Advertisement

ಕೊರೊನಾ ಆತಂಕ: ದ.ಕ., ಉಡುಪಿಯಲ್ಲಿ ಮುನ್ನೆಚ್ಚರಿಕೆ

02:15 AM Feb 03, 2020 | Sriram |

ಮಂಗಳೂರು/ಉಡುಪಿ: ಚೀನದಲ್ಲಿ ಕಾಣಿಸಿಕೊಂಡು, ಸದ್ಯ ಕೇರಳದಲ್ಲಿಯೂ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗದಲ್ಲಿರುವ ದ.ಕ. ಸಹಿತ ಉಡುಪಿ ಜಿಲ್ಲೆಯಲ್ಲಿಯೂ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

Advertisement

ದ.ಕ. ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ವಿದೇಶದಿಂದ ಬರುವವರು ಮತ್ತು ವಿದೇಶಕ್ಕೆ ವಿಶೇಷವಾಗಿ ಚೀನಕ್ಕೆ ತೆರಳುವ ಮತ್ತು ಅಲ್ಲಿಂದ ಬರುವವರು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚೀನದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾವುದೇ ವಿಮಾನ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಸದ್ಯಕ್ಕೆ ಏರ್‌ಪೋರ್ಟ್‌ನಲ್ಲಿ ಕೊರೋನಾ ಬಗ್ಗೆ ವಿಶೇಷ ತಪಾಸಣೆ ಇಲ್ಲ. ಆದರೆ, ದೇಶದ ಬೇರೆ ಕಡೆ ಕೊರೋನಾ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಭಿತ್ತಿಫಲಕಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಜತೆಗೆ, ವಿದೇಶದಿಂದ ಆಗಮಿಸುವ ಯಾವುದೇ ವ್ಯಕ್ತಿಯ ಬಗ್ಗೆ ಆರೋಗ್ಯದ ಕುರಿತಂತೆ ಸಂಶಯವಿದ್ದರೆ ತತ್‌ಕ್ಷಣವೇ ಆರೋಗ್ಯ ಇಲಾಖೆಗೆ ತಿಳಿಸುವಂತೆ ಏರ್‌ಪೋರ್ಟ್‌ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ.

ಆಸ್ಪತ್ರೆಗಳಿಗೆ ಸೂಚನೆ
“ಕೊರೋನಾ ವೈರಸ್‌ ಬಗ್ಗೆ ದ.ಕ. ಜಿಲ್ಲೆಯಲ್ಲಿ ಯಾವುದೇ ಭಯಪಡುವ ಅಗತ್ಯವಿಲ್ಲ. ಆದರೂ, ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಇದರ ಬಗ್ಗೆ ಜಾಗರೂಕರಾಗಿರುವಂತೆ ಮತ್ತು ರೋಗಿಗಳನ್ನು ಸರಿಯಾಗಿ ಗಮನಿಸುವಂತೆ ತಿಳಿಸಲಾಗಿದೆ’ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

ಉಡುಪಿ: ಕಟ್ಟೆಚ್ಚರ ಮುಂದುವರಿಕೆ
ಕೊರೊನಾ ವೈರಸ್‌ ಸೋಂಕು ತಡೆ ಮತ್ತು ನಿಯಂತ್ರಣ ಕುರಿತು ಜಿಲ್ಲೆಯಲ್ಲಿ ಕಟ್ಟೆಚ್ಚರ ಮುಂದುವರಿದಿದೆ. ವೈರಸ್‌ ಸೋಂಕು ಕುರಿತು ಯಾವುದೇ ಶಂಕಿತ ಪ್ರಕರಣಗಳು ಇದುವರೆಗೆ ಕಂಡು ಬಂದಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿ ತಿಳಿಸಿದೆ.

Advertisement

ಜಿಲ್ಲಾ ಸರ್ವೆಕ್ಷಣ ಘಟಕದ ಪ್ರಯೋಗ ಶಾಲೆಯಲ್ಲಿ ಶಂಕಿತ ರೋಗಿಗಳ ಥ್ರೋಟ್‌ ಸ್ವಾಬ್‌ ಮಾದರಿ ಸಂಗ್ರಹಣೆ, ಪ್ಯಾಕಿಂಗ್‌ ಮತ್ತು ಸಾಗಾಣಿಕೆ ಇತ್ಯಾದಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಆಸ್ಪತ್ರೆಗಳ ಸಿಬಂದಿ ಆಶಾ, ಅಂಗನವಾಡಿ ಕಾರ್ಯ ಕರ್ತೆಯರು ಜಾಗೃತಿ ಕರಪತ್ರಗಳನ್ನು ಹಂಚುತ್ತಿದ್ದಾರೆ.

5 ಹಾಸಿಗೆಯ ಪ್ರತ್ಯೇಕ ವಾರ್ಡ್‌
ಜಿಲ್ಲಾಸ್ಪತ್ರೆಯಲ್ಲಿ ಶಂಕಿತ ರೋಗಿಗಳನ್ನು ದಾಖಲು ಮಾಡಲು ಐದು ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್‌ ಮತ್ತು ವೆಂಟಿಲೇಟರ್‌ ಸಹಿತ ಎರಡು ಐಸಿಯುಗಳ ವ್ಯವಸ್ಥೆಗಳಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ 9 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್‌ ವ್ಯವಸ್ಥೆ ಹಾಗೂ ವೈಯಕ್ತಿಕ ರಕ್ಷಣ ಸಾಮಗ್ರಿಗಳನ್ನು ಸಿದ್ಧಪಡಿಸಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next