ಸಿರುಗುಪ್ಪ: ತಾಲೂಕಿನಲ್ಲಿ ರೈತರು ಬೆಳೆದಿರುವ ಜೋಳವನ್ನು ಖರೀದಿಸಲು ನಗರದ ಎಪಿಎಂಸಿ ಆವರಣದಲ್ಲಿ ತೆರೆದಿರುವ ಜೋಳ ಖರೀದಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಕಳೆದ ಒಂದು ವಾರದಿಂದ ಜೋಳ ಮಾರಾಟ ಮಾಡಲು ಬಂದ ರೈತರು ಖರೀದಿ ಕೇಂದ್ರದ ಮುಂದೆ ಸರ್ವರ್ ಬರುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಾ ಕುಳಿತು ಸುಸ್ತಾಗುತ್ತಿದ್ದಾರೆ ಹೊರತು ಸರ್ವರ್ ಮಾತ್ರ ಬರುತ್ತಿಲ್ಲ.
ನಗರದಲ್ಲಿ ಜನವರಿ 24ರಿಂದ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಮಾರ್ಚ್ 20ರಿಂದ ಜೋಳ ಖರೀದಿ ಕಾರ್ಯ ಆರಂಭವಾಗಿದ್ದು, ಮಾರ್ಚ್ 31ರ ವರೆಗೆ ರೈತರು ತಮ್ಮ ಜೋಳವನ್ನು ಮಾರಾಟ ಮಾಡಲು ಸರ್ಕಾರ ಅವಕಾಶ ನೀಡಿದೆ. ಆದರೆ ಮಾರ್ಚ್ 22ರಿಂದ ಖರೀದಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆ ಉಂಟಾಗಿರುವುದರಿಂದ ಜೋಳ ಮಾರಾಟವಾಗದೆ, ರೈತರು ಖರೀದಿ ಕೇಂದ್ರದ ಮುಂದೆಯೇ ಬೆಳಗಿನಿಂದ ಸಂಜೆಯವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಸುಮಾರು 4860 ಹೆಕ್ಟರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಿದ್ದು, ಜೋಳ ಖರೀದಿಗಾಗಿ 3295 ರೈತರು ನೋಂದಣಿ ಮಾಡಿಸಿದ್ದು, 1,29,220.76 ಕ್ವಿಂಟಾಲ್ ಜೋಳ ಖರೀದಿಸುವ ಗುರಿಯನ್ನು ಹೊಂದಲಾಗಿದೆ. 33611.50 ಕ್ವಿಂಟಲ್ ಜೋಳವನ್ನು ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಸುಮಾರು 800ಕ್ಕೂ ಹೆಚ್ಚು ರೈತರು ಜೋಳ ಖರೀದಿ ಕೇಂದ್ರದ ಮುಂದೆ ಜೋಳ ಮಾರಾಟವು ಇರುವ ಕೆಲಸ ಕಾರ್ಯಗಳನ್ನು ಬದಿಗೊತ್ತಿ ರೈತರು ಖರೀದಿ ಕೇಂದ್ರಕ್ಕೆ ಬರುತ್ತಿದ್ದಾರೆ. ಆದರೆ ಸರ್ವರ್ ಇಂದು ಬರುತ್ತದೆ, ನಾಳೆ ಬರುತ್ತದೆ, ಸರ್ವರ್ ನಮ್ಮ ಕೈಯಲ್ಲಿಲ್ಲ ಎಂದು ಅ ಧಿಕಾರಿಗಳು ಸಬೂಬು ಹೇಳುತ್ತಾ ರೈತರನ್ನು ಸಾಗಹಾಕುತ್ತಿದ್ದಾರೆ. ಸರ್ವರ್ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿಯೇ ರೈತರು ಖರೀದಿ ಕೇಂದ್ರದ ಮುಂದೆ ಕಾದು ಕುಳಿತುಕೊಂಡಿದ್ದಾರೆ.
ನಾವು ಜೋಳದ ಬೆಳೆಯನ್ನು ಬೆಳೆದಿದ್ದು, ಎರಡು ಎಕರೆಗೆ ಇಪ್ಪತ್ತು ಕ್ವಿಂಟಲಿಗೂ ಅಧಿಕ ಇಳುವರಿ ಬಂದಿದ್ದು ಮಾರಾಟಕ್ಕೆ ಮಾರ್ಚ್ 31 ಕೊನೆಯದಿನವಾಗಿದೆ. ಆದರೆ ಮಾ. 22 ರಿಂದ ಸರ್ವರ್ ಬರುತ್ತಿಲ್ಲವೆಂದು ಅಧಿ ಕಾರಿಗಳು ಹೇಳುತ್ತಿದ್ದಾರೆ. ನಾವು ಇರುವ ಕೆಲಸ ಕಾರ್ಯಗಳನ್ನು ಬಿಟ್ಟು ಜೋಳ ಮಾರಾಟಕ್ಕಾಗಿ ಖರೀದಿ ಕೇಂದ್ರಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಸರ್ವರ್ ಸಮಸ್ಯೆಯನ್ನು ಪರಿಹರಿಸಿ ಜೋಳ ಖರೀದಿಗೆ ಅನುವು ಮಾಡಿಕೊಡಬೇಕು.
– ನೆಹರು, ಬಸಪ್ಪ, ರೈತ
ಮಾ. 22ರಿಂದ ಸರ್ವರ್ ಸಮಸ್ಯೆ ಉಂಟಾಗಿರುವುದರಿಂದ ಜೋಳ ಖರೀದಿ ಮಾಡಲು ಅಡಚಣೆ ಉಂಟಾಗಿದೆ. ಸರ್ವರ್ ಸಮಸ್ಯೆ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸುಮಾರು 800ಕ್ಕೂ ಹೆಚ್ಚು ರೈತರಿಂದ ಜೋಳ ಖರೀದಿ ಮಾಡಬೇಕಾಗಿದೆ.
–ಬಸವರಾಜ್, ಪಡಿತರ ಮತ್ತು ಆಹಾರ ನಾಗರಿಕ ಸರಬರಾಜು ಇಲಾಖೆಯ ಗೋದಾಮು ವ್ಯವಸ್ಥಾಪಕ
– ಆರ್. ಬಸವರೆಡ್ಡಿ ಕರೂರು