ಬೆಂಗಳೂರು: ಕೊರೊನಾ ಕುರಿತು ಜನರಲ್ಲಿರುವ ಭೀತಿಯನ್ನು ಬಂಡವಾಳ ಮಾಡಿಕೊಂಡು ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾಸ್ಕ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ
ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕೊರೊನಾ ಭೀತಿ ಹಿನ್ನೆಲೆ ಗುರುವಾರ
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ, ಕೊರೊನಾ ವೈರಸ್ ಕುರಿತು ಜನರ ಭೀತಿಯನ್ನು ಲಾಭವಾಗಿಸಿಕೊಳ್ಳಲು ಕೆಲ ಫಾರ್ಮಾಸಿಸ್ಟ್‌ಗಳು ಹಾಗು ಔಷಧ ವಿತರಕ ಕಂಪನಿಗಳು ಮಾಸ್ಕ್ ಕೊರತೆ ಸೃಷ್ಟಿಸಿ, ಹಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಯಾರಾದರೂ ಎಂಆರ್‌ಪಿಗಿಂತ ಹೆಚ್ಚು ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿದ್ದರೆ ಸಾರ್ವಜನಿಕರು ಆರೋಗ್ಯವಾಣಿ 104ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಇತ್ತೀಚೆಗೆ ಯಾರಾದರು ವಿದೇಶಕ್ಕೆ ಹೋಗಿ ಬಂದಿದ್ದರೆ ಅವರು ವಿದೇಶದಿಂದ ಬಂದ 14 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು. ಆ ಬಳಿಕ ಒಮ್ಮೆ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಂದು ಇತರರೊಡನೆ ಬೆರೆಯಬೇಕು. ಶಂಕಿತರು, ಸೋಂಕಿತರು ಹಾಗೂ ಅವರ ಒಡನಾಟ ಹೊಂದಿರುವವರು ಮಾತ್ರ ಎನ್ 95 ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಉಳಿದಂತೆ ಸಾಮಾನ್ಯರು ಮೂರು ಪದರಗಳ ಸರ್ಜಿಕಲ್ ಮಾಸ್ಕ್ ಬಳಸಿದರೆ ಸಾಕು. ಇದರ ಜತೆಗೆ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಸದ್ಯ ಎಲ್ಲಿಯೂ ಮಾಸ್ಕ್ ಕೊರತೆ ಇಲ್ಲ. 4 ಲಕ್ಷ ಸರ್ಜಿಕಲ್ ಮಾಸ್ಕ್ ಹಾಗೂ 40 ಸಾವಿರ ಎನ್-95 ಮಾಸ್ಕ್ಗಳು ಲಭ್ಯವಿದೆ. ಆದರೆ, ಪರಿಸ್ಥಿತಿ ಲಾಭ ಪಡೆದು ಮಾಸ್ಕ್ಗಳಿಗೆ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ತಿಳಿದುಬಂದಿದೆ. ಅಂತಹ ವ್ಯಕ್ತಿಗಳ ವಿರುದ್ಧ ಸಾರ್ವಜನಿಕರು ನಿರಾತಂಕವಾಗಿ ದೂರು ನೀಡಬೇಕು ಎಂದರು.
ಐದು ಮಂದಿ ಶಂಕಿತರು ಆಸ್ಪತ್ರೆಯಲ್ಲಿ ನಿಗಾ: ಕೊರೊನಾ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ವಿದೇಶದಿಂದ ಬಂದ ಐದು ಮಂದಿಯನ್ನು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿಕೊಂಡು ನಿಗಾವಹಿಸಲಾಗಿದೆ. ಬೆಂಗಳೂರಿನ ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ಮೂವರು, ಬೀದರ್ ಹಾಗೂ ಉಡುಪಿಯಲ್ಲಿ ತಲಾ ಒಬ್ಬ ಸೇರಿದಂತೆ ಐದು ಮಂದಿ ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ ಇರಾನಿ ಮೂಲ ವ್ಯಕ್ತಿಯ ಕೊರೊನಾ ಸೋಂಕು ವರದಿ ನೆಗೆಟಿವ್ ಬಂದಿದೆ. ಬೀದರ್, ಉಡುಪಿ ಸರ್ಕಾರಿ ಆಸ್ಪತ್ರೆಗಳ ಶಂಕಿತರ ರಕ್ತ ಮಾದರಿಯನ್ನು ಬೆಂಗಳೂರಿನ ಎನ್‌ಐವಿ ಕೇಂದ್ರಕ್ಕೆ ಪರೀಕ್ಷೆಗೆಂದು ಕಳುಹಿಸಲಾಗಿದ್ದು, ಶುಕ್ರವಾರ ವರದಿಗಳು ಬರಲಿವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.
ಸೋಂಕಿತರಿಗೆ ರಜೆ ನೀಡುವಂತೆ ಸುತ್ತೋಲೆ : ಕಾರ್ಮಿಕ ಹಾಗೂ ಉದ್ಯೋಗಿ ಕೊರೊನಾ ವೈರಸ್ ಸೋಂಕಿಗೆ ಒಳಗಾದಲ್ಲಿ ಅವರಿಗೆ 28 ದಿನಗಳ ವೇತನ ಸಹಿತ ರಜೆ ನೀಡುವಂತೆ ರಾಜ್ಯ ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ. ಕೊರೊನಾ ಸೋಂಕಿತ ವ್ಯಕ್ತಿಗೆ 28 ದಿನಗಳ ರಜೆಯ ಅಗತ್ಯ ಇರುವುದರಿಂದ ಇಎಸ್‌ಐ ಕಾಯ್ದೆ ಅನ್ವಯವಾಗುವ ಸಂಸ್ಥೆಗಳ ಕಾರ್ಮಿಕರು ಹತ್ತಿರದ ಇಎಸ್‌ಐ ಔಷಧಾಲಯ ಅಥವಾ ಆಸ್ಪತ್ರೆಗಳಿಗೆ ತೆರಳಿ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಇನ್ನು ಇಎಸ್‌ಐ ವೈದ್ಯಾಧಿಕಾರಿಗಳು ತುರ್ತು ಪರಿಶೀಲನೆ ನಡೆಸಿ ಈ ಸೋಂಕಿತರಿಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಿದೆ. ಪ್ರಮಾಣ ಪತ್ರ ಹೊಂದಿರುವ ಕಾರ್ಮಿಕ ಅಥವಾ ಉದ್ಯೋಗಿಗೆ ಸಂಸ್ಥೆಯ ಆಡಳಿತ ವರ್ಗ ತಕ್ಷಣದಿಂದ 28 ದಿನಗಳ ವೇತನ ಸಹಿತ ರಜೆಯನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು. ಇಎಸ್‌ಐ ಕಾಯ್ದೆ ಅನ್ವಯವಾಗದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ವೈರಸ್ ತಗುಲಿದಲ್ಲಿ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಲಂ 15 (3) ಅನ್ವಯ 28 ದಿನಗಳ ವೇತನಸಹಿತ ಅನಾರೋಗ್ಯ ರಜೆ ಮತ್ತು ಇತರೆ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಕಾರ್ಮಿಕ ಇಲಾಖೆಯ ಉಪ ಕಾರ್ಯದರ್ಶಿ ಸಂಧ್ಯಾ ಎಲ್. ನಾಯಕ್ ತಿಳಿಸಿದ್ದಾರೆ.