಿದೆ.

ಪಾರ್ಕ್‌ಗಳಿಗೆ ಬೀಗ
ನಗರದ ಪ್ರಮುಖ ಪಾರ್ಕ್‌ ನಲ್ಲಿ ಒಂದಾದ ಕದ್ರಿ ಪಾರ್ಕ್‌ಗೆ ಕೊರೊನಾ ಆತಂಕದಿಂದಾಗಿ ಬೀಗ ಜಡಿಯಲಾಗಿದೆ. ಇನ್ನು, ಕದ್ರಿ ಜಿಂಕೆ ಉದ್ಯಾನ ಪ್ರವೇಶ, ಕಾರಂಜಿ ಶೋ ಕೂಡ ರದ್ದು ಮಾಡಲಾಗಿದೆ. ಕೆಲವು ಮಂದಿ ಸಾರ್ವಜನಿಕರು ಪಾರ್ಕ್‌ ಬಳಿ ಬಂದು, ಹಿಂದಿರುಗಿ ಹೋಗುತ್ತಿದ್ದರು. ಅದೇ ರೀತಿ ಕದ್ರಿ ಪಾರ್ಕ್‌ರಸ್ತೆಯಲ್ಲಿ ಬಳಿ ಇರುವ ಬೀದಿ ಬದಿ ವ್ಯಾಪಾರ ಕೂಡ ಸ್ಥಗಿತಗೊಂಡಿದ್ದು, ರಸ್ತೆ ಬಿಕೋ ಎನ್ನುತ್ತಿದೆ.

Advertisement

ಮಂಗಳಾದೇವಿ ಅನ್ನಸಂತರ್ಪಣೆ ತಾತ್ಕಾಲಿಕ ರದ್ದು
ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಆದೇಶ ದಂತೆ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರದ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ತಾತ್ಕಾಲಿಕ ವಾಗಿ ರದ್ದುಪಡಿಸಲಾಗಿದೆ. ವೈರಸ್‌ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕು ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next